ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪುರುಷರ ನಿರುತ್ಸಾಹ

 ಸಂತಾನ ಶಕ್ತಿಹರಣ ಚಿಕಿತ್ಸೆ
ಸಂತಾನ ಶಕ್ತಿಹರಣ ಚಿಕಿತ್ಸೆ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತಕ ಸಾಲಿನಲ್ಲಿ ಶೇ.7ರಷ್ಟು ಸಾಧನೆ
  • ಅಪನಂಬಿಕೆಗಳಿಂದ ಆಪರೇಷನ್‌ಗೆ ಹಿಂದೇಟು
  • ಕೆಲ ಪುರುಷರು ಈ ಚಿಕಿತ್ಸೆಗೆ ಆಸಕ್ತಿ ವ್ಯಕ್ತಪಡಿಸಿದರೂ ಕುಟುಂಬ ಸದಸ್ಯರೇ ವಿರೋಧ

ಮಂಜುನಾಥ ತಿಮ್ಮಯ್ಯ ಮೈಸೂರು

ಶಾಶ್ವತವಾಗಿ ಗರ್ಭಧಾರಣೆಯ ವಿರುದ್ಧ ರಕ್ಷಣೆಯನ್ನು ಪಡೆಯುವ ವಿಧಾನವಾಗಿರುವ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಒಳಗಾದ ಮಹಿಳೆಯರ ಪ್ರಮಾಣ ಜಿಲ್ಲೆಯಲ್ಲಿ ಶೇ.92ರಷ್ಟಿದೆ. ಅದೇ ಪುರುಷರ ಪ್ರಮಾಣ ಬರೀ ಶೇ.7ರಷ್ಟಿದೆ!
ಇದು ಸಂತಾನ ಶಕ್ತಿಹರಣ ಚಿಕಿತ್ಸೆಗೆ ಪುರುಷರು ಹಿಂದೇಟು ಹಾಕುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ (ಎನ್‌ಎಸ್‌ವಿ)ಒಳಪಡುವ ಪುರುಷರ ಸಂಖ್ಯೆ ಜಿಲ್ಲೆಯಲ್ಲಿ ಎರಡು ಅಂಕಿಯನ್ನೂ ದಾಟುತ್ತಿಲ್ಲ. ಬರೀ 3, 4, 5ಯಷ್ಟೇ ಶಸ್ತ್ರಚಿಕಿತ್ಸೆಯಾಗಿವೆ. ಇದರ ಫಲವಾಗಿ ನೂರಕ್ಕೆ ನೂರರಷ್ಟು ಹೋಗಲಿ, ಕೇವಲ ಶೇ.10ರಷ್ಟು ಗುರಿ ಸಾಧಿಸಲೂ ಆಗುತ್ತಿಲ್ಲ.
 ಹೀಗಾಗಿ, ಈ ಶಸ್ತ್ರಚಿಕಿತ್ಸೆ ಜಿಲ್ಲೆಯಲ್ಲಿ ತೀವ್ರ ಇಳಿಮುಖವಾಗಿದೆ. ಚಿಕಿತ್ಸೆಗೆ ಒಳಗಾದರೆ ಲೈಂಗಿಕ ಶಕ್ತಿ ಕುಂದುತ್ತದೆ ಎಂಬ ಅಪನಂಬಿಕೆಯಿಂದಾಗಿಯೇ ಈ ಆಪರೇಷನ್‌ಗೆ ಪುರುಷರು ನಿರಾಸಕ್ತಿ ತೋರುತ್ತಿದ್ದಾರೆ.
 ಆರೋಗ್ಯ ಇಲಾಖೆ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿದರೂ ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಪುರುಷರು ಮುಂದೆ ಬರುತ್ತಿಲ್ಲ ಎಂಬುದು ಚಿಂತೆಗೀಡು ಮಾಡಿದೆ.
ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನಲ್ಲಿ 5,782 ಎನ್‌ಎಸ್‌ವಿ ಶಸ್ತ್ರಚಿಕಿತ್ಸೆಯ ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ 5,298 ಗುರಿ ಸಾಧನೆಯಾಗಿದ್ದು, ಇದರಲ್ಲಿ ಮಹಿಳಾ ಎನ್‌ಎಸ್‌ವಿ ಚಿಕಿತ್ಸೆಯ ಪಾಲು ಶೇ.91.6ರಷ್ಟಾಗಿದೆ. ಪುರುಷರ ಪಾಲು ಕೇವಲ ಶೇ.7.14ರಷ್ಟಾಗಿದೆ.
ಈ ಸಾಲಿನಲ್ಲಿ 98 ಪುರುಷರಿಗೆ ಎನ್‌ಎಸ್‌ವಿ ಚಿಕಿತ್ಸೆ ಮಾಡಿಸುವ ವಾರ್ಷಿಕ ಗುರಿ ಹಾಕಿಕೊಳ್ಳಲಾಗಿದೆ. ಅಕ್ಟೋಬರ್ ಅಂತ್ಯಕ್ಕೆ ಕೇವಲ 4 ಪುರುಷರು ಮಾತ್ರ ಈ ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ. ಇನ್ನೂ ಶೇ.93ರಷ್ಟು ಗುರಿ ಸಾಧನೆ ಗಗನಕುಸುಮವೇ ಆಗಿದೆ. ಆದರೆ, ಮಹಿಳೆಯರು ಎನ್‌ಎಸ್‌ವಿ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ಮಹಿಳೆಯರ ವಿಷಯದಲ್ಲಿ ಈವರೆಗೆ ಶೇ.91ರಷ್ಟು ಗುರಿ ಸಾಧಿಸಲಾಗಿದೆ. 5,726 ಪೈಕಿ 5,294 ಮಹಿಳೆಯರು ಈ ಚಿಕಿತ್ಸೆ ಮಾಡಿಸಿಕೊಂಡು ಸಂತಾನ ಅಭಿವೃದ್ಧಿಗೆ ತಡೆಯೊಡ್ಡಿದ್ದಾರೆ. ಈ ರೀತಿ ಪುರುಷರು ಮನಸ್ಸು ಮಾಡುತ್ತಿಲ್ಲ. 
ಕಳೆದ ಎಂಟು ವರ್ಷದಲ್ಲಿ ಪುರುಷರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಂಖ್ಯೆ 20ರ ಗಡಿದಾಟಿಲ್ಲ. ನಂತರ ವರ್ಷದಲ್ಲಿ ಈ ಸಂಖ್ಯೆಯಲ್ಲೂ ಇಳಿಮುಖವಾಗಿದೆ. 2018-19ನೇ ಸಾಲಿನಲ್ಲಿ 17 ಪುರುಷರು ಎನ್‌ಎಸ್‌ವಿ ಚಿಕಿತ್ಸೆ ಮಾಡಿಸಿಕೊಂಡಿದ್ದು. ಸದ್ಯಕ್ಕೆ ಇದುವೇ ಗರಿಷ್ಠ ಸಂಖ್ಯೆಯಾಗಿದೆ. ಕಳೆದ ನಾಲ್ಕು ವರ್ಷದಲ್ಲಿ 10 ಸಂಖ್ಯೆಯನ್ನೂ ಮೀರಿಲ್ಲ. 

ಮಡದಿಯಿಂದಲೇ ವಿರೋಧ:

ಇನ್ನೂ ಕೆಲ ಪುರುಷರು ಈ ಚಿಕಿತ್ಸೆಗೆ ಆಸಕ್ತಿ ವ್ಯಕ್ತಪಡಿಸಿದರೂ ಕುಟುಂಬ ಸದಸ್ಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಗಂಡನನ್ನು ಆತನ ಹೆಂಡತಿಯೇ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿರುವ ಪ್ರಸಂಗವೂ ನಡೆದಿದೆ. ಹೆಂಡತಿಯರು ಈ ಚಿಕಿತ್ಸೆಗೆ ಒಳಪಡಿಸಲು ಉತ್ಸಾಹ ತೋರುತ್ತಾರೆ. ಅದೇ ತಮ್ಮ ಗಂಡನಿಗೆ ಈ ಆಪರೇಷನ್ ಮಾಡಿಸಲು ಒಪ್ಪಲ್ಲ ಎಂದು ವೈದ್ಯರೊಬ್ಬರು ತಿಳಿಸಿದರು.
ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಹಿಳೆಗೆ ಮೀಸಲು ಎಂಬ ಸಮಾಜದ ದೃಷ್ಟಿಕೋನ ಪರಿವರ್ತನೆಗೊಂಡಿಲ್ಲ. ಮೂರು ಬಾರಿ ಸಿಸೇರಿಯನ್ ಆಗಿರುವ ಮಹಿಳೆಯೇ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಆದರೆ, ತಮ್ಮ ಗಂಡನಿಗೆ ಈ ಚಿಕಿತ್ಸೆ ಮಾಡಿಸಿಕೊಳ್ಳಲು ಸೂಚನೆ ನೀಡುವುದಿಲ್ಲ. 

ಮೂಢನಂಬಿಕೆಗಳಿಂದ ಹಿನ್ನಡೆ: 

ಈ ಚಿಕಿತ್ಸೆಯ ಬಳಿಕ ಭಾರದ ಕೆಲಸವನ್ನು ಮಾಡಲು ಕಷ್ಟಕರವಾಗುತ್ತದೆ. ವಯಸ್ಸಾದ ಬಳಿಕ ವಿವಿಧ ರೋಗಗಳಿಗೂ ಆಸ್ಪದವಾಗುತ್ತದೆ ಎಂಬಿತ್ಯಾದಿ ಮೂಢನಂಬಿಕೆಗಳಿಂದಾಗಿಯೇ ಮಹತ್ವದ ಎನ್‌ಎಸ್‌ವಿ ಕಾರ್ಯಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ಎನ್‌ಎಸ್‌ವಿ ಚಿಕಿತ್ಸೆಗೆ ಒಳಪಡುವ ಪುರುಷರಿಗೆ 1100 ರೂ. ಪ್ರೋತ್ಸಾಹಧನವೂ ದೊರೆಯಲಿದೆ. 
ಅನೇಕ ವರ್ಷಗಳಿಂದ ಪ್ರೋತ್ಸಾಹಧನ ಹೆಚ್ಚಳ ಕಂಡಿಲ್ಲ. ಚಿಕಿತ್ಸೆ ನಂತರ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ, ಪ್ರೋತ್ಸಾಹಧನ ಹೆಚ್ಚಳದತ್ತ ಗಮನಹರಿಸದಿರುವುದು ಸಹ ಎನ್‌ಎಸ್‌ವಿ ಯೋಜನೆ ಅನುಷ್ಠಾನ ಮಂದಗತಿಯಲ್ಲಿ ಸಾಗಲು ಮತ್ತೊಂದು ಕಾರಣವಾಗಿದೆ.

ವರ್ಷಕ್ಕೆ 10 ಚಿಕಿತ್ಸೆ ಆಗುವುದೇ ಕಷ್ಟಕರ:

ತಪ್ಪು ಕಲ್ಪನೆಯಿಂದ ಹೊರಬಂದು ಪುರುಷರು ಮುಂದೆ ಬರಬೇಕಾಗಿದೆ. ಎನ್‌ಎಸ್‌ವಿ ಅತ್ಯಂತ ಸರಳ ಆಪರೇಷನ್ ಆಗಿದ್ದು, ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. 
ಆದ್ದರಿಂದ ಈ ಶಸ್ತ್ರಚಿಕಿತ್ಸೆಯ ಪ್ರಮಾಣದಲ್ಲಿ ವರ್ಷದಿಂದ ಕಡಿಮೆಯಾಗುತ್ತಲೇ ಇದೆ. ವರ್ಷಕ್ಕೆ 10 ಚಿಕಿತ್ಸೆ ಆಗುವುದೇ ಕಷ್ಟಕರ ಎಂಬ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದರು.

ಮನವೊಲಿಸುವ ಕಸರತ್ತು:

ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಹತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಕುರಿತು ಜನರಲ್ಲಿ ಕೆಲವು ಅಪನಂಬಿಕೆಗಳಿವೆ. ಅವುಗಳನ್ನು ಹೋಗಲಾಡಿಸಿ, ಶಸ್ತ್ರಚಿಕಿತ್ಸೆಗೆ ಮನವೊಲಿಸುವ ಕೆಲಸವಾಗುತ್ತಿದೆ ಎಂದು ಕುಟುಂಬ ಕಲ್ಯಾಣ ಆರೋಗ್ಯಾಧಿಕಾರಿ ಡಾ.ಎಸ್.ಗೋಪಿನಾಥ್ ತಿಳಿಸಿದರು

ಶಸ್ತ್ರಚಿಕಿತ್ಸೆಯಿಂದ ಯಾವುದೇ ಸಮಸ್ಯೆ ಇಲ್ಲ

ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ಯಾವುದೇ ಸಮಸ್ಯೆಯಿಲ್ಲ. ಆರೋಗ್ಯವಾಗಿದ್ದು, ಎಂದಿನಂತೆ ಎಲ್ಲ ದೈಹಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಜನರಿಗೆ ಈ ಬಗ್ಗೆ ಅರಿವಿನ ಕೊರತೆಯಿದೆ ಎಂದು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಯೊಬ್ಬರು ತಿಳಿಸಿದರು.
ಜಿಲ್ಲೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಪುರುಷರ ವಿವರ 
ವರ್ಷ ಸಂಖ್ಯೆ
2018-19 17
2019-20 16
2020- 21 11
2021-22 13
2022-23 10 
2023-24 10
2024-25 09
2025-26 04
======
ಜಿಲ್ಲೆಯಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯ ವಿವರ
ಗುರಿ ಸಾಧನೆ ಶೇಕಡಾವಾರು
ಗಂಡಸರಿಗೆ 56 4 ಶೇ.7.14  
ಹೆಂಗಸರಿಗೆ 5726 5294 ಶೇ.92.46
ಒಟ್ಟು 5782 5298 ಶೇ.91.6
"

ಜಿಲ್ಲೆಯಲ್ಲಿ ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಬಹಳ ಕಡಿಮೆ ಇದೆ. ಇದನ್ನು ಮಾಡಿಸಿಕೊಳ್ಳಲು ಪುರುಷರು ಹಿಂದೇಟು ಹಾಕುತ್ತಿದ್ದಾರೆ. ಯಾರು ಸಹ ಮುಂದೆ ಬರುತ್ತಿಲ್ಲ. ತಪ್ಪು ಕಲ್ಪನೆಗಳು ಇದಕ್ಕೆ ಕಾರಣ. ಜತೆಗೆ, ಹೆಂಡತಿಯರು ಇದಕ್ಕೆ ಉತ್ತೇಜನ ಕೊಡುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net