ಹುಣ್ಣಿಮೆ ಪ್ರಯುಕ್ತ ಶ್ರೀ ತ್ರಿಪುರ ಸುಂದರಿ ಅಮ್ಮನವರಿಗೆ ಭಾನುವಾರ ಮುಂಜಾನೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆಯ ಸೇವೆಗಳು ಜರುಗಿದವು. ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಹುಣ್ಣಿಮೆ ಮಾಘ ಸ್ನಾನ ಮುಗಿಸಿ ಮಿಂದೆದ್ದ ಭಕ್ತರು ಶ್ರೀ ಮಹಾಲಕ್ಷ್ಮೀ ಸಮೇತ ಗುಂಜಾ ನರಸಿಂಹ ಸ್ವಾಮಿ ಹಾಗೂ ಇತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇಗುಲಕ್ಕೆ ತಂಡೋಪತಂಡವಾಗಿ ಬಂದ ಭಕ್ತರಿಂದ ದೇವಾಲಯ ತುಂಬಿ ತುಳುಕಿತ್ತು. ಇಲ್ಲಿನ ಶ್ರೀ ದೇಶೇಶ್ವರ ಸ್ವಾಮಿ, ಪಾರ್ವತಿ ದೇವಿ, ಶ್ರೀ ರಾಕಸಮ್ಮ ನವರ ದೇವಾಲಯಕ್ಕೆ ಭೇಟಿ ನೀಡಿ, ದರ್ಶನ ಪಡೆದರು.