ಸಾಮಾನ್ಯ ಕುಟುಂಬದಿಂದ ಬಂದು ದೇಶದ ಉಪಪ್ರಧಾನಿಯಾದ ಡಾ.ಬಾಬು ಜಗಜೀವನರಾಮ್ ಅವರಂತಹ ಅಸಾಮಾನ್ಯ ವ್ಯಕ್ತಿಗಳನ್ನು ನಮ್ಮ ಜೀವನದಲ್ಲಿ ಮಾದರಿ ವ್ಯಕ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ನಗರದ ಮಾನಸ ಗಂಗೋತ್ರಿಯ ಡಾ.ಬಾಬು ಜಗಜೀವನರಾಮ್ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಪರಿಶಿಷ್ಟ ಜಾತಿ/ಪಂಗಡದ ವಿಶೇಷ ಘಟಕದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ ಸಂವಿಧಾನದ ಪ್ರಸ್ತಾವನೆಯ ಆಶಯಗಳು ಮತ್ತು ಬಾಬು ಜಗಜೀವನರಾಮ್ ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮಾತ್ರ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿಯನ್ನು ಹೊಂದಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಡಾ.ಬಾಬು ಜಗಜೀವನರಾಮ್ ಅವರಾಗಿದ್ದಾರೆ. ಅವರು ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ. ಆದರೆ ಅವರು ಪಡೆದ ಶಿಕ್ಷಣ ಅವರನ್ನು ಅಸಾಮಾನ್ಯರನ್ನಾಗಿ ಮಾಡಿತು. ಇದರಿಂದ ಇಡೀ ದೇಶ ಅವರನ್ನು ಗುರುತಿಸಿತು. ಬಿಹಾರ ಈಗಲೂ ಹಿಂದುಳಿದ ರಾಜ್ಯ. ಬಿಹಾರದಲ್ಲಿ ಉನ್ನತ ಶಿಕ್ಷಣ ಪಡೆದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಕಠಿಣ ಶ್ರಮದಿಂದ ಓದುವ ಮೂಲಕ ತೇರ್ಗಡೆ ಹೊಂದುತ್ತಿದ್ದರು ಎಂದು ತಿಳಿಸಿದರು.
ಡಾ.ಬಾಬು ಜಗಜೀವನರಾಮ್ ಅವರ ಮಾತುಗಳು ಮದನ್‌ಮೋಹನ್ ಮಾಳವೀಯ ಅವರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಕೇವಲ ಓದಿದರೆ ಸಾಲದು ಸಾಮಾಜಿಕವಾಗಿ ಕೆಲಸ ಮಾಡಬೇಕೆಂಬ ಕಾರಣದಿಂದ ರಾಜಕೀಯಕ್ಕೆ ಡಾ.ಬಾಬು ಜಗಜೀವನರಾಮ್ ಬಂದರು. ಈ ಸಂದರ್ಭದಲ್ಲಿ ಅವರ ಜತೆ ಸುಭಾಷ್ ಚಂದ್ರಬೋಸ್ ಸೇರಿದಂತೆ ಅನೇಕ ಸಾಧಕರು ಇದ್ದರು. ಸಾಮಾನ್ಯ ವ್ಯಕ್ತಿ ಸಾಧಕ ವ್ಯಕ್ತಿಗಳ ಜತೆ ಹೋಗುವುದಕ್ಕೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಬದಲಾವಣೆ ತರಬೇಕಾದರೆ ಅಧಿಕಾರ ಇರಬೇಕು ಎಂದು ತಿಳಿದ ಬಾಬು ಜಗಜೀವನರಾಮ್ ಮುಂದೆ ರಾಜಕೀಯಕ್ಕೆ ಬಂದು, ನಂತರ ಅನೇಕ ಬದಲಾವಣೆಗಳನ್ನು ತಂದರು. ಕಾರ್ಮಿಕ ಸಚಿವರಾಗಿ, ರಕ್ಷಣಾ ಸಚಿವರಾಗಿ ಅನೇಕ ಜನಪರ ಹಾಗೂ ದೇಶದ ಪರ ದುಡಿದರು. ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ದೇಶ ಹಸಿವಿನಿಂದ ಇರಬಾರದೆಂದು ಹಸಿರು ಕ್ರಾಂತಿ ಉಂಟಾಗಲು ಕಾರಣರಾದರು. ಎಂದರು.
ಚಿಂತಕ ನಾ.ದಿವಾಕರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಬಾಬು ಜಗಜೀವನರಾಮ್ ಅವರ ಬಗ್ಗೆ ತಿಳಿದುಕೊಳ್ಳಬೇಕು. ಒಂದೇ ಒಂದು ಕಪ್ಪುಚುಕ್ಕೆ ಅವರ ವೈಯಕ್ತಿಕ ಜೀವನದಲ್ಲಿ ಹಾಗೂ ರಾಜಕೀಯ ಜೀವನದಲ್ಲಿ ಕಾಣಲು ಸಾಧ್ಯವಿಲ್ಲ. ಪ್ರಮುಖ ಸಚಿವ ಹುದ್ದೆಗಳನ್ನು ನಿಭಾಯಿಸಿ ಅವುಗಳಲ್ಲಿ ಅನೇಕ ಕ್ರಾಂತಿಕಾರಿ ತೀರ್ಮಾನಗಳನ್ನು ತೆಗೆದುಕೊಂಡಿದ್ದರು ಎಂದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಎಸ್.ಅನಿತಾ, ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವಿಶೇಷ ಘಟಕದ ಉಪ ಕುಲಸಚಿವ ಕೆ.ಎನ್.ಮಂಜುನಾಥ್, ಸಂದರ್ಶಕ ಪ್ರಾಧ್ಯಾಪಕ ಎಚ್.ಆರ್.ಭೀಮಾಶಂಕರ್ ಇದ್ದರು.