ಎಚ್.ಡಿ.ಕೋಟೆ ತಾಲೂಕಿನ ಮಾಚನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಕಾರ್ಯಾಗಾರಕ್ಕೆ ಕೃಷಿ ತರಬೇತುದಾರ ಮಂಜುನಾಥ್ ಚಾಲನೆ ನೀಡಿದರು. ಬಿ.ಜೆ.ರಾಜು, ಭಾರತಿ, ಜಯಲಕ್ಷ್ಮೀ, ನಾರಾಯಣ, ಪುಟ್ಟಮ್ಮ ಇದ್ದರು.
ಎಚ್.ಡಿ.ಕೋಟೆ: ಕೃಷಿಯ ಜತೆ ಹೈನುಗಾರಿಕೆ ಅಳವಡಿಸಿಕೊಂಡು ಆದಾಯ ಗಳಿಸಬಹುದು ಎಂದು ಕೃಷಿ ತರಬೇತುದಾರ ಕೆ.ಬಿ ಮಂಜುನಾಥ್ ತಿಳಿಸಿದರು.
ತಾಲೂಕಿನ ಮಾಚನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಕೇವಲ ಕೃಷಿಯಲ್ಲಿ ಒಂದು ಬೆಳೆ ನಂಬಿಕೊಂಡು ವ್ಯವಸಾಯ ಮಾಡಿದರೆ ನಷ್ಟ ಅನುಭವಿಸುತ್ತದೆ. ಸಮಗ್ರ ಬೆಳೆಯನ್ನು ಅವಲಂಬಿಸಿದಾಗ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಆಗ ರೈತ ಲಾಭ ಕಾಣಲು ಸಾಧ್ಯ. ಅಲ್ಲದೆ ಕೃಷಿಯಲ್ಲಿ ಹಿಮ್ಮುಖವಾಗಿ ಹೋಗಲು ಅವಕಾಶ ಇರುವುದಿಲ್ಲ. ಹಾಗಾಗಿ ಸಮಗ್ರ ಸಾವಯವ ಕೃಷಿ ಮಾಡಿ ಎಂದು ಸಲಹೆ ನೀಡಿದರು.
ಹಸು ಸಾಕಾಣಿಕೆಯಲ್ಲಿ ತಳಿಗಳ ಆಯ್ಕೆ, ಪಶು ಆಹಾರಗಳ ಬಗ್ಗೆ ತಿಳಿದುಕೊಂಡು, ಹಸುಗಳಿಗೆ ಬರುವ ರೋಗಗಳ ಮುನ್ನೆಚ್ಚರಿಕೆ ಲಸಿಕೆಗಳನ್ನು ಹಾಕಿಸಿಕೊಳ್ಳುವುದು, ಕೊಟ್ಟಿಗೆ ಸ್ವಚ್ಛತೆಯಿಂದ ಕೂಡಿರಬೇಕು. ಆಗ ಮಾತ್ರ ಹೈನುಗಾರಿಕೆಯಲ್ಲಿ ಆದಾಯ ಗಳಿಸಬಹುದು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮೇಲ್ವಿಚಾರಕ ಬಿ.ಜೆ.ರಾಜು, ವಲಯ ಮೇಲ್ವಿಚಾರಕಿ ಭಾರತಿ, ಸೇವಾ ಪ್ರತಿನಿಧಿ ಜಯಲಕ್ಷ್ಮೀ, ಗ್ರಾಮಸ್ಥರಾದ ನಾರಾಯಣ, ಒಕ್ಕೂಟ ಪದಾಧಿಕಾರಿ ಪುಟ್ಟಮ್ಮ ಉಪಸ್ಥಿತರಿದ್ದರು.