ನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಒಬ್ಬರು ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೊಳ್ಳಬೇಕು. ಕಳೆದ ಕೌನ್ಸಿಲ್‌ನಲ್ಲಿ 5 ವರ್ಷಗಳ ಅವಧಿಗೆ 5 ಮೇಯರ್ ಹಾಗೂ 5 ಉಪ ಮೇಯರ್‌ಗಳು ಆಯ್ಕೆಗೊಳ್ಳಬೇಕಾಗಿತ್ತು. ಆದರೆ, ಹಲವು ರಾಜಕೀಯ ಕಾರಣಗಳಿಗೊಸ್ಕರ ಕಳೆದ ಬಾರಿ ಕೇವಲ 4 ಅವಧಿಯಲ್ಲಿಯೇ 6 ಮೇಯರ್‌ಗಳು ಹಾಗೂ 5 ಉಪ ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿತು. 4ನೇ ಅವಧಿಯ ಮೇಯರ್ ಸ್ಥಾನಕ್ಕೆ ಸಕಾಲದಲ್ಲಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ 3ನೇ ಅವಧಿ ವಿಸ್ತರಣೆಗೊಂಡು ಮೂವರು ಮೇಯರ್‌ಗಳು ಅಧಿಕಾರ ಅನುಭವಿಸಿದರು. 3ನೇ ಅವಧಿ ಒಂದು ವರ್ಷಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ ವಿವಿಧ ಕಾರಣಗಳಿಗೋಸ್ಕರ ಮೂವರು ಮೇಯರ್‌ಗಳು (ರುಕ್ಮಿಣಿ ಮಾದೇಗೌಡ, ಅನ್ವರ್ ಬೇಗ್, ಸುನಂದ ಪಾಲನೇತ್ರ) ಒಟ್ಟಾರೆ 1 ವರ್ಷ 6 ತಿಂಗಳು ಅಧಿಕಾರ ನಡೆಸಿದರು. ಅಲ್ಲದೆ 2 ಹಾಗೂ 3ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಸಲು ಕ್ರಮವಾಗಿ 2 ಮತ್ತು 1 ತಿಂಗಳು ವಿಳಂಬವಾಯಿತು. ಹೀಗಾಗಿ 5ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಿದ್ದರೆ ಅವರಿಗೆ ಕೇವಲ 2 ತಿಂಗಳು ಮಾತ್ರ ಅಧಿಕಾರಾವಧಿ ದೊರೆಯುತಿತ್ತು. ಕೇವಲ ಎರಡು ತಿಂಗಳಿಗೊಸ್ಕರ ಚುನಾವಣೆ ನಡೆಸುವುದು ಸೂಕ್ತ ಅಲ್ಲ ಎಂದು ಸರ್ಕಾರ ಚುನಾವಣೆ ನಡೆಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ಕಳೆದ ಅವಧಿಯಲ್ಲಿ 4 ಅವಧಿಯಲ್ಲಿಯೇ 6 ಮೇಯರ್‌ಗಳನ್ನು ಕಂಡಿತ್ತು.