ಪಿರಿಯಾಪಟ್ಟಣದ ಕುಳುವ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸತ್ಯನಾರಾಯಣ, ಮುತ್ತುರಾಜ್, ನಟರಾಜ್, ಮೋಹನ್, ನಾಗರಾಜ್, ಅಂಜನ್ ಕುಮಾರ್, ಸ್ವಾಮಿ, ತಮ್ಮಯ್ಯ ಇತರರು ಇದ್ದರು.
ಪಿರಿಯಾಪಟ್ಟಣ: ಗಣರಾಜ್ಯ ದಿನವನ್ನು ಸಂವಿಧಾನ ದಿನವಾಗಿ ಆಚರಿಸಬೇಕು ಎಂದು ತಾಲೂಕು ಕುಳುವ ಸಂಘದ ಅಧ್ಯಕ್ಷ ಸತ್ಯನಾರಾಯಣ ಅಗ್ರಹಿಸಿದರು.
ಪಟ್ಟಣದಲ್ಲಿರುವ ಕುಳುವ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂಘದ 2026ರ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವೇ ಶ್ರೇಷ್ಠ, ಪವಿತ್ರ ಗ್ರಂಥವಾಗಿದೆ. ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿಯನ್ನು ಹೊಂದಿರುವ ಮಾನವ ಸಂಕುಲವಿದ್ದು, ಈ ಎಲ್ಲ ಸಮುದಾಯಕ್ಕೂ ಸಮಾನತೆ ನೀಡಿದ ದಿನವೇ ಗಣರಾಜ್ಯೋತ್ಸವ ದಿನವಾಗಿದೆ ಎಂದರು.
ವಿವಿಧ ಪಕ್ಷಗಳ ನೇತೃತ್ವದ ಸರ್ಕಾರಗಳು ನಮ್ಮ ದೇಶವನ್ನು ಆಳ್ವಿಕೆ ಮಾಡಿದರೂ ಸಂವಿಧಾನದ ಮೂಲಕವೇ ಅಧಿಕಾರ ನಡೆಸಿವೆ ಎಂದರು.
ಸರ್ಕಾರಗಳು ಸಂವಿಧಾನದ ರಚನಕಾರರ ಶ್ರಮ ಮತ್ತು ಆಲೋಚನೆಗಳನ್ನು ಸಮರ್ಪಕವಾಗಿ ತಿಳಿಸುವಲ್ಲಿ ವಿಫಲವಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಕೆಲ ದಲಿತ ಸಂಘಟನೆಗಳು ಐಕ್ಯತಾ ಸಮಾವೇಶ ಆಯೋಜಿಸಿ, ಸಂವಿಧಾನ ಆಶಯಗಳನ್ನು ಈಡೇರಿಸುವುದಕ್ಕಾಗಿ ಗಣರಾಜ್ಯ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದರ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದವು. ಆದರೆ ಇಂದಿಗೂ ಆ ಬೇಡಿಕೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಸರ್ಕಾರವು ಮುಂದಿನ ದಿನಗಳಲ್ಲಿ ಗಣರಾಜ್ಯ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧಕ್ಷ ಮುತ್ತುರಾಜ್, ಪದಾಧಿಕಾರಿಗಳಾದ ನಟರಾಜ್, ಮೋಹನ್, ನಾಗರಾಜ್, ಅಂಜನ್ ಕುಮಾರ್, ಸ್ವಾಮಿ, ತಮ್ಮಯ್ಯ, ಶ್ರೀನಿವಾಸ್, ಸತೀಶ್, ಸಂತೋಷ, ಶಿವಣ್ಣ, ದೇವರಾಜ್, ವಿಶ್ವನಾಥ್, ಪ್ರಸನ್ನ ಕುಮಾರ್, ಜಯಣ್ಣ, ಹರೀಶ್, ಪವನ್, ನವ್ಯಶ್ರೀ, ವಿಶ್ವನಾಥ್ ಸೇರಿದಂತೆ ಇತರರು ಇದ್ದರು.