ಎಂಡಿಎ ಬಜೆಟ್: ತಗ್ಗಿದ ಆದಾಯ, ಏರಿದ ವೆಚ್ಚ

ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ಬಜೆಟ್ ಪ್ರತಿಯನ್ನು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಬಿಡುಗಡೆಗೊಳಿಸಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ಬಜೆಟ್ ಪ್ರತಿಯನ್ನು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಬಿಡುಗಡೆಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • 2026-27ನೇ ಸಾಲಿನ ಎಂಡಿಎ ಬಜೆಟ್ ಮಂಡನೆ
  • ಹೊಸ ಘೋಷಣೆಗಳಿಲ್ಲ, ಹಳೇಯವೇ ಪುನರಾವರ್ತನೆ
ಮೈಸೂರುಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ವಿವಿಧ ಮೂಲಗಳಿಂದ ಬರುವ ಆದಾಯ ತಗ್ಗಿದೆ. ಆದರೆ, ವೆಚ್ಚ ಏರಿಕೆಯಾಗಿದೆ...! 
ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಸಮ್ಮುಖದಲ್ಲಿ ಆಯುಕ್ತ ಕೆ.ಆರ್.ರಕ್ಷಿತ್ ಅವರು 2026-27ನೇ ಸಾಲಿನ ಬಜೆಟ್ ಅನ್ನು ಸೋಮವಾರ ಮಂಡಿಸಿದರು.
ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಎಂಡಿಎ ಆಗಿ ಪರಿವರ್ತನೆಗೊಂಡ ಬಳಿಕ ಇದು ಮಂಡನೆಯಾದ ಮೊದಲ ಆಯವ್ಯಯ ಎಂಬುದು ವಿಶೇಷ.
ಮುಡಾಕ್ಕೆ ಸದಸ್ಯರಾಗಿದ್ದ ಶಾಸಕರು, ಎಂಎಲ್‌ಸಿಗಳು ಯಾರೂ ಇರಲಿಲ್ಲ. ಇವರ ಬದಲಿಗೆ ಸದಸ್ಯರಾಗಿರುವ ಅಧಿಕಾರಿಗಳೇ ರಾರಾಜಿಸಿದ್ದು ಗಮನಾರ್ಹ. ಹೀಗಾಗಿ, ಮುಡಾ ಬಜೆಟ್‌ನಲ್ಲಿ ಗೋಚರವಾಗುತ್ತಿದ್ದ ಖದರ್, ಎಂಡಿಎ ಆಯವ್ಯಯದಲ್ಲಿ ಕಾಣಲಿಲ್ಲ. ಜನಪ್ರತಿನಿಧಿಗಳಿಲ್ಲದ ಕಾರಣಕ್ಕೆ ಯಾವುದೇ ತುರುಸಿನ ಚರ್ಚೆ, ಆಕ್ಷೇಪ-ವಿರೋಧವೂ ವ್ಯಕ್ತವಾಗಲಿಲ್ಲ.
ಅಲ್ಲದೆ, ಈ ಬಜೆಟ್, ‘ಹೊಸ ಬಾಟಲಿಯಲ್ಲಿ ಹಳೆ ಮದ್ಯ’ ಎಂಬಂತಿದೆ. ಯಾವುದೇ ಹೊಸ ಘೋಷಣೆಗಳು, ನವ ಕಾರ್ಯಕ್ರಮಗಳು ಯಾವುದು ಇರಲಿಲ್ಲ. ಹಳೇ ಕಾರ್ಯಕ್ರಮಗಳೇ ಪುನರಾವರ್ತನೆಗೊಂಡಿವೆ.
2025-26ರಲ್ಲಿ ಎಲ್ಲ ಮೂಲಗಳಿಂದ ಕ್ರೋಢೀಕರಿಸಿದ ಸಂಪನ್ಮೂಲ 871.54 ಕೋಟಿ ರೂ.ಬಂದಿದ್ದು, 2026-27ನೇ ಸಾಲಿಗೆ ವಿವಿಧ ಮೂಲಗಳಿಂದ 799.90 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ. ಅಂದರೆ, ಕಳೆದ ವರ್ಷಕ್ಕಿಂತ 71.64 ಕೋಟಿ ರೂ.ಆದಾಯ ಖೋತಾ ಆಗಿದೆ. ಇದಕ್ಕೆ ಕಾರಣ ತಿಳಿಸಿಲ್ಲ.
ಆದರೆ, ವೆಚ್ಚ ಮಾತ್ರ ಏರಿಕೆಯಾಗಿದೆ. ಕಳೆದ ವರ್ಷ 548.49 ಕೋಟಿ ರೂ.ವೆಚ್ಚ ಮಾಡಲಾಗಿದೆ. ಮುಂದಿನ ಸಾಲಿನಲ್ಲಿ 579.18 ಕೋಟಿ ರೂ.ವೆಚ್ಚ ಮಾಡಲು ಪ್ರಸ್ತಾಪಿಸಲಾಗಿದೆ. ಅಂದರೆ, 32.29 ಕೋಟಿ ರೂ.ಹೆಚ್ಚುವರಿ ವೆಚ್ಚವಾಗಿದೆ.

ಬಡಾವಣೆ ನಿರ್ಮಾಣಕ್ಕಾಗಿ 460 ಕೋಟಿ ರೂ.:

ಈ ಸಲವೂ ವಸತಿ ಬಡಾವಣೆ ಅಭಿವೃದ್ಧಿಗೆ 460 ಕೋಟಿ ರೂ. ಕಾಯ್ದಿರಿಸಲಾಗಿದೆ. ಬೊಮ್ಮೇನಹಳ್ಳಿ, ಕಮರಹಳ್ಳಿ, ಇತರ ಗ್ರಾಮಗಳಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು ಯೋಜಿಸಲಾಗಿದೆ. ಇದರಿಂದ 15 ಸಾವಿರ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಆಲೋಚಿಸಲಾಗಿದೆ. 

ವಿಜಯಶ್ರೀಪುರದಲ್ಲಿ ಬಡಾವಣೆ 

ಭೂಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ಪಡಿಸದೇ ಇರುವ ವಿಜಯಶ್ರೀಪುರ ಮತ್ತು ಇತರ ಗ್ರಾಮಗಳಲ್ಲಿ ಸುಮಾರು 90 ಎಕರೆ ಪ್ರದೇಶದಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸಲು ಯೋಜಿಸಲಾಗಿದೆ. ಸದರಿ ಕಾಮಗಾರಿಗೆ 20 ಕೋಟಿ ರೂ. ಮೀಸಲಿಡಲಾಗಿದೆ.
ವಾಣಿಜ್ಯ ಸಂಕೀರ್ಣ, ಕ್ರೀಡಾ ಸಂಕೀರ್ಣ, ಅಭಿವೃದ್ಧಿ ಕಾಮಗಾರಿಗಳಿಗೆ 31.90 ಕೋಟಿ ರೂ. ಕಾಯ್ದಿರಿಸಲಾಗಿದೆ. ಆದರೆ, ಕಾಮಗಾರಿಗಳ ಕುರಿತು ಹೆಚ್ಚಿನ ಮಾಹಿತಿ ಒದಗಿಸಿಲ್ಲ.
ಎಂಡಿಎ ಕಟ್ಟಡ ನವೀಕರಣ:
ಎಂಡಿಎ ಕಟ್ಟಡ ಹಳೆಯದಾಗಿದ್ದು, ಇದರ ನವೀಕರಣಕ್ಕಾಗಿ 15 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ. ಸಾರ್ವಜನಿಕರ ಅನುಕೂಲವಾಗುವಂತೆ ರಸ್ತೆ ಅಭಿವೃದ್ಧಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲು 10.50 ಕೋಟಿ ರೂ. ಕಾಯ್ದಿರಿಸಲಾಗಿದೆ. ಮೂಲ ಸೌಕರ್ಯಗಳಾದ ಕುಡಿಯುವ ನೀರು, ಮಲಿನ ನೀರು ಮಾರ್ಗ, ಜಂಕ್ಷನ್ ಅಭಿವೃದ್ಧಿ, ಬೀದಿ ದೀಪ, ರಸ್ತೆ, ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ 71.23 ಕೋಟಿ ರೂ. ಒದಗಿಸಲು ನಿರ್ಧರಿಸಲಾಗಿದೆ.
ಕೆರೆ ಪುನರುಜ್ಜೀವನ:
64.21 ಕೋಟಿ ರೂ.ವೆಚ್ಚದಲ್ಲಿ ಇಲವಾಲ ಗ್ರಾಮದ ಕೆರೆ, ಸಾಹುಕಾರಹುಂಡಿ ಕೆರೆ, ಬೊಮ್ಮೇನಹಳ್ಳಿ ಕೆರೆ, ಕೂರ್ಗಳ್ಳಿ ಕಲ್ಯಾಣ, ಭುಗತಹಳ್ಳಿ, ಚಿಕ್ಕಹಳ್ಳಿ, ನಾಡನಹಳ್ಳಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ.

ಪೆರಿಪೆರಲ್ ರಿಂಗ್ ರೋಡ್‌ನ ಡಿಪಿಆರ್:

ಹೊರ ಪರಿಧಿ ರಸ್ತೆ ನಿರ್ಮಾಣ ಕಾಮಗಾರಿಯ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರು ಉದ್ದೇಶಿಸಲಾಗಿದೆ. ಅದಕ್ಕಾಗಿ 7.43 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಕಬಿನಿ ನೀರಿನ ಯೋಜನೆಗೆ 3.50 ಕೋಟಿ ರೂ.: 

ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಕಬಿನಿ ನೀರು ಸರಬರಾಜು ಯೋಜನೆಯ 2ನೇ ಹಂತದ ಉನ್ನತೀಕರಣ ಕಾಮಗಾರಿ ಕೈಗೊಳ್ಳಲು ನಿರ್ಣಯಿಸಲಾಗಿದ್ದು, 3.50 ಕೋಟಿ ರೂ.ಅನುದಾನ ಕಲ್ಪಿಸಿಕೊಡಲಾಗಿದೆ.


ಆದಾಯ ಮೂಲಗಳು ಯಾವುವು?

ಈ ಸಲ 799.90 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ. ಅಭಿವೃದ್ಧಿ ಶುಲ್ಕ, ಸೆಸ್, ಸೇವಾ ಶುಲ್ಕ, ನೀರಿನ ಸೇವಾ ಶುಲ್ಕ, ಸರ್ ಚಾರ್ಜ್ ಸೇರಿದಂತೆ ವಿವಿಧ ಮೂಲಗಳಿಂದ 227.30 ಕೋಟಿ ರೂ. ಆದಾಯ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಕೆರೆ ಪುನರುಜ್ಜೀವನ ಶುಲ್ಕದಿಂದ 6.60 ಕೋಟಿ ರೂ., ವಿಧಿಸಿದ ಮತ್ತು ಸಂಗ್ರಹಿಸಿದ ಕರ, ಉಪಕರಗಳಿಂದ 98.81 ಕೋಟಿ ರೂ.ಆದಾಯ ಬರುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.
ನಿವೇಶನ ಹಂಚಿಕೆ, ವಾಣಿಜ್ಯ, ಬಿಡಿ, ಮೂಲೆ ನಿವೇಶನಗಳ ಹರಾಜಿನಿಂದ, ಸಿಎ ನಿವೇಶನಗಳ ಹಂಚಿಕೆ, ವಾಣಿಜ್ಯ ಸಂಕೀರ್ಣ, ಭೂಮಿ, ಕಟ್ಟಡದ ಬಾಡಿಗೆಯಿಂದ 407.75 ಕೋಟಿ ರೂ. ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ. ನಿಶ್ಚಿತ ಠೇವಣಿ ರೂಪದಲ್ಲಿ ಬ್ಯಾಂಕ್‌ಗಳಲ್ಲಿ ಇಡುಗಂಟು ಇಟ್ಟಿರುವ ಮೂಲ, ವಾರ್ಷಿಕ ಬಡ್ಡಿ ಸೇರಿದಂತೆ 215.84 ಕೋಟಿ ರೂ. ಆದಾಯ ಬರಲಿದೆ. 

ಯಾವುದಕ್ಕೆ ಎಷ್ಟು ವೆಚ್ಚ?

ಆಡಳಿತ, ಅಭಿವೃದ್ಧಿ ಕಾಮಗಾರಿಗಳಿಗೆ 579.18 ಕೋಟಿ ರೂ., ಆಡಳಿತ ವೆಚ್ಚ, ಸಿಬ್ಬಂದಿ ವೇತನ, ಕಾನೂನು ವೆಚ್ಚ, ಹೊರಗುತ್ತಿಗೆ ನೌಕರರ ವೇತನ, ಕಚೇರಿ ಕಟ್ಟಡ ನಿರ್ವಹಣೆಗಳಿಗೆ 74.95 ಕೋಟಿ ರೂ.ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಉದ್ಯಾನಗಳು, ಬಯಲು ಸ್ಥಳಗಳು, ರಸ್ತೆ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ 10.50 ಕೋಟಿ ರೂ., ನೀರು ಸರಬರಾಜು, ಯುಜಿಡಿ, ಜಂಕ್ಷನ್‌ಗಳ ಸುಧಾರಣೆ, ಬೀದಿ ದೀಪಗಳಿಗಾಗಿ 156.68 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಕೆರೆಗಳ ಪುನರುಜ್ಜೀವನ, ನೀರಿನ ಟ್ಯಾಂಕ್‌ಗಳ ರಚನೆ, ಕಲ್ಯಾಣಿಗಳು, ಬಾವಿಗಳ ಪುನರುಜ್ಜೀವನ, ಅಂತರ್ಜಲ ಮರು ಪೂರಣಕ್ಕಾಗಿ 54.21 ಕೋಟಿ ರೂ., ನೀರು ಸರಬರಾಜು ಯೋಜನೆಗಳ ಅನುಷ್ಠಾನ, ವರ್ತುಲ ರಸ್ತೆಗಳ ರಚನೆ, ಕೊಳಚೆ ಪ್ರದೇಶಗಳ ಸುಧಾರಣೆಗಾಗಿ 70.46 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ. ವಿನ್ಯಾಶ ಅಭಿವೃದ್ಧಿ ಯೋಜನೆಗಳ ಸಿದ್ಧತೆ, ಭೂಸ್ವಾದೀನ ವೆಚ್ಚ ಸೇರಿದಂತೆ ಯೋಜನೆ ಮತ್ತು ಅಭಿವೃದ್ಧಿಗಾಗಿ 287.82 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ.

ವೈಟ್ ಟ್ಯಾಪಿಂಗ್‌ಗಾಗಿ 150 ಕೋಟಿ ರೂ.:

ನಗರದ ಪ್ರಮುಖ ರಸ್ತೆಗಳ ವೈಟ್ ಟ್ಯಾಪಿಂಗ್‌ಗಾಗಿ 50 ಕೋಟಿ ರೂ.ವಂತಿಕೆಯನ್ನು ಲೋಕೋಪಯೋಗಿ ಇಲಾಖೆ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ  150 ಕೋಟಿ ರೂ.ಬಿಡುಗಡೆ ಮಾಡಲಾಗುತ್ತದೆ.

‘ಮುಡಾ ಪ್ರಕರಣ’ ನ್ಯಾಯಾಂಗ ವರದಿ ಸಲ್ಲಿಕೆ:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂ ಹಗರಣದ ಕುರಿತು ತನಿಖೆ ನಡೆಸಿದ ಹೈಕೋರ್ಟ್‌ನ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ.
50:50 ಅನುಪಾತದಡಿ ಅಕ್ರಮ ನಿವೇಶನ ಹಂಚಿಕೆ, ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆಯಲ್ಲಿನ ಅಕ್ರಮದ ಕುರಿತು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ಆದೇಶಿಸಿತ್ತು. 
‘ದೇಸಾಯಿ ಆಯೋಗವು ರಾಜ್ಯ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಂಡಿಎ ಅಧ್ಯಕ್ಷರೂ ಆಗಿರುವ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.
50: 50ರ ಅನುಪಾತದಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 500 ಎಕರೆ ಜಮೀನು ನೀಡಲು ರೈತರು ಒಪ್ಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರು ಮುಂದೆ ಬರುವ ನಿರೀಕ್ಷೆ ಇದೆ. 1 ಸಾವಿರ ಎಕರೆಯಷ್ಟು ಜಮೀನಿಗೆ ರೈತರಿಂದ ಒಪ್ಪಿಗೆ ಸಿಕ್ಕ ತಕ್ಷಣ ಬಡಾವಣೆ ನಿರ್ಮಾಣ ಕೆಲಸ ಶುರುವಾಗಲಿದೆ ಎಂದು ತಿಳಿಸಿದರು.
ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣದಿಂದಾಗಿ ಭೂಸ್ವಾಧೀನಕ್ಕೆ ಪರಿಹಾರ ಕೊಡುವ ಪ್ರಮೇಯ ಬರಲ್ಲ. ಹೀಗೆ ಉಳಿಯುವ ಹಣವನ್ನೇ ಬಡಾವಣೆ ನಿರ್ಮಿಸಲು ನಿಯೋಜಿಸಲಾಗುವುದು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net