ಆಲ್ರೌಂಡರ್‌ಗಳಿಗೆ ಹೆಚ್ಚಿನ ಅವಕಾಶ

ಮಹಾರಾಜ ಟ್ರೋಫಿ
ಮಹಾರಾಜ ಟ್ರೋಫಿ
Published on
ಮೈಸೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಜಾರಿಗೆ ತರಲಾಗಿರುವ ಇಂಪ್ಯಾಕ್ಟ್ ಪ್ಲೇಯರ್ ಮತ್ತು ಫ್ರೀ-ಹಿಟ್‌ನ ಹೊಸ ನಿಯಮದಿಂದಾಗಿ ಆಲ್ರೌಂಡರ್‌ಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಜತೆಗೆ ಆಲ್ರೌಂಡರ್‌ಗಳ ಮಹತ್ವವು ಗೊತ್ತಾಗುತ್ತದೆ ಎಂದು ಕೋಸ್ಟಲ್ ಕಿಂಗ್ ಮಂಗಳೂರು ತಂಡ ನಾಯಕ ಕರುಣ್ ನಾಯರ್ ತಿಳಿಸಿದರು.
ಮೈದಾನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಾಸ್‌ಗೂ ಮುನ್ನವೇ ತಂಡವನ್ನು ಪ್ರಕಟಿಸಬೇಕಿರುವುದರಿಂದ ಅಂತಿಮ 11ರ ಬಳಗದ ಆಯ್ಕೆಯ ಕುರಿತು ಭಿನ್ನವಾಗಿ ಯೋಚಿಸಲು ಇದು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಫ್ರೀ-ಹಿಟ್ ವೇಳೆ ಬ್ಯಾಟರ್‌ಗಳು ಕ್ಯಾಚ್ ಅಥವಾ ಬೌಲ್ಡ್ ಆದಲ್ಲಿ ರನ್ ನೀಡುವುದಿಲ್ಲ ಎಂಬ ಪರಿಷ್ಕೃತ ನಿಯಮದ ಬಗ್ಗೆ ಮಾತನಾಡಿದ ಅವರು, ಇದು ಬೌಲರ್‌ಗಳ ಶ್ರಮಕ್ಕೆ ಸಿಕ್ಕ ಗೌರವ. ಫ್ರೀ-ಹಿಟ್‌ನಲ್ಲೂ ರನ್ ಗಳಿಸಲು ಬ್ಯಾಟರ್‌ಗಳು ಚೆಂಡಿನ ಕಡೆಗೆ ಗಮನ ಹರಿಸಬೇಕಾಗುತ್ತದೆಯೇ ವಿನಃ ಔಟಾದರೂ ರನ್ ಸಿಗುತ್ತದೆ ಎಂಬ ಉದಾಸೀನತೆ ತೋರಲು ಸಾಧ್ಯವಿಲ್ಲ. ಇದು ಉತ್ತಮ ನಿಯಮ ಎಂದು ಶ್ಲಾಸಿದರು.
ಐಪಿಎಲ್ ಕ್ರಾಂತಿಯಿಂದಾಗಿ ಟಿ–-20 ಕ್ರಿಕೆಟ್‌ನಲ್ಲಿ ಆಟಗಾರರ ಮನಸ್ಥಿತಿ ಬದಲಾಗಿದ್ದು, ಹೆಚ್ಚು ಆಕ್ರಮಣಕಾರಿ ಹಾಗೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಮನೋಭಾವ ಮೂಡಿದೆ. ಐಪಿಎಲ್ ಹೊಸ ಪ್ರವೃತ್ತಿಯನ್ನು ಹುಟ್ಟುಹಾಕುತ್ತಿದೆ. ಆಟಗಾರರು ಹೊಸ ಆಲೋಚನೆಗಳೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಆದರೆ ಐಪಿಎಲ್‌ನ ಪಿಚ್‌ಗಳು ಮತ್ತು ಅಲ್ಲಿನ ಬೌಲರ್‌ಗಳ ವೇಗವೇ ಬೇರೆ ಇರುವುದರಿಂದ ಆ ಶೈಲಿಯನ್ನು ದೇಸಿ ಕ್ರಿಕೆಟ್‌ನಲ್ಲಿ ಸಂಪೂರ್ಣವಾಗಿ ಅನುಕರಿಸುವುದು ಕಷ್ಟ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net