ಕರಿಮುದ್ದನಹಳ್ಳಿ ಕೆರೆಯಲ್ಲಿ ಹೂಳೆತ್ತುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಈಶ್ವರ ಬಿ. ಖಂಡ್ರೆ ಅವರು ಶ್ರಮದಾನ ಮಾಡಿ ಗಮನ ಸೆಳೆದರು. ಹರೀಶ್ ಗೌಡ, ಎಚ್.ಪಿ.ಮಂಜುನಾಥ್, ಯುಕೇಶ್‌ಕುಮಾರ್ ಇನ್ನಿತರರಿದ್ದರು.
ಮೈಸೂರು: ಗ್ರಾಮೀಣ ಖಾತ್ರಿ ಯೋಜನೆ ವಿಬಿಜಿ ರಾಮ್ ಜಿ ಯೋಜನೆ ಅಡಿ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಕರಿಮುದ್ದನಹಳ್ಳಿ ಕೆರೆಯಲ್ಲಿ ಹೂಳೆತ್ತುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ, ಖಂಡ್ರೆ ಅವರು ತಾವೇ ಮಂಕರಿಯಲ್ಲಿ ಮಣ್ಣು ಹೊತ್ತು ಟ್ರ್ಯಾಕ್ಟರ್‌ಗೆ ತುಂಬಿಸಿ ಕಾರ್ಮಿಕರನ್ನು ಹುರಿದುಂಬಿಸಿದರು.
ಗದ್ದುಗೆಯ ಕೆಂಡಗಣ್ಣೇಶ್ವರ ಸ್ವಾಮಿ ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸೋಮವಾರ ಆಗಮಿಸಿದ್ದ ಅವರು, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಅವರೊಂದಿಗೆ ಕೆರೆ ಹೂಳು ತೆಗೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೂಲಿ ಕಾರ್ಮಿಕರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದ ಸಚಿವರು, ವಿಬಿಜಿ ರಾಮ್ ಜಿ ಅಡಿ 125 ದಿನ ಅರ್ಹ ಫಲಾನುಭವಿಗಳ ಕುಟುಂಬಕ್ಕೆ ಕೆಲಸ ನೀಡುತ್ತಿದ್ದು, ನಿತ್ಯ 382 ರೂ. ಕೂಲಿ ನೀಡಲಾಗುತ್ತಿದೆ ಎಂದು ತಿಳಿಸಿದರು. 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಸುವಂತೆಯೂ ಪಿಡಿಒಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ ಮತ್ತು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮತ್ತಿತರರೂ ಶ್ರಮದಾನದಲ್ಲಿ ಕೈಜೋಡಿಸಿದರು.
ಆರೋಗ್ಯ ಶಿಬಿರಕ್ಕೂ ಭೇಟಿ ನೀಡಿ ಪರಿಶೀಲಿಸಿದರು.
ಪಿಡಿಒಗೆ ನೋಟಿಸ್
ಕರಿಮುದ್ದನಹಳ್ಳಿ ಗ್ರಾಮ ಪಂಚಾಯಿತಿಗೆ ಮಹಾತ್ಮ ಗಾಂಧಿ ಹೆಸರು ಬರೆಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ(ಪಿಡಿಒ) ನೋಟಿಸ್ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದರು.
ಗದ್ದುಗೆ ಕ್ಷೇತ್ರದಲ್ಲಿ ಶ್ರೀ ಕೆಂಡಗಣ್ಣಸ್ವಾಮಿ ದೇವಾಲಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮಾರ್ಗದಲ್ಲಿ ಪಂಚಾಯಿತಿ ಕಚೇರಿಗೆ ಸಚಿವರು ಭೇಟಿ ನೀಡಿದರು.
ಆ.15ರೊಳಗೆ ರಾಜ್ಯದ ಎಲ್ಲ ಪಂಚಾಯಿತಿಗಳಿಗೂ ‘ಮಹಾತ್ಮ ಗಾಂಧಿ ಪಂಚಾಯಿತಿ’ ಎಂದು ಹೆಸರಿಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ, ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿರುವ ಪಿಡಿಒಗೆ ನೋಟಿಸ್ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಅವರಿಗೆ ಸೂಚಿಸಿದರು.