ಮೈಸೂರು: ಮೈಸೂರು ಯೋಗ ಒಕ್ಕೂಟದ 25ನೇ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ಅಂಗವಾಗಿ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರದಲ್ಲಿ ನೂರಾರು ಯೋಗಪಟುಗಳು ಪಾಲ್ಗೊಂಡಿದ್ದರು.
ಚುಮುಚುಮು ಚಳಿಯಲ್ಲಿಯೇ ಬೆಳಗಿನ ಜಾವ ಅತ್ಯಂತ ಉತ್ಸಾಹದಿಂದ ಹಾಜರಾಗಿದ್ದ ಯೋಗಪಟುಗಳು ಸೂರ್ಯದೇವನಿಗೆ ನೂರೆಂಟು ನಮಸ್ಕಾರಗಳನ್ನು ಸಲ್ಲಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರಿಗೆ ಯೋಗನಗರಿ ಎಂಬ ಅಭಿದಾನವೂ ಇದೆ. ರಾಜಮಹಾರಾಜರ ಕಾಲದಿಂದಲೂ ಇಲ್ಲಿ ಯೋಗಕ್ಕೆ ಮಹತ್ವ ಸಿಕ್ಕಿದೆ. ದೇಶ- ವಿದೇಶಗಳ ನೂರಾರು ಮಂದಿ ಯೋಗ ಕಲಿಯಲು ಮೈಸೂರಿಗೆ ಬರುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಯೋಗದ ಮಹತ್ವವನ್ನು ಅರ್ಥ ಮಾಡಿಕೊಂಡಿವೆ ಎಂದರು.
ದೆಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯಾವುದೇ ವೆಚ್ಚ ಇಲ್ಲದೇ ಮಾಡಬಹುದಾದ ಚಿಕಿತ್ಸೆ ಎಂದರೇ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾತ್ರ. ಒತ್ತಡ ನಿವಾರಣೆಗೂ ಯೋಗಾಭ್ಯಾಸ ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಬಿಸಿದ್ದ ಒಕ್ಕೂಟದ ಗೌರವಾಧ್ಯಕ್ಷ ಎ.ಎಸ್. ಚಂದ್ರಶೇಖರ್ ಮಾತನಾಡಿ, ಒಕ್ಕೂಟದ ರಜತ ಮಹೋತ್ಸವದ ಮೊದಲ ಕಾರ್ಯಕ್ರಮ ಇದಾಗಿದೆ. ವರ್ಷವಿಡಿ ಸರಣಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ನಾವು ನೇರವಾಗಿ ನೋಡಬಹುದಾದ ಏಕೈಕ ದೇವರೆಂದರೆ ಸೂರ್ಯ. ಆತನಿಗೆ ನಮಿಸುವುದು ಎಂದರೇ ದೇಹದ ಎಲ್ಲ ಅಂಗಾಂಗಗಳಿಗೂ ಕಸರತ್ತು ಮಾಡಿದಂತೆ ಆಗುತ್ತದೆ ಎಂದರು.
ಉದ್ಯಮಿ ಎ.ಪಿ. ನಾಗೇಶ್, ಒಕ್ಕೂಟದ ಅಧ್ಯಕ್ಷ ಕೆ.ಜಿ. ದೇವರಾಜು, ಗೌರವಾಧ್ಯಕ್ಷ ಟಿ. ಜಲೇಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಯೋಗಕುಮಾರ್, ಕಾರ್ಯಾಧ್ಯಕ್ಷರಾದ ಬಿ.ಪಿ. ಮೂರ್ತಿ, ಶಾಂತಾರಾಮ್, ಎಂ,ಎಸ್. ಶಿವಪ್ರಕಾಶ್, ಉಪಾಧ್ಯಕ್ಷರಾದ ಎಂ.ಎಸ್. ರಮೇಶ್ ಕುಮಾರ್, ಆಶಾದೇವಿ ಇದ್ದರು.