ಸಮಗ್ರ ಕ್ರಿಯಾಯೋಜನೆ ಸಲ್ಲಿಸಿ

* ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸೂಚನೆ * ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ
MLA G.T. Devegowda spoke at a meeting of Panchayat Development Officers (PDOs) held on Monday at the District Panchayat hall in the city. K.M. Maheshkumar, Krishna, Chikkanna, and Asif Iqbal Mohammed were among those present.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಿಡಿಒಗಳ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದರು. ಕೆ.ಎಂ.ಮಹೇಶ್‌ಕುಮಾರ್, ಕೃಷ್ಣ, ಚಿಕ್ಕಣ್ಣ, ಆಸಿಫ್ ಇಕ್ಬಾಲ್ ಮೊಹಮ್ಮದ್ ಇತರರಿದ್ದರು.
Published on: 

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ 1 ಕೋಟಿ ರೂ.ಅನುದಾನ ತರುವ ಉದ್ದೇಶ ಹೊಂದಿದ್ದು, ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕ್ಷೇತ್ರದ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದಿಂದ ಪ್ರಸ್ತುತ ಪ್ರತಿ ಗ್ರಾಮ ಪಂಚಾಯಿತಿಗೆ 50 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಇದನ್ನು 1 ಕೋಟಿ ರೂ. ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಪ್ರತಿಯೊಂದು ಪಂಚಾಯಿತಿಗೂ 1 ಕೋಟಿ ರೂ.ಅನುದಾನ ತರುವ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಾಗದ ಕಾಮಗಾರಿಗಳನ್ನು ಗುರುತಿಸಿ, ಅಂದಾಜು ವೆಚ್ಚದೊಂದಿಗೆ ಪ್ರಸ್ತಾವನೆ ಸಿದ್ಧಪಡಿಸಬೇಕು. ಸರ್ಕಾರದಿಂದ ಅನುದಾನ ಮಂಜೂರಾದ ಕೂಡಲೇ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸ್ಮಶಾನಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಅಗತ್ಯ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ತೆರಿಗೆ ಹಣದಿಂದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಪಿಡಿಒಗಳು ಅಗತ್ಯ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಿದರೆ ಅದಕ್ಕೆ ತಕ್ಕಂತೆ ಅನುದಾನ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ :

ಸ್ಮಶಾನಗಳ ಜಾಗವನ್ನು ಗುರುತಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪಂಚಾಯಿತಿಯಲ್ಲಿ ಅನುದಾನವಿಲ್ಲವೆಂದು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಬಾರದು. ಗ್ರಾಮಸ್ಥರಿಂದ ದೂರುಗಳು ಬಾರದಂತೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ದೇವೇಗೌಡ ತಾಕೀತು ಮಾಡಿದರು.

ಅ.10ರೊಳಗೆ ಸರ್ವೆ ಪೂರ್ಣಗೊಳಿಸಿ

ಸರ್ಕಾರಿ ಶಾಲೆಗಳು, ಕೆರೆಕಟ್ಟೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸ್ಮಶಾನಗಳಿಗೆ ಸೇರಿದ ಜಮೀನುಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಮತ್ತು ಸರ್ವೆಯರ್‌ಗಳು ಜಂಟಿಯಾಗಿ ಸರ್ವೆ ಮಾಡಬೇಕು. ಜಮೀನಿನ ಗಡಿ ಗುರುತಿಸಿ ಹದ್ದುಬಸ್ತು ನಿಗದಿಪಡಿಸಿದ ಬಳಿಕ ಖಾತೆ ಮಾಡಿಸಬೇಕು. ಬಾಕಿ ಇರುವ ಎಲ್ಲ ಶಾಲೆ ಮತ್ತು ಸ್ಮಶಾನಗಳ ಸರ್ವೆ ಕಾರ್ಯವನ್ನು ಅಕ್ಟೋಬರ್ 10ರೊಳಗೆ ಪೂರ್ಣಗೊಳಿಸಬೇಕು ಎಂದು ದೇವೇಗೌಡ ಗಡುವು ವಿಧಿಸಿದರು.

ಸರ್ಕಾರಿ ಸರ್ವೆಯರ್‌ಗಳ ಜತೆಗೆ ಖಾಸಗಿ ಸರ್ವೆಯರ್‌ಗಳ ನೆರವನ್ನೂ ಪಡೆದು ಅಭಿಯಾನದ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು. ಸರ್ಕಾರಿ ಶಾಲೆ, ಕೆರೆಕಟ್ಟೆಗಳ ಜಮೀನು ಒತ್ತುವರಿಯಾಗದಂತೆ ರಕ್ಷಿಸಬೇಕು. ಭವಿಷ್ಯದಲ್ಲಿ ಸ್ಮಶಾನಗಳಿಗೆ ಜಾಗದ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ಸರ್ಕಾರಿ ಭೂಮಿಯನ್ನು ಈಗಲೇ ಗುರುತಿಸಿ ಮೀಸಲಿಡಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಜಿ.ಟಿ. ದೇವೇಗೌಡ ಎಚ್ಚರಿಸಿದರು.

ಪಿಂಚಣಿ ಸಮಸ್ಯೆ ಪರಿಹರಿಸಬೇಕು:

ಬಡವರು, ವೃದ್ಧರು ಹಾಗೂ ವಿಶೇಷಚೇತನರಿಗೆ ಪಿಂಚಣಿ ಸ್ಥಗಿತಗೊಂಡಿರುವುದರಿಂದ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು. ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಯಾಗಿರುವುದೂ ಪಿಂಚಣಿ ಸ್ಥಗಿತಕ್ಕೆ ಕಾರಣವಾಗಿದೆ ಎಂದು ದೇವೇಗೌಡ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ವಾರ್ಷಿಕ ಆದಾಯದ ಮಿತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರದ ಮಾನದಂಡದಂತೆ ಕೆಲವು ಫಲಾನುಭವಿಗಳ ಪಿಂಚಣಿ ಸ್ಥಗಿತಗೊಂಡಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಗ್ರಾಮ ಆಡಳಿತಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಬಗರ್‌ಹುಕುಂ ಅರ್ಜಿ ಇತ್ಯರ್ಥ ಮಾಡಿ:

ಬಗರ್ ಹುಕುಂ ಅಡಿಯಲ್ಲಿ ಸಲ್ಲಿಕೆಯಾಗಿರುವ 31 ಅರ್ಜಿದಾರರ ಜಮೀನಿನ ಸ್ಕೆಚ್ ಸಿದ್ಧಪಡಿಸಬೇಕು. ಸಾಗುವಳಿ ಚೀಟಿ ವಿತರಿಸಲು ಸ್ಕೆಚ್ ಅಗತ್ಯವಿರುವುದರಿಂದ ಮುಂದಿನ ಸಭೆಯೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬಾಕಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು ಎಂದು ಶಾಸಕ ದೇವೇಗೌಡ ಸೂಚಿಸಿದರು.

ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು

ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬೋರ್‌ವೆಲ್ ವಿಫಲವಾದರೆ ಮರುಕೊರೆಸಬೇಕು. ಅದೂ ಫಲ ನೀಡದಿದ್ದರೆ ಪರ್ಯಾಯ ಸ್ಥಳ ಗುರುತಿಸಿ ಹೊಸ ಬೋರ್‌ವೆಲ್ ಕೊರೆಸಬೇಕು. ಅಂತರ್ಜಲ ಮಟ್ಟ ಕುಸಿದು ನೀರಿನ ಸೆಲೆ ಕಡಿಮೆಯಾಗುತ್ತಿರುವುದು ಕಂಡುಬಂದ ತಕ್ಷಣ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ನಾಗನಹಳ್ಳಿ, ಚಾಮುಂಡಿಬೆಟ್ಟ, ಗುಂಗ್ರಾಲ್‌ಛತ್ರ, ದೂರ, ಇಲವಾಲ, ಸಿದ್ದಲಿಂಗಪುರ, ಉದ್ಬೂರು, ದೊಡ್ಡಮಾರಗೌಡನಹಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳು, ಎದುರಾಗಿರುವ ಸಮಸ್ಯೆಗಳು ಹಾಗೂ ಕೈಗೆತ್ತಿಕೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವರದಿ ಸಲ್ಲಿಸಿದರು.

ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಆಸಿಫ್ ಇಕ್ಬಾಲ್ ಮೊಹಮ್ಮದ್ ಇತರರಿದ್ದರು.