ಸಾಧನೆಯಿಂದ ಬದುಕಿನ ಸಾರ್ಥಕತೆ ಸಾಧ್ಯ

ಮಹಾಜನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
ಮಹಾಜನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕರೆ
  • ವಿದ್ಯಾರ್ಥಿ ಸಂಸತ್ ವೇದಿಕೆಯಿಂದ ನಾಯಕತ್ವ ಗುಣಗಳು ವೃದ್ಧಿ

ಮೈಸೂರು: 

ರಾಷ್ಟ್ರದ ಸತ್ಪ್ರಜೆಗಳಾದ ಯುವಜನತೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಸಾಧನೆ ಮಾಡುವತ್ತ ಗಮನಹರಿಸಬೇಕು. ಆಗ ಮಾತ್ರ ಬದುಕು ಸಾರ್ಥಕತೆ ಕಾಣುತ್ತದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ.ಅಬ್ದುಲ್ ಕಲಾಂ ರಜತ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಸಂಸತ್ ವೇದಿಕೆಯಿಂದ ನಾಯಕತ್ವ ಗುಣಗಳು ಬೆಳೆಯುತ್ತವೆ. ನಿಮ್ಮಲ್ಲಿರುವ ಪ್ರತಿಭೆಗಳನ್ನು ನೀವು ಹಿಂಜರಿಕೆಯಿಲ್ಲದೆ ಹೊರ ಹಾಕಬೇಕು. ನಾನು ಶಾಲಾ ದಿನಗಳಲ್ಲೇ ಕ್ಲಾಸ್ ಮಾನಿಟರ್ ಆಗಿದ್ದರಿಂದಲೇ ಇವತ್ತು ಮಂತ್ರಿಯಾಗಲು ಸಾಧ್ಯವಾಯಿತು. ಹೀಗಾಗಿ ನೀವು ಈಗಿನಿಂದಲೇ ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ನಟಿ, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಪವಿತ್ರಾ ಲೋಕೇಶ್ ಮಾತನಾಡಿ, ಮಹಾಜನ ಸಂಸ್ಥೆ ಹಾಗೂ ಚಲನಚಿತ್ರ ರಂಗದ ಋಣ ನನ್ನ ಮೇಲಿದೆ. ಎರಡಕ್ಕೂ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ. ನನ್ನ ವೃತ್ತಿಜೀವನಕ್ಕೆ ಪಾಠದ ಜತೆಗೆ ಪೂರ್ಣ ಸಹಕಾರ ನೀಡಿದ್ದು ಇದೇ ಮಹಾಜನ ಪ್ರಥಮ ದರ್ಜೆ ಕಾಲೇಜು. ನನ್ನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು ನನ್ನ ಶಿಕ್ಷಕರು. ‘ಜನುಮದ ಜೋಡಿ’ ಚಿತ್ರದ ಶೂಟಿಂಗ್‌ಗೆ ನಾನು ಕಾಲೇಜಿನಿಂದಲೇ ಹೋಗುತ್ತಿದ್ದೆ. ನಿಮ್ಮಲ್ಲಿ ಸತತ ಪರಿಶ್ರಮವಿದ್ದರೆ ಪ್ರತಿಯೊಬ್ಬರಿಂದಲೂ ಬೆಂಬಲ ಸಿಗುತ್ತದೆ. ಶಿಕ್ಷಕರ ಪ್ರೀತಿಯನ್ನು ಗಳಿಸುವುದು ನಿಮ್ಮ ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಸಾಧ್ಯ ಎಂದರು.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಇಂದಿನ ಯುವಜನತೆ ಫೋನ್ ಬಳಕೆಯನ್ನು ಕಡಿಮೆ ಮಾಡಿ, ತಮ್ಮಲ್ಲಿರುವ ಪ್ರತಿಭೆಯ ಕಡೆ ಹೆಚ್ಚು ಗಮನ ಕೊಡಿ. ಹೆಚ್ಚು ಕನ್ನಡ ಪುಸ್ತಕ ಓದಿ, ಕನ್ನಡ ಪುಸ್ತಕಗಳು ನಮ್ಮ ಸಂಸ್ಕೃತಿಯ ದ್ಯೋತಕ. ಓದು ಒಂದೇ ನಮ್ಮನ್ನು ಆಂತರಿಕವಾಗಿ ಗಟ್ಟಿಗೊಳಿಸುವುದು. ಜತೆಗೆ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ನೀಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಹಾಜನ ವಿದ್ಯಾಸಂಸ್ಥೆಯ ಖಜಾಂಚಿ ಎಸ್.ಕೆ.ಸಂಜಯ್ ಮಾತನಾಡಿ, ವಿದ್ಯಾರ್ಥಿ ಸಂಸತ್ ನಾಯಕತ್ವದ ಮೂಲಭೂತ ತರಬೇತಿ ನೀಡಿದರೆ, ಪ್ರತಿಭಾ ವೇದಿಕೆಯು ನಿಮ್ಮಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುತ್ತಾ, ವೇದಿಕೆಯ ಭಯ ಹೋಗಲಾಡಿಸಲು ನೆರವಾಗುತ್ತದೆ. ಯುವಕರೇ ದೇಶದ ನಿಜವಾದ ಶಕ್ತಿ. ದೇಶದ ಅಭಿವೃದ್ಧಿಯು ನೀವು ವಹಿಸುವ ಅಧಿಕಾರ ಮತ್ತು ಜವಾಬ್ದಾರಿಯ ಮೇಲೆ ನಿಂತಿದೆ ಎಂದು ತಿಳಿಸಿದರು.
ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸಿನತ್ತ ಸಾಗಲು ಕಠಿಣ ಪರಿಶ್ರಮವೇ ಏಕೈಕ ಮಾರ್ಗ ಎಂದರು. ವಿದ್ಯಾರ್ಥಿ ಸಂಸತ್‌ಗೆ ಆಯ್ಕೆಯಾದ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರುಳೀಧರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆರ್. ರಮೇಶ್, ಪ್ರತಿಭಾ ವೇದಿಕೆಯ ಸಂಚಾಲಕ ಎಂ.ನಾಗೇಶ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್.ತಿಮ್ಮೇಗೌಡ, ವಿದ್ಯಾರ್ಥಿ ಸಂಸತ್ ಸಂಚಾಲಕಿ ಡಾ. ಪುಷ್ಪಾರಾಣಿ, ಸಹಾಯಕ ಪ್ರಾಧ್ಯಾಪಕ ಎನ್.ಸುನಿಲ್, ವಿದ್ಯಾರ್ಥಿ ಸಂಸತ್‌ನ ಸಹ ಸಂಚಾಲಕ ಸಿ.ಎಲ್.ರೋಷನ್, ಪ್ರತಿಭಾ ವೇದಿಕೆಯ ಸಹ ಸಂಚಾಲಕಿ ಹಂಸವೇಣಿ ಭಾಗವಹಿಸಿದ್ದರು. 
ಕಾಲೇಜಿನ ವಾರಪತ್ರಿಕೆ ‘ಅಚೀವರ್ ಹಾಗೂ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಅಪ್ಲಿಕೇಷನ್ ವಿಭಾಗದ ಮಾಸ ಪತ್ರಿಕೆ ಇನ್‌ಫೋಲೆಟ್‌ಗಳನ್ನು ಬಿಡುಗಡೆಗೊಳಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net