ಚಾಮುಂಡಿ ಸನ್ನಿಧಿಯಲ್ಲಿ ಆಷಾಢ ಪೂಜೆಗೆ ಸಿದ್ಧತೆ

ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗ್ಗೆ 5.30 ರಿಂದ 9.30ವರೆಗೆ ಮಾತ್ರ ವಿಐಪಿ ದರ್ಶನ
  • ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಆಷಾಢ ಮಾಸದ ಮೊದಲ ಶುಕ್ರವಾರದ ಆಚರಣೆಗೆ ಚಾಮುಂಡಿಬೆಟ್ಟ ಸಜ್ಜುಗೊಂಡಿದ್ದು, ದೇವಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಭಕ್ತರಿಗೆ ಲಲಿತಮಹಲ್ ಹೆಲಿಪ್ಯಾಡ್‌ನಿಂದ ಉಚಿತ ಸಾರಿಗೆ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚಿನ ಭಕ್ತರು ಆಗಮಿಸುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಶುಭ ಸಂದರ್ಭದಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗುವುದರಿಂದ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಸಿಸಿ ಕ್ಯಾಮೆರಾ ವ್ಯವಸ್ಥೆ ಜತೆಗೆ ಧ್ವನಿವರ್ಧಕದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ.

ಹತ್ತಾರು ತಾತ್ಕಾಲಿಕ ಸಾರ್ವಜನಿಕ ಶೌಚಗೃಹಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಗರಪಾಲಿಕೆ ವತಿಯಿಂದ ಕಸ ಸಂಗ್ರಹಣೆಗೆ ಅನೇಕ ಡಸ್ಟ್‌ಬಿನ್ ಇಡಲಾಗಿದೆ. ಭಕ್ತರ ನೀರಿನ ‘ದಾಹ’ ನೀಗಿಸಲು ಬೆಟ್ಟದ ಎಲ್ಲ ಕಡೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸೌಲಭ್ಯ, ಅಗತ್ಯ ಔಷಧಗಳೊಂದಿಗೆ ಬೆಟ್ಟಕ್ಕೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಈ ಸಮಯದಲ್ಲಿ ಚಾಮುಂಡಿಬೆಟ್ಟ ಗ್ರಾಮದಲ್ಲಿ ವಿಳಾಸವಿರುವ ನಿವಾಸಿಗಳು ತಮ್ಮ ಆಧಾರ್ ಕಾರ್ಡ್‌ಅನ್ನು ಹಾಜರುಪಡಿಸಬೇಕು. ಪರಿಶೀಲನೆಗೆ ಒಳಪಡಿಸಿ ಪ್ರವೇಶವನ್ನು ಪಡೆಯಬಹುದು.

ಬೆಳಗ್ಗೆ 5.30 ರಿಂದ ದರ್ಶನ:

ಜುಲೈ 17ರಂದು ಮುಂಜಾನೆ 3.30 ರಿಂದಲೇ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಲಿವೆ. ಬೆ.5.30 ರಿಂದ ರಾತ್ರಿ 10ವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಮಹಾ ಮಂಗಳಾರತಿ ನಡೆಯಲಿದೆ. ಈ ವೇಳೆ ದೇವರಿಗೆ ನಾನಾ ಅಭಿಷೇಕ ನಡೆಯಲಿವೆ. ಆಷಾಢ ಆಚರಣೆಗಾಗಿ ದೇವಸ್ಥಾನದ ಗರ್ಭಗುಡಿಯನ್ನು ವಿವಿಧ ಹೂ ಮತ್ತು ಹಣ್ಣುಗಳಿಂದ ಅಲಂಕರಿಸಲಾಗುತ್ತದೆ ಎಂದು ದೇವಸ್ಥಾನ ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ‘ವಿಜಯವಾಣಿ’ಗೆ ತಿಳಿಸಿದರು.
"

ಆಷಾಢ ಶುಕ್ರವಾರ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆ ಮಾಡಲಾಗಿದೆ. ಬೆಟ್ಟಕ್ಕೆ ಯಾವುದೇ ಪ್ಲಾಸ್ಟಿಕ್ ತರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ತಂದಲ್ಲಿ ದಂಡ ವಿಧಿಸಲಾಗುತ್ತದೆ. ಯಾವುದೇ ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರ ಪ್ಲಾಸ್ಟಿಕ್ ಮೂಲಕ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.

— ರೂಪಾ, ಚಾಮುಂಡಿಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net