ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಗಣ್ಯರು ಪುಪ್ಪ ನಮನ ಸಲ್ಲಿಸಿದರು. ಡಾ.ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಮಹದೇವ ಸ್ವಾಮೀಜಿ, ಡಾ.ಎಂ.ಗೋವಿಂದರಾಜು, ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಡಾ.ಎಂ.ಡಿ ಸುದರ್ಶನ್ ಇತರರಿದ್ದರು.
Published on:
Copied
Follow Us
ಮಹನೀಯರು ಇಡೀ ದೇಶದ ಆಸ್ತಿ. ಹಾಗಾಗಿ ಎಲ್ಲರೂ ಒಗ್ಗೂಡಿ ಎಲ್ಲ ಮಹನೀಯರ ಜಯಂತಿಗಳನ್ನು ಆಚರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಡಾ.ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆ, ಶ್ರೀ ಭಗೀರಥ ಜಯಂತ್ಯುತ್ಸವ ಸಮಿತಿಯಿಂದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿ, ಮಹನೀಯರ ಜಯಂತಿಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ ಸಮಾಜದಲ್ಲಿ ಒಂದೊಂದು ಜಯಂತಿಯನ್ನು ಒಂದೊಂದು ಸಮುದಾಯದವರು ಮಾತ್ರ ಆಚರಿಸುವ ಪದ್ಧತಿಯನ್ನು ಬದಲಾಯಿಸಬೇಕು ಎಂದರು.
ಶ್ರೀ ಭಗೀರಥ ಮಹರ್ಷಿಗಳು ನಾಡಿನ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಇತಿಹಾಸ ಮತ್ತು ಜ್ಞಾನದ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ನಾವು ನಮ್ಮ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಿಂದುಳಿದಿದ್ದೇವೆ. ಸಮಾಜದಲ್ಲಿ ಅನೇಕ ಮತ-ಧರ್ಮಗಳಿದ್ದರೂ, ಭಾರತದಂತಹ ವಿಶಾಲ ದೇಶದಲ್ಲಿ ಭಿನ್ನತೆಯ ನಡುವೆ ಏಕತೆ ಕಾಪಾಡಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಮುನ್ನಡೆಯಬೇಕು ಎಂದು ತಿಳಿಸಿದರು.
ಭಗೀರಥ ಮಹರ್ಷಿ, ಕನಕದಾಸರು, ವಾಲ್ಮೀಕಿ, ಬಸವಣ್ಣ ಮತ್ತು ಮಾದಾರ ಚೆನ್ನಯ್ಯನವರಂತಹ ಮಹಾನ್ ವ್ಯಕ್ತಿಗಳು ನಾಡಿಗೆ ನೀಡಿರುವ ಕೊಡುಗೆ ಅಪಾರ. ಇವರ ಜಯಂತಿಗಳು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಅವರು ತೋರಿಸಿಕೊಟ್ಟ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಭಗೀರಥ ಮಹರ್ಷಿಗಳಂತಹ ಮಹನೀಯರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಶಿಕ್ಷಣವೇ ಮೂಲ ಮಂತ್ರವಾಗಬೇಕು ಮತ್ತು ಧಾರ್ಮಿಕ ಸಂಸ್ಕಾರದೊಂದಿಗೆ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಬೇಕು. ಸಮಾಜದಲ್ಲಿನ ತಾರತಮ್ಯಗಳನ್ನು ತೊಡೆದು ಹಾಕಿ, ಅಣ್ಣ-ತಮ್ಮಂದಿರಂತೆ ಬಾಳಬೇಕು. ‘ನಾನು ಮೇಲು-ನೀನು ಕೀಳು’ ಎಂಬ ಭಾವನೆ ದೂರವಿಟ್ಟು, ಭಾರತ ಮಾತೆಯ ಮಕ್ಕಳಾಗಿ ಒಗ್ಗಟ್ಟಿನಿಂದ ಮುನ್ನಡೆಯುವ ಅಗತ್ಯವಿದೆ ಎಂದರು.
ಶಾರದ ವಿಲಾಸ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಎಂ.ಗೋವಿಂದರಾಜು ಮಾತನಾಡಿ, ಹಿಂದೂ ಧರ್ಮದ ಪುರಾಣಗಳ ಪ್ರಕಾರ ನಾಲ್ಕು ಯುಗಗಳ (ಕೃತ, ತ್ರೇತಾ, ದ್ವಾಪರ, ಕಲಿಯುಗ) ಚಕ್ರವನ್ನು ವಿವರಿಸುತ್ತಾ, ಭಗೀರಥನ ಕಥೆಯು ದ್ವಾಪರ ಯುಗಕ್ಕೆ ಸಂಬಂಧಿಸಿದ್ದು ಎಂದು ತಿಳಿಸಿದರು.
ಭಗೀರಥರ ಪೂರ್ವಜರಾದ ಸಗರ ಚಕ್ರವರ್ತಿಯ ಮಕ್ಕಳು ಕಪಿಲ ಮುನಿಯ ಶಾಪದಿಂದ ಭಸ್ಮವಾಗಿರುವ ದುಃಖವನ್ನು ಹೋಗಲಾಡಿಸಲು, ಗಂಗಾಮಾತೆಯನ್ನು ಭೂಮಿಗೆ ಕರೆತರುವ ಸಂಕಲ್ಪ ತೊಟ್ಟ ಕಥೆ ಇದು ಎಂದು ತಿಳಿಸಿದರು.
ಗಂಗೆಯನ್ನು ಭೂಮಿಗೆ ಕರೆತರಲು ಭಗೀರಥರು ಬ್ರಹ್ಮದೇವನನ್ನು ನಂತರ ಶಿವನನ್ನು ಕುರಿತು ನಡೆಸಿದ ಅಸಾಧಾರಣ ತಪಸ್ಸಿನ ಸನ್ನಿವೇಶಗಳನ್ನು ಮನೋಜ್ಞವಾಗಿ ವರ್ಣಿಸಿದರು. ದೈವಿಕ ಶಕ್ತಿಯ ಕೃಪೆ ಪಡೆಯಲು ಭಗೀರಥನ ಭಕ್ತಿ ಎಷ್ಟು ಪ್ರಬಲವಾಗಿತ್ತು ಎಂದು ಹೇಳಿದರು.
ಶ್ರೀ ಮಹದೇವ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಇತರರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಕಲಾಮಂದಿರದವರೆಗೆ ವಿವಿಧ ಕಲಾ ತಂಡಗಳ ಮೆರವಣಿಗೆ ನಡೆಯಿತು.