ಸಂಭ್ರಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ರಥೋತ್ಸವ

ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
Published on
ಮೂಗೂರು: ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಾಟಾಳು ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಅಮ್ಮನವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೇಗುಲವನ್ನು ತಳಿರು-ತೋರಣ, ಹೂಗಳಿಂದ ಅಲಂಕರಿಸಲಾಗಿತ್ತು. ಸಾಂಪ್ರದಾಯಿಕವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ 3 ಗಂಟಗೆ ಅಲಂಕೃತಗೊಂಡ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ರಥದ ಮಂಟಪದಲ್ಲಿ ಕೂರಿಸಲಾಯಿತು. ನಂತರ ಭಕ್ತರು ಜಯಘೋಷ ಕೂಗುತ್ತಾ ರಥವನ್ನು ಎಳೆದರು.
ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವಿ ದರ್ಶನ ಪಡೆದರು. ಪ್ರತಿ ವರ್ಷದಂತೆ ಈ ಬಾರಿಯೂ ಮೂಗೂರು ಗೆಳೆಯರ ಬಳಗ ವತಿಯಿಂದ ರಥಕ್ಕೆ ಬೃಹತ್ ಹೂವಿನ ಹಾರ ಅರ್ಪಿಸಲಾಯಿತು. ನವ ದಂಪತಿ, ಭಕ್ತರು ತಮ್ಮ ಇಷ್ಟಾರ್ಥ ನೆರವೇರಲೆಂದು ಪ್ರಾರ್ಥಿಸಿ ಹಣ್ಣು-ದವನ ಅರ್ಪಿಸಿದರು. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಹರಕೆ ಹೊತ್ತ ಭಕ್ತರು ಎಲ್ಲೆಡೆ ಪ್ರಸಾದ ತಯಾರಿಸಿ ವಿತರಿಸಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅನ್ನಸಂತರ್ಪಣೆ ಆಯೋಜಿಸಿದ್ದರು.
ತಹಸೀಲ್ದಾರ್ ಸುರೇಶಾಚಾರ್, ಗ್ರಾಪಂ ಅಧ್ಯಕ್ಷ ಎಂ.ಡಿ.ಲೋಕೇಶ್, ಎಂ.ಪಿ.ನಾಗರಾಜು, ಮುಖಂಡರಾದ ಎಂ.ಡಿ.ಬಸವರಾಜು, ಉದ್ಯಮಿ ಎಂ.ಪಿ.ಛಾಯಾ ಕುಮಾರ್, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಪಾರುಪತ್ತೆದಾರ ಸಾಗರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಮೋಹನ್ ಕುಮಾರ್, ಎಂ.ಕೆ.ಸಿದ್ಧರಾಜು, ಎಂ.ಎಂ.ಜಯಣ್ಣ, ಎಂ.ಪಿ.ಮರಿಸ್ವಾಮಿ, ಶಿವಮೂರ್ತಿ, ನಾಗೇಂದ್ರ, ರಮೇಶ್ ನಾಯ್ಕ, ಉಪನ್ಯಾಸಕ ಕುಮಾರಸ್ವಾಮಿ, ಎಂ.ಎಂ.ಜಗದೀಶ್, ಎಂ.ಸಿದ್ದರಾಜು, ಇನ್‌ಸ್ಪೆಕ್ಟರ್ ಧನಂಜಯ್, ಎಸ್‌ಐ ಜಗದೀಶ್ ಧೂಳ್‌ಶೆಟ್ಟಿ, ಕುಮಾರಸ್ವಾಮಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net