ಕ್ರಿಯಾಶೀಲ ಶಿಕ್ಷಕರಿಂದ ಮಕ್ಕಳ ಭವಿಷ್ಯ ಉಜ್ವಲ

ಬೆಟ್ಟದಪುರದ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ಚಾಣಕ್ಯ ಶಾಲೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಸ್.ಮರೀಗೌಡ, ಡಾ.ಭೀಮರಾಜು ಈರೇಗೌಡ, ಶ್ರೀಧರ್, ದೀಲಿಪ್, ಯಧುರಾಜ್, ಜಯಣ್ಣ, ಜಗದೀಶ್, ಮಹೇಶ್, ಹರೀಶ್, ತಿಮಯ್ಯ ಇದ್ದರು.
ಬೆಟ್ಟದಪುರದ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ಚಾಣಕ್ಯ ಶಾಲೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಸ್.ಮರೀಗೌಡ, ಡಾ.ಭೀಮರಾಜು ಈರೇಗೌಡ, ಶ್ರೀಧರ್, ದೀಲಿಪ್, ಯಧುರಾಜ್, ಜಯಣ್ಣ, ಜಗದೀಶ್, ಮಹೇಶ್, ಹರೀಶ್, ತಿಮಯ್ಯ ಇದ್ದರು.
Published on
ಬೆಟ್ಟದಪುರ: ಶಾಲೆಯಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಇರುವ ಶಿಕ್ಷಕರಿಗಿಂತ, ಸದಾ ಕ್ರಿಯಾಶೀಲರಾಗಿ ವಿದ್ಯಾರ್ಥಿಗಳಿಗೆ ಕನಸುಗಳನ್ನು ತುಂಬಿ ಸೇವೆ ಸಲ್ಲಿಸುವ ಶಿಕ್ಷಕರಿದ್ದರೆ ಮಕ್ಕಳು ಭವಿಷ್ಯ ರೂಪಿಸಿಕೊಂಡು ದೇಶ ಕಟ್ಟುತ್ತಾರೆ ಎಂದು ಮೈಸೂರಿನ ಜೆಎಸ್‌ಎಸ್ ಕಾಲೇಜು ಪ್ರಾಧ್ಯಾಪಕ ಡಾ.ಭೀಮರಾಜು ಈರೇಗೌಡ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಚಾಣಕ್ಯ ಶಾಲೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಶಿಕ್ಷಕನು ವಿದ್ಯಾರ್ಥಿಗಳಿಗೆ ಕ್ರಿಯಾಶೀಲ ಬೋಧನೆ ಮಾಡಬೇಕು. ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತ ಮಾಡದೆ, ಅವರ ಭವಿಷ್ಯಕ್ಕೆ ಅಡಿಪಾಯ ಹಾಕಿಕೊಡಬೇಕಿದೆ. ಮನೆಯಲ್ಲಿ ಪಾಲಕರು ಇತರ ಮಕ್ಕಳನ್ನು ಉದಾಹರಣೆ ನೀಡುವ ಮೂಲಕ ತಮ್ಮ ಮಕ್ಕಳಿಗೆ ಹೋಲಿಕೆ ಮಾಡುವ ಹವ್ಯಾಸ ದೂರ ಮಾಡಿ, ಬುದ್ಧಿ ಚಾತುರ್ಯದಿಂದ ಬೆಳಸಬೇಕು ಎಂದು ಸಲಹೆ ನೀಡಿದರು.
ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, ಚಾಣಕ್ಯ ವಿದ್ಯಾಸಂಸ್ಥೆಯು ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಶೇ.100 ಫಲಿತಾಂಶ ಪಡೆದಿದೆ. ಆರಂಭದಿಂದಲೂ ಗುಣಾತ್ಮಕ ಶಾಲೆಯಾಗುವ ಮೂಲಕ ಪಾಲಕರಲ್ಲಿ ಭರವಸೆಯ ಮನೆ ಕಟ್ಟಿದೆ. ಆಧುನಿಕ ಕಾಲದಲ್ಲಿ ಒಂದು ವಿದ್ಯಾಸಂಸ್ಥೆ ಕಟ್ಟಿ ಬೆಳೆಸುವುದು ಸಾಮಾನ್ಯದ ಮಾತಲ್ಲ. ಕರ್ತವ್ಯ ನಿರ್ವಹಿಸುವ ಮುಖ್ಯಶಿಕ್ಷಕರಿಂದ ಹಿಡಿದು ಶಿಕ್ಷಕರ ಬಳಗದ ಪರಿಶ್ರಮ ಸಾಕಷ್ಟು ಇದೆ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮದಿಂದ ನಿರಂತರ ಅಧ್ಯಯನ ನಡೆಸಬೇಕು ಎಂದರು.
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು, ವೇದಿಕೆಯ ಗಣ್ಯರು, ಸಂಸ್ಥೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ವೇದಿಕೆಯಲ್ಲಿ ಪುಟಾಣಿ ಮಕ್ಕಳಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಹಲವು ಚಿತ್ರಗೀತೆಗಳಿಗೆ ನೃತ್ಯ, ನಾಟಕ, ಅಭಿನಯಗಳನ್ನು ಪ್ರದರ್ಶನ ಮಾಡಿದರು. ಪ್ಲಾಸ್ಟಿಕ್ ಬಳಸದಂತೆ ಅರಿವು ನಾಟಕ, ಸೈನಿಕರನ್ನು ಸ್ಮರಿಸುವ ನೃತ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಎಲ್ಲರ ಮನಸೆಳೆದವು.
ಗ್ರಾಫೈಟ್ ಆಫ್ ಇಂಡಿಯಾದ ಇಂಜಿನಿಯರ್‌ಗಳಾದ ಶ್ರೀಧರ್, ದಿಲೀಪ್ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಯಧುರಾಜ್, ಉಪಾಧ್ಯಕ್ಷ ಎ.ಕೆ.ಜಯಣ್ಣ, ಕಾರ್ಯದರ್ಶಿ ಎಂ.ಬಿ.ಜಗದೀಶ್, ಸಹ ಕಾರ್ಯದರ್ಶಿ ಮಹೇಶ್, ನಿರ್ದೇಶಕ ಎಸ್.ಆರ್.ಹರೀಶ್, ಮುಖ್ಯಶಿಕ್ಷಕ ಎಚ್.ಕೆ.ತಿಮಯ್ಯ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net