ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅಪಾರ

* ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ * ಸ್ವಚ್ಛತಾ ಸೇನಾನಿಗಳಿಗೆ ಭೋಜನಕೂಟ
Minister Dr. Yathindra Siddaramaiah served food at a banquet organized on Wednesday at the city's Rajendra Kalamandira.
ನಗರದ ರಾಜೇಂದ್ರ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಭೋಜನಕೂಟದಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಊಟ ಬಡಿಸಿದರು.
Published on: 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿದ 10 ಲಕ್ಷಕ್ಕೂ ಅಧಿಕ ಪ್ರವಾಸಿಗರಿಗೆ ಸ್ವಚ್ಛ ಹಾಗೂ ಸುಂದರ ವಾತಾವರಣ ಕಲ್ಪಿಸುವಲ್ಲಿ ಪೌರಕಾರ್ಮಿಕರು, ಒಳಚರಂಡಿ (ಯುಜಿಡಿ) ಕಾರ್ಮಿಕರು ಹಾಗೂ ವಾಹನ ಚಾಲಕರ ಸೇವೆ ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ರಾಜೇಂದ್ರ ಕಲಾಮಂದಿರದಲ್ಲಿ ಬುಧವಾರ ದಸರಾ ಮಹೋತ್ಸವದ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಚ್ಛತಾ ಸೇನಾನಿಗಳಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಭೋಜನಕೂಟ ಉದ್ಘಾಟಿಸಿ ಮಾತನಾಡಿದರು.

ಮೈಸೂರು ದಸರಾ ವಿಶ್ವದ ಗಮನ ಸೆಳೆಯುವ ಪ್ರಮುಖ ಸಾಂಸ್ಕೃತಿಕ ಉತ್ಸವವಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಆಗಮಿಸುವುದರಿಂದ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವುದು ದೊಡ್ಡ ಜವಾಬ್ದಾರಿಯಾಗಿದೆ. ಪೌರಕಾರ್ಮಿಕರು, ಯುಜಿಡಿ ಸಿಬ್ಬಂದಿ ಹಾಗೂ ವಾಹನ ಚಾಲಕರು ಹಗಲಿರುಳು ಶ್ರಮಿಸುವ ಮೂಲಕ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಮನೋಭಾವವನ್ನು ಗುರುತಿಸಿ ಅಭಿನಂದಿಸುವುದು ನಮ್ಮ ಕರ್ತವ್ಯ ಎಂದರು.

ಪೌರಕಾರ್ಮಿಕರು ಕೇವಲ ಸ್ವಚ್ಛತಾ ಸೇನಾನಿಗಳಲ್ಲ. ಅವರು ನಗರದ ಆರೋಗ್ಯ ಸೇನಾನಿಗಳು. ನಗರದ ಸ್ವಚ್ಛತೆ ಕಾಪಾಡುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆ. ಅವರ ಪರಿಶ್ರಮದಿಂದಲೇ ಮೈಸೂರಿನ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡಲು ಸಾಧ್ಯವಾಗಿದೆ. ಅವರ ಸೇವೆಯನ್ನು ಗೌರವಿಸಿ, ಅವರೊಂದಿಗೆ ಆತ್ಮೀಯವಾಗಿ ಬೆರೆಯುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಪೌರಕಾರ್ಮಿಕರಿಗೆ ಉಪಾಹಾರ ಒದಗಿಸುವ ಕಾರ್ಯಕ್ರಮ ಆರಂಭಿಸಿದ್ದನ್ನು ಸ್ಮರಿಸಿದ ಅವರು, ಪೌರಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅವರನ್ನು ಕಾಯಂಗೊಳಿಸುವ ಐತಿಹಾಸಿಕ ನಿರ್ಧಾರವನ್ನೂ ಕೈಗೊಳ್ಳಲಾಗಿದೆ ಎಂದರು.

ಕಾರ್ಮಿಕರ ಶ್ರಮಕ್ಕೆ ಗೌರವ ನೀಡುವುದು ಹಾಗೂ ಅವರ ಬದುಕಿನಲ್ಲಿ ಭದ್ರತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವುದು ಸರ್ಕಾರದ ಬದ್ಧತೆ. ನಗರದ ಸ್ವಚ್ಛತೆಗಾಗಿ ಶ್ರಮಿಸುವ ಕಾರ್ಮಿಕರ ಸೇವೆಯನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯೂ ಆಗಿದೆ ಎಂದರು.

ಸನ್ಮಾನ, ಭೋಜನಕೂಟ:

ದಸರಾ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು, ಯುಜಿಡಿ ಕಾರ್ಮಿಕರು ಹಾಗೂ ವಾಹನ ಚಾಲಕರನ್ನು ಇದೇ ವೇಳೆ ಅಭಿನಂದಿಸಿ ಸನ್ಮಾನಿಸಲಾಯಿತು. ಬಳಿಕ ಸಚಿವರು ಕಾರ್ಮಿಕರೊಂದಿಗೆ ಭೋಜನ ಸವಿದರು.

ಶಾಸಕ ಕೆ.ಹರೀಶ್ ಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಮಾಜಿ ಮೇಯರ್ ನಾರಾಯಣ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net