ಬಸವಣ್ಣ ಪ್ರತಿಯೊಬ್ಬರ ಸಾಕ್ಷಿಪ್ರಜ್ಞೆ ಆಗಲಿ

ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಮೂರ್ತಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಜಿ.ಎಲ್.ತ್ರಿಪುರಾಂತಕ, ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ.ಎಸ್.ಕೆ.ನವೀನ್‌ಕುಮಾರ್, ಡಾ.ಆನಂದಕುಮಾರ್, ಪ್ರೊ.ಎಂ.ರಾಮನಾಥಂ ನಾಯುಡು, ಪ್ರೊ.ಎಸ್.ನಿರಂಜನ್‌ರಾಜ್, ಡಾ.ಎನ್.ಆರ್.ಚಂದ್ರೇಗೌಡ ಇದ್ದರು.
ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಮೂರ್ತಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಜಿ.ಎಲ್.ತ್ರಿಪುರಾಂತಕ, ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ.ಎಸ್.ಕೆ.ನವೀನ್‌ಕುಮಾರ್, ಡಾ.ಆನಂದಕುಮಾರ್, ಪ್ರೊ.ಎಂ.ರಾಮನಾಥಂ ನಾಯುಡು, ಪ್ರೊ.ಎಸ್.ನಿರಂಜನ್‌ರಾಜ್, ಡಾ.ಎನ್.ಆರ್.ಚಂದ್ರೇಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್.ತ್ರಿಪುರಾಂತಕ ಆಶಯ
  • ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ
  • ಸ್ಟ್ಯಾಂಪ್, ನಾಣ್ಯಗಳ ಮೇಲೆ, ಸಂಸ್ಥೆಗಳ ಹೆಸರಿನಲ್ಲಿ ಸೀಮಿತವಾಗದಿರಲಿ
ಮೈಸೂರು: ಬಸವಣ್ಣ ಅವರು ನಮ್ಮ ಸಾಕ್ಷಿಪ್ರಜ್ಞೆಯಾಗಿ ಇರಬೇಕೇ ಹೊರತು ಸ್ಟ್ಯಾಂಪ್ ಮೇಲೆ, ನಾಣ್ಯಗಳ ಮೇಲೆ, ಸಂಸ್ಥೆಗಳ ಹೆಸರಿನಲ್ಲಿ ಅಲ್ಲ ಎಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್.ತ್ರಿಪುರಾಂತಕ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ತಪ್ಪು ಮಾಡಿದ್ದಾಗ ಒಳಗಿನಿಂದ ಬಸವಣ್ಣ ನಮ್ಮನ್ನು ಎಚ್ಚರಿಸಬೇಕು. ಬಸವಣ್ಣ ಅವರನ್ನು ವೇದಿಕೆ ಮೇಲೆ ಮೂರ್ತಿಯಾಗಿ ಕೂರಿಸುವ ಬದಲು ನಮ್ಮ ಒಳಗೆ ಸಾಕ್ಷಿ ಪ್ರಜ್ಞೆಯಾಗಿ ಕೂರಿಸಬೇಕು. ಆಗ ಮಾತ್ರ ಬಸವಣ್ಣ ಅವರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣ ಅವರು ಮಾಡಿದ ಸಾಧನೆ 21ನೇ ಶತಮಾನದಲ್ಲೂ ಮಾಸಿಲ್ಲ. ಈ ಶತಮಾನದಲ್ಲೂ ನಮ್ಮ ನಾಲಿಗೆಯಲ್ಲಿ ಬಸವಣ್ಣ ಅವರ ಹೆಸರು ಬರುತ್ತಿದೆ ಎಂದರೆ ಅದಕ್ಕೆ ಬಸವಣ್ಣ ಅವರ ನಾಲಿಗೆಯೇ ಕಾರಣ. ಏಕೆಂದರೆ ನುಡಿದಂತೆ ನಡೆದ ಮಹಾತ್ಮರಲ್ಲಿ ಬಸವಣ್ಣ ಅವರು ಒಬ್ಬರು. ಅವರು ಒಬ್ಬ ಮಂತ್ರಿಯಾಗಿ, ವಚನಕಾರರಾಗಿ ಮಾತ್ರ ಇದ್ದಿದ್ದರೆ ನಮ್ಮ ಬಾಯಿಯಲ್ಲಿ ಅವರ ಹೆಸರು ಬರುತ್ತಿರಲಿಲ್ಲ. ಅವರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಹಾಗಾಗಿ ಬಸವಣ್ಣ ಅವರ ಹೆಸರು ನಮ್ಮ ನಾಲಿಗೆಯಲ್ಲಿ ಬರುತ್ತದೆ ಎಂದರು.
ನಾವು ಪ್ರತಿ ವರ್ಷ ಬಸವಣ್ಣ ಅವರ ಜಯಂತಿ ಆಚರಿಸುತ್ತೇವೆ. ಮೂರ್ತಿ, ಫೋಟೋ ಪೂಜೆ ಮಾಡುತ್ತೇವೆ. ಅವರ ಆದರ್ಶ, ಸಿದ್ಧಾಂತಗಳನ್ನು ಕೊಂಡಾಡುತ್ತೇವೆ. ಆದರೆ, ನಮ್ಮಲ್ಲಿ ಎಲ್ಲವೂ ಆಚರಣೆಗೆ ಮಾತ್ರ ಸೀಮಿತವಾಗುತ್ತಿದೆಯೇ ಹೊರತು ಅವರನ್ನು ಅನುಸರಿಸುತ್ತಿಲ್ಲ. ಮೂರ್ತಿ ಪೂಜೆ ವಿರೋಧಿಸಿದ ಮಹಾತ್ಮನ ಮೂರ್ತಿ ಪೂಜೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಮೂಢನಂಬಿಕೆ ಕುರಿತು ಮಾತನಾಡುತ್ತಿದ್ದ ಕಾಲದಲ್ಲಿ ಬಸವಣ್ಣ ಅವರು ವೈಚಾರಿಕತೆ ಕುರಿತು ಜಾಗೃತಿ ಮೂಡಿಸಿದರು. ಜಾತಿ, ಧರ್ಮಗಳ ಬಗ್ಗೆ ಕಿತ್ತಾಡುತ್ತಿದ್ದ ಕಾಲದಲ್ಲಿ ಮಾನವ ಧರ್ಮದ ಬಗ್ಗೆ ತಿಳಿಸಿಕೊಟ್ಟರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಭವ ಮಂಟಪದಲ್ಲಿ ಸ್ಥಾನ ನೀಡಿದರು ಎಂದು ತಿಳಿಸಿದರು.
ಬಸವಣ್ಣ ಅವರು ಎಂದೂ ನನಗಿಂತ ಕಿರಿಯರಿಲ್ಲ ಎನ್ನುತ್ತಿದ್ದರು. ಆದರೆ, ಈಗ ಎಲ್ಲರೂ ತನಗಿಂತ ಹಿರಿಯರಿಲ್ಲ ಎಂದು ಬೀಗುತ್ತಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲೂ ಸ್ಟೇಟಸ್ ಹಾಕುತ್ತಾರೆ ಎಂದರು.
ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಸ್ತ್ರೀ ಸಮಾನತೆ ನೀಡಿದರು. ಆದರೆ, ಬಸವಣ್ಣ ಅವರ ನಾಡಿನಲ್ಲಿ 21ನೇ ಶತಮಾನದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಇಂದಿಗೂ ಪುರುಷ ಪ್ರಧಾನ ಸಮಾಜ ಜಾಗೃತವಾಗಿದೆ. ಇಂದಿಗೂ ಸ್ತ್ರೀಯರಿಗೆ ನ್ಯಾಯ ದೊರೆತ್ತಿಲ್ಲ. ರಕ್ಷಕರಾದವರೇ ಸ್ತ್ರೀ ಭಕ್ಷಕರಾಗುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳನ್ನು ನೋಡುತ್ತಿದ್ದೇವೆ. ವೇದಿಕೆಗಳಲ್ಲಿ ಸ್ತ್ರೀ ಸಮಾನತೆ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಮನೆಯಲ್ಲಿಯೇ ಸ್ತ್ರೀ ಶೋಷಣೆ ನಡೆಯುತ್ತಿರುತ್ತದೆ. ಬೆಂಗಳೂರಲ್ಲಿ ನಿತ್ಯ 230ಕ್ಕೂ ಹೆಚ್ಚು ವಿಚ್ಛೇದನದ ಅರ್ಜಿ ಬರುತ್ತಿದೆ. ಇದು ನಮ್ಮ ಸಾಮಾಜಿಕ ಪರಿಸ್ಥಿತಿ ಬಗ್ಗೆ ತಿಳಿಸುತ್ತದೆ ಎಂದರು.
ನಾವು ಫ.ಗು.ಹಳಕಟ್ಟಿ ಅವರನ್ನು ನೆನೆಸಿಕೊಳ್ಳಬೇಕು. ಅವರ ಪ್ರಯತ್ನದಿಂದ ನಾವು ಎಲ್ಲ ವಚನಕಾರರ ವಚನಗಳನ್ನು ಓದುತ್ತಿದ್ದೇವೆ. ಬಸವಣ್ಣ ಅವರು 1500 ವಚನ ಬರೆಯುತ್ತಾರೆ. ನಾವು ಈ ಎಲ್ಲ ವಚನಗಳನ್ನು ಓದುವುದು ಬೇಡ. ಅವರ ಮೂರು ವಚನಗಳನ್ನು ಓದಿ ಅರ್ಥ ಮಾಡಿಕೊಂಡು ಅನುಸರಿಸಿದರೆ ಸಾಕು ಎಂದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವರಾದ ಪ್ರೊ.ಎಸ್.ಕೆ.ನವೀನ್‌ಕುಮಾರ್, ಪ್ರೊ.ಸಿ.ಎಸ್.ಆನಂದಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್.ನಿರಂಜನ್‌ರಾಜ್, ಡೀನ್‌ಗಳಾದ ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಎನ್.ಆರ್.ಚಂದ್ರೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net