ಮೈಸೂರು ಸ್ಫೋಟದಲ್ಲಿ ಮೃತಪಟ್ಟವರ ಪ್ರಾರ್ಥಿವ ಶರೀರ ಹಸ್ತಾಂತರ

ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ
ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ಮೃತದೇಹಗಳನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ
  • ಬಲೂನ್ ಮಾರಾಟಗಾರ ಸಲೀಂ ಮೃತದೇಹವನ್ನು ಉತ್ತರಪ್ರದೇಶದ ಸ್ವಗ್ರಾಮಕ್ಕೆ ರವಾನೆ
ಮೈಸೂರು: ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟಿರುವ ಮೂವರ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಶನಿವಾರ ಹಸ್ತಾಂತರಿಸಲಾಯಿತು.
ಅರಮನೆಯ ಜಯಮಾರ್ತಾಂಡ ದ್ವಾರ ಮುಂಭಾಗದ ಬಿ.ಎನ್.ರಸ್ತೆಯಲ್ಲಿ ಗುರುವಾರ ರಾತ್ರಿ ಬಲೂನಿಗೆ ತುಂಬುವ ಹೀಲಿಯಂ ಸಿಲಿಂಡರ್ ಸ್ಫೋಟದಿಂದ ಉತ್ತರ ಪ್ರದೇಶ ಮೂಲದ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ನಂಜನಗೂಡಿನ ಮಂಜುಳಾ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಲಕ್ಷ್ಮೀ ಶುಕ್ರವಾರ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಶವಾಗಾರದಲ್ಲಿ ಮಂಜುಳಾ ಹಾಗೂ ಲಕ್ಷ್ಮೀ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತದೇಹವನ್ನು ಒಪ್ಪಿಸಲಾಯಿತು.
ಮಂಜುಳಾ ಅವರ ಮೃತದೇಹವನ್ನು ಅವರ ಕುಟುಂಬದ ಸದಸ್ಯರು ನಂಜನಗೂಡಿಗೆ ಕೊಂಡೊಯ್ದು ಸಂಬಂಧಿಕರು, ಸ್ಥಳೀಯರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಿದರು. ಇನ್ನೂ, ಲಕ್ಷ್ಮೀ ಅವರ ಮೃತದೇಹವನ್ನು ಹೊಸಳ್ಳಿ ಸರ್ಕಲ್‌ಗೆ ಕೊಂಡೊಯ್ದು ಸಂಜೆ ವೇಳೆಗೆ ಬಂಧು-ಬಳಗದ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಉತ್ತರ ಪ್ರದೇಶಕ್ಕೆ ಪಾರ್ಥಿವ ಶವ ರವಾನೆ

ಬಲೂನ್ ಮಾರಾಟಗಾರ ಸಲೀಂ ಮೃತದೇಹವನ್ನು ಕುಟುಂಬಸ್ಥರು ಮತ್ತು ಸಂಬಂಧಿಕರು ಉತ್ತರಪ್ರದೇಶದ ಸ್ವಗ್ರಾಮಕ್ಕೆ ಕೊಂಡೊಯ್ದರು.
ಗುರುವಾರ ರಾತ್ರಿಯಿಂದ ಸಲೀಂ ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿತ್ತು. ಪ್ರಾಥಮಿಕ ತನಿಖೆ ಪೂರ್ಣಗೊಂಡ ಬಳಿಕ ಸಲೀಂ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಸಲೀಂನೊಂದಿಗೆ ನಾಲ್ವರು ಉತ್ತರ ಪ್ರದೇಶದಿಂದ ಮೈಸೂರಿಗೆ ಬಂದು ವಿವಿಧೆಡೆ ಬಲೂನ್ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಸ್ಫೋಟದ ಬಳಿಕ ಮೂವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಅನುಮಾನಾಸ್ಪದ ಮಾಹಿತಿ ಲಭ್ಯವಾಗದ ಕಾರಣ ಪೊಲೀಸರು ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟರು.
ಸಲೀಂ ಅವರು ಸುನ್ನಿ ಚೌಕದ ಬಳಿಯ ಲಾಡ್ಜ್‌ವೊಂದರಲ್ಲಿ ನಿಜಾಂ, ರಿಜ್ವ್ವಾನ್ ಮತ್ತು ರಾಜು ಜತೆಗೆ ನೆಲೆಸಿದ್ದರು.ಪ್ರತಿ ದಿನ ಲಾಡ್ಜ್‌ನ ಕೊಠಡಿಗೆ 100 ರೂ. ಬಾಡಿಗೆ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಮಗಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳಿ:

ಸ್ಫೋಟ ಘಟನೆಯಲ್ಲಿ ನಮ್ಮ ಲಕ್ಷ್ಮೀಯನ್ನು ಕಳೆದುಕೊಂಡಿದ್ದು, ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು.
ಲಕ್ಷ್ಮೀ ಅವರ ಮಗಳು ಡಿಂಪಲ್ ಹೆಸರಿನಲ್ಲಿ ಪರಿಹಾರದ ಮೊತ್ತವನ್ನು ಠೇವಣಿ ಇಡಬೇಕು. ವ್ಯಾಸಂಗದಲ್ಲಿ ಮುಂದೆ ಅವಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಎಂದು ಮೃತ ಲಕ್ಷ್ಮೀ ಅವರ ಸಂಬಂಧಿಕರು ಆಗ್ರಹಿಸಿದರು.

ತಂಗಿಯೊಂದಿಗೆ ಇಹಲೋಕ ತ್ಯಜಿಸಿದ ಅಣ್ಣ:

ಮೃತಪಟ್ಟಿರುವ ನಂಜನಗೂಡಿನ ಮಂಜುಳಾ ಅವರ ಸಹೋದರ ಹೃದಯಾಘಾತದಿಂದ ಅಸುನೀಗಿದ್ದಾರೆ. ನಗರದ ಕೆ.ಟಿ.ಸ್ಟ್ರೀಟ್‌ನಲ್ಲಿ ವಾಸವಿದ್ದ ಇವರ ಅಣ್ಣ ಪರಮೇಶ್(60) ಶುಕ್ರವಾರ ರಾತ್ರಿಯಷ್ಟೇ ಶವಾಗಾರದಲ್ಲಿ ಮಂಜುಳಾ ಅವರ ಮೃತದೇಹದ ಅಂತಿಮ ದರ್ಶನ ಪಡೆದಿದ್ದರು.
ತಂಗಿಯ ಸಾವಿನಿಂದ ನೊಂದುಕೊಂಡಿದ್ದ ಅವರಿಗೆ ಶನಿವಾರ ಬೆಳಗ್ಗೆ ಹೃದಯಾಘಾತವಾಗಿದೆ. ಮಂಜುಳಾ ಅಂತ್ಯಕ್ರಿಯೆ ಬಳಿಕ ಸಂಬಂಧಿಕರು ಮೈಸೂರಿಗೆ ಬಂದು ಪರಮೇಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net