ಮೈಸೂರು: ಮಣ್ಣಿನ ಗಣಪತಿ ರೂಪಿಸಿದ ಮಕ್ಕಳು

ವಿದ್ಯಾರ್ಥಿಗಳೊಂದಿಗೆ ಸೇರಿಸಿಕೊಂಡು ಮಣ್ಣಿನ ಗಣಪತಿ ತಯಾರಿಸಿದ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ
ವಿದ್ಯಾರ್ಥಿಗಳೊಂದಿಗೆ ಸೇರಿಸಿಕೊಂಡು ಮಣ್ಣಿನ ಗಣಪತಿ ತಯಾರಿಸಿದ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ
Published on
ಮೈಸೂರು: ಗಣೇಶೋತ್ಸವದ ಸಂಭ್ರಮಕ್ಕೆ ಪರಿಸರ ಕಾಳಜಿಯ ಸ್ಪರ್ಶ ನೀಡುವ ಪ್ರಯತ್ನವಾಗಿ ನಗರ ಪಾಲಿಕೆ ವತಿಯಿಂದ ನಗರದ ಪುರಭವನ ಆವರಣದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಮಣ್ಣಿನ ಗಣಪತಿ ತಯಾರಿಸುವ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು.
ಮಣ್ಣಿನ ಮೂರ್ತಿಗಳ ಬಳಕೆಯ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಮಕ್ಕಳಿಗೆ ತಲುಪಿಸುವುದರ ಜತೆಗೆ, ಅವರಲ್ಲಿ ಪರಿಸರದ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ಬೆಳೆಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು. ನಗರದ 20 ಸರ್ಕಾರಿ ಶಾಲೆಗಳ ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಶಿಲ್ಪಿಗಳು ಹಾಗೂ ಶಿಕ್ಷಕರ ಮಾರ್ಗದರ್ಶ ನದಲ್ಲಿ ಮಕ್ಕಳು ಮಣ್ಣನ್ನು ಕೈಯಲ್ಲಿ ಹಿಡಿದು, ಅದಕ್ಕೆ ಗಣಪತಿಯ ರೂಪ ನೀಡುವ ಮೂಲಕ ಸೃಜನಶೀಲತೆ ಮೆರೆದರು. ತಾವು ರೂಪಿಸಿದ ಮಣ್ಣಿನ ಮೂರ್ತಿಗಳಿಗೆ ನೈಸರ್ಗಿಕ ಬಣ್ಣ ಹಚ್ಚಿ ಅಲಂಕರಿಸಿದ ಮಕ್ಕಳು, ತಮ್ಮದೇ ಕೈಯಿಂದ ತಯಾರಿಸಿದ ಗಣಪತಿಯನ್ನು ಮನೆಗೆ ಕೊಂಡೊಯ್ಯುವ ಸಂತಸವನ್ನು ಅನುಭವಿಸಿದರು.
ಗಣಪತಿ ಮೂರ್ತಿಯನ್ನು ತಯಾರಿಸುವುದು ಕೇವಲ ಕಲಿಕಾ ಚಟುವಟಿಕೆಯಾಗಿರದೆ, ಪರಿಸರ ಸ್ನೇಹಿ ಗಣೇಶೋತ್ಸವದ ಅಗತ್ಯವನ್ನು ಮಕ್ಕಳಿಗೆ ತಿಳಿಸುವ ಮಾಧ್ಯಮವಾಗಿತ್ತು. ಮಣ್ಣಿನಿಂದ ಮೂರ್ತಿ ತಯಾರಿಸಿ, ಅದಕ್ಕೆ ನೈಸರ್ಗಿಕ ಬಣ್ಣ ಬಳಸಿ, ಬಳಿಕ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಸರ್ಜಿಸುವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಿತು. ಮಕ್ಕಳು ಸ್ವತಃ ಮಣ್ಣನ್ನು ಬಳಸಿ ಗಣಪತಿ ಮೂರ್ತಿಯನ್ನು ರೂಪಿಸುತ್ತಿದ್ದ ದೃಶ್ಯ ಪುರಭವನ ಆವರಣದಲ್ಲಿ ಗಮನ ಸೆಳೆಯಿತು. ಶಿಲ್ಪಿಗಳು ಹಾಗೂ ಶಿಕ್ಷಕರು ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ತಮ್ಮ ಕಲ್ಪನೆಯಂತೆ ಮೂರ್ತಿಗೆ ರೂಪ ನೀಡಿದರು.
ಪಿಒಪಿ ಮೂರ್ತಿಗಳ ಬಳಕೆಗೆ ಕಡಿವಾಣ: ಈ ಸಂದರ್ಭ ಮಾತನಾಡಿದ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ನಗರದಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಪಿಒಪಿ ಮೂರ್ತಿಗಳ ಮಾರಾಟ ಕಂಡುಬಂದರೆ ಅವುಗಳನ್ನು ವಶಕ್ಕೆ ಪಡೆಯಲಾಗುವುದು. ಗಣೇಶೋತ್ಸವ ಸಮಿತಿಗಳು ಸಹ ಪಿಒಪಿ ಮೂರ್ತಿಗಳನ್ನು ಖರೀದಿಸದೆ ಮಣ್ಣಿನ ಮೂರ್ತಿಗಳನ್ನು ಬಳಸಬೇಕು ಎಂದು ಮನವಿ ಮಾಡಿದರು.
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರ ಆಯೋಜಿಸಲಾಗಿದೆ. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಇಂತಹ ಅಭಿರುಚಿ ಮೂಡಿಸಿದರೆ, ಮುಂದಿನ ದಿನಗಳಲ್ಲಿ ಅವರು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಮಕ್ಕಳು ತಾವೇ ತಯಾರಿಸಿದ ಮಣ್ಣಿನ ಗಣಪತಿ ಮೂರ್ತಿಗಳನ್ನು ಮನೆಗೆ ಕೊಂಡೊಯ್ದು ಪೂಜಿಸಲಿದ್ದಾರೆ. ಈ ರೀತಿಯಲ್ಲಿ ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಬಳಸಿದರೆ ಪರಿಸರ ಸಂರಕ್ಷಣೆಗೆ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಚ್ಛ ಗಣೇಶೋತ್ಸವಕ್ಕೆ ಆದ್ಯತೆ: ಗಣೇಶೋತ್ಸವದ ಸಂದರ್ಭದಲ್ಲಿ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ನಗರದಲ್ಲಿ ಎಲ್ಲೆಲ್ಲಿ ಗಣೇಶೋತ್ಸವದ ಮೂರ್ತಿ ಗಳನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂಬ ಮಾಹಿತಿಯನ್ನು ಪಡೆದು, ಆಯಾ ಗಣೇಶೋತ್ಸವ ಸಮಿತಿಗಳಿಗೆ ಸ್ವಚ್ಛತೆ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಪೂಜೆ ಹಾಗೂ ಪ್ರಸಾದ ವಿತರಣೆ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಆಯಾ ದಿನವೇ ವಿಲೇವಾರಿ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಗಣೇಶೋತ್ಸವದ ಸಂಭ್ರಮದ ಜತೆಗೆ ನಗರ ಸ್ವಚ್ಛತೆಯನ್ನೂ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದರು.
ವಾರ್ಡ್‌ಗಳಿಗೆ ಟ್ಯಾಂಕರ್ ವ್ಯವಸ್ಥೆ: ಮನೆಗಳಲ್ಲಿ ಪ್ರತಿಷ್ಠಾಪಿಸುವ ಮಣ್ಣಿನ ಗಣಪತಿ ಮೂರ್ತಿಗಳ ವಿಸರ್ಜನೆಗೂ ನಗರ ಪಾಲಿಕೆ ವ್ಯವಸ್ಥೆ ಮಾಡಲಿದೆ. ಪ್ರತಿ ವಾರ್ಡ್‌ಗೆ ನೀರಿನ ಟ್ಯಾಂಕರ್‌ಗಳನ್ನು ಕಳುಹಿಸಿಕೊಡಲಾಗುವುದು. ಸಾರ್ವಜನಿಕರು ಈ ಟ್ಯಾಂಕರ್‌ಗಳಲ್ಲಿ ಮಣ್ಣಿನ ಗಣಪತಿ ಮೂರ್ತಿಗಳನ್ನು ವಿಸರ್ಜಿಸಬಹುದು ಎಂದರು.
ನಗರದ ಸಾಕಷ್ಟು ಕಡೆಗಳಲ್ಲಿ ಫುಟ್‌ಪಾತ್ ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಫುಟ್‌ಪಾತ್ ವ್ಯಾಪಾರಿಗಳಿಗೆ ಬದಲಿ ಜಾಗವನ್ನು ಒದಗಿಸಿ ಅವರನ್ನು ಶಾಶ್ವತವಾಗಿ ಸ್ಥಳಾಂತರಿಸಲಾಗು ವುದು. ಇದಕ್ಕೆ ದಸರೆಯೊಳಗೆ ಮಾರ್ಗಸೂಚಿ ಪ್ರಕಟಿಸಿ, ಬದಲಿ ಜಾಗ ಒದಗಿಸಲು ಕ್ರಮ ವಹಿಸಲಾಗುವುದು.
ಎಂ.ಕೆ. ಸವಿತಾ, ನಗರ ಪಲಿಕೆ ಆಯುಕ್ತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net