ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ.ನೆರವು

 ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಮಂಜುಳಾ ಕುಟುಂಬಕ್ಕೆ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮುನಿಯಪ್ಪ 2 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದರು. ಮುಖಂಡ ನಿಂಗರಾಜ ಮಲ್ಲಾಡಿ, ಜೆ.ಮಹದೇವ, ಗ್ರಾಮದ ಆಡಳಿತಾಧಿಕಾರಿ ಶ್ರೀವಾಸ್ತವ್ ಇದ್ದರು.
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಮಂಜುಳಾ ಕುಟುಂಬಕ್ಕೆ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮುನಿಯಪ್ಪ 2 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದರು. ಮುಖಂಡ ನಿಂಗರಾಜ ಮಲ್ಲಾಡಿ, ಜೆ.ಮಹದೇವ, ಗ್ರಾಮದ ಆಡಳಿತಾಧಿಕಾರಿ ಶ್ರೀವಾಸ್ತವ್ ಇದ್ದರು.
Published on
ಹುಣಸೂರು : ವರ್ಷದ ಹಿಂದೆ ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಮರಣ ಹೊಂದಿದ್ದ ವ್ಯಕ್ತಿಗೆ ಶಾಸಕ ಜಿ.ಡಿ.ಹರೀಶ್‌ಗೌಡರ ಮಾನವೀಯ ಕಾಳಜಿಯೊಂದಿಗಿನ ಪ್ರಯತ್ನ ಮತ್ತು ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ನಿರಂತರ ಶ್ರಮದಿಂದಾಗಿ ಮೃತವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರೂ.ಗಳ ಪರಿಹಾರ ದೊರಕಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ನಿಂಗರಾಜ ಮಲ್ಲಾಡಿ ತಿಳಿಸಿದ್ದಾರೆ.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ರಾಜನಾಯಕ ವರ್ಷದ ಹಿಂದೆ ಗ್ರಾಮದ ತಂಬಾಕು ಹರಾಜು ಮಂಡಳಿ ಮುಂಭಾಗದ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಕಾರಿನ ಪತ್ತೆಗಾಗಿ ಪೊಲೀಸ್ ಇಲಾಖೆ ಸಾಕಷ್ಟು ಪ್ರಯತ್ನ ಪಟ್ಟಿದ್ದರೂ ಕಾರು ಪತ್ತೆಯಾಗಿರಲಿಲ್ಲ. ಇಲಾಖೆ ನ್ಯಾಯಾಲಯದಲ್ಲಿ ಸಿ ರಿಪೋರ್ಟ್ ಸಲ್ಲಿಸಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ಪತಿ ದುರಂತ ಸಾವಿನಿಂದ ಪತ್ನಿ ಮಂಜುಳಾ ಮತ್ತು ಕುಟುಂಬ ಕಂಗಾಲಾಗಿತ್ತು. ಈ ನಡುವೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮೃತವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗಲಿದೆ ಎಂಬ ಮಾಹಿತಿಯನ್ನಾಧರಿಸಿ ಎಸ್‌ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು. ನೊಂದ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲು ಕೋರಿದರು.
ಈ ಕುರಿತು ಮಾಹಿತಿ ಪಡೆದ ಶಾಸಕ ಹರೀಶ್‌ಗೌಡ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದರು. ಶಾಸಕ ಹರೀಶ್‌ಗೌಡ ಮತ್ತು ಇನ್‌ಸ್ಪೆಕ್ಟರ್ ಮುನಿಯಪ್ಪರ ಸತತ ಪ್ರಯತ್ನದ ಫಲವಾಗಿ ಗುರುವಾರ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ 2 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ಇನ್‌ಸ್ಪೆಕ್ಟರ್ ವಿತರಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net