ಸ್ವಚ್ಛ ಸರ್ವೇಕ್ಷಣೆ ಜಾಗೃತಿಗಾಗಿ ಮೈಸೂರಿನಲ್ಲಿ ಮ್ಯಾರಥಾನ್ ಓಟ

ಸ್ವಚ್ಛ ಸರ್ವೇಕ್ಷಣ ಅಂಗವಾಗಿ ನಗರಪಾಲಿಕೆಯಿಂದ ಆಯೋಜಿಸಿರುವ ಮಾರಥ್ಯಾನ್ ಭಿತ್ತಿಪತ್ರ ಬಿಡುಗಡೆಯಲ್ಲಿ ಶೇಕ್ ತನ್ವೀರ್ ಆಸೀಫ್, ಡಿ.ಶ್ರೀಹರಿ, ಮಂಜುನಾಥ್, ಸೋಮಶೇಖರ್, ಕೆ. ಎಸ್. ಮೃತ್ಯುಂಜಯ, ಎಸ್.ಮೀನಾಕ್ಷಿ , ಶ್ರೀದೇವಿ ಇದ್ದರು.
ಸ್ವಚ್ಛ ಸರ್ವೇಕ್ಷಣ ಅಂಗವಾಗಿ ನಗರಪಾಲಿಕೆಯಿಂದ ಆಯೋಜಿಸಿರುವ ಮಾರಥ್ಯಾನ್ ಭಿತ್ತಿಪತ್ರ ಬಿಡುಗಡೆಯಲ್ಲಿ ಶೇಕ್ ತನ್ವೀರ್ ಆಸೀಫ್, ಡಿ.ಶ್ರೀಹರಿ, ಮಂಜುನಾಥ್, ಸೋಮಶೇಖರ್, ಕೆ. ಎಸ್. ಮೃತ್ಯುಂಜಯ, ಎಸ್.ಮೀನಾಕ್ಷಿ , ಶ್ರೀದೇವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ತಿಂಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಜಾಗೃತಿ
  • ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೂರರಿಂದ ಒಂದಕ್ಕೆ ಕೊಂಡೊಯ್ಯಲು ನಗರದ ಜನತೆ, ಸಂಘ-ಸಂಸ್ಥೆಗಳು ಸಹಕರಿಸುವಂತೆ ಮನವಿ
  • ಮ್ಯಾರಥಾನ್ ವಿಜೇತರಿಗೆ ಒಟ್ಟು 1.44 ಲಕ್ಷ ರೂ. ನಗದು ಬಹುಮಾನ
ಮೈಸೂರು:ಕೇಂದ್ರದ ಸ್ವಚ್ಛ ಸರ್ವೇಕ್ಷಣೆ ಅಂಗವಾಗಿ ಜಾಗೃತಿ ಮೂಡಿಸಲು ಮೈಸೂರು ಮಹಾನಗರ ಪಾಲಿಕೆಯಿಂದ ‘ಸ್ವಚ್ಛತೆಗಾಗಿ ಜತೆಗೆ ಓಡೋಣ’ ಧ್ಯೇಯದೊಂದಿಗೆ ಫೆ.8ರಂದು ನಗರದಲ್ಲಿ ಸ್ವಚ್ಛತಾ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ನಗರಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಹೇಳಿದರು.
ಮುಂದಿನ ತಿಂಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಎಲ್ಲರೂ ಇದರಲ್ಲಿ ಭಾಗವಹಿಸುವಂತೆ ಮಾಡಲು, ಸ್ವಚ್ಛ ಸಂದೇಶ ಸಾರಲು ಮುಂದಾಗಿರುವುದಾಗಿ ಮ್ಯಾರಥಾನ್ ಭಿತ್ತಿಪತ್ರ ಅನಾವರಣಗೊಳಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಮೈಸೂರನ್ನು ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೂರರಿಂದ ಒಂದಕ್ಕೆ ಕೊಂಡೊಯ್ಯಲು ನಗರದ ಜನತೆ, ಸಂಘ-ಸಂಸ್ಥೆಗಳು ಸಹಕರಿಸುವಂತೆ ಮನವಿ ಮಾಡಿದರು.
ಮುಂದಿನ ತಿಂಗಳು ಸ್ವಚ್ಛ ಸರ್ವೇಕ್ಷಣೆ ತಂಡ ಮೈಸೂರು ನಗರಕ್ಕೆ ಬರುವ ನಿರೀಕ್ಷೆ ಇದೆ. ಹಿಂದೆ ಎರಡು ಬಾರಿ ಪ್ರಥಮ ಸ್ಥಾನ ಪಡೆಸಿದ್ದ ಪಾಲಿಕೆ 27ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ಬಾರಿ ಮೂರನೇ ಸ್ಥಾನಕ್ಕೆ ಬಂದಿದ್ದೇವೆ. ಈಗ ಮರಳಿ ಪ್ರಥಮ ಸ್ಥಾನ ಪಡೆಯಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಕಳೆದ ಬಾರಿ ಸಿದ್ಧ ಬಳಕೆ, ಪುನರ್ ಬಳಕೆ, ಮರುಬಳಕೆಯ ಧ್ಯೇಯದೊಂದಿಗೆ ನಡೆದಿತ್ತು. ಆದರೆ ಈ ಬಾರಿ ಸ್ವಚ್ಛತೆಗಾಗಿ ಒಂದಾಗೋಣ ಎಂಬ ಧ್ಯೇಯದಡಿ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 3 ಕಿ.ಮೀ., 5 ಕಿ.ಮೀ. ಹಾಗೂ 10 ಕಿ.ಮೀ. ಓಟ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದರಲ್ಲಿ 18 ವರ್ಷ, 18 ರಿಂದ 41 ವರ್ಷ ಹಾಗೂ 45 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿದೆ. ಜತೆಗೆ ಹಿರಿಯ ನಾಗರಿಕರು, ನಿವೃತ್ತ ಸೈನಿಕರು ಸೇರಿ ನಿವೃತ್ತ ಸಿಬ್ಬಂದಿ ವಿಶೇಷ ಮ್ಯಾರಥಾನ್ ಆಯೋಜಿಸಿದ್ದು, ಅಂದು ಬೆಳಗ್ಗೆ 6ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಮ್ಯಾರಥಾನ್ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.
ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು ಸೇರಿ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಚ್ಛ ಸಂದೇಶ ಸಾರಬೇಕಿದೆ. ಆ ಮೂಲಕ ಮತ್ತೊಮ್ಮೆ ಮೈಸೂರು ಸ್ವಚ್ಛ ನಗರವನ್ನಾಗಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ. ಮ್ಯಾರಥಾನ್ ವಿಜೇತರಿಗೆ ಒಟ್ಟು 1.44 ಲಕ್ಷ ರೂ. ನಗದು ಬಹುಮಾನ ಸಹ ನೀಡಲಾಗುವುದು ಎಂದರು.
ಅಂದಿನ ಕಾರ್ಯಕ್ರಮಕ್ಕೆ 12ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಸಹಯೋಗ ನೀಡುತ್ತಿವೆ. ಪಾಲಿಕೆ ಎಲ್ಲ ವ್ಯಾಪ್ತಿಯಲ್ಲೂ ಅರಿವು ಮೂಡಿಸಲಾಗುತ್ತಿದೆ. ಸ್ವಚ್ಛ ಸರ್ವೇಕ್ಷಣೆಯ ಮಾನದಂಡ ಅಳೆಯಲು ಬರುವವರು ಪ್ರತಿ ವಾರ್ಡ್‌ನ 30 ಸ್ಥಳಗಳ ವೀಕ್ಷಣೆ ಮಾಡಲಿದ್ದಾರೆ. ಹೀಗಾಗಿ ಎಲ್ಲ ಸ್ಥಳಗಳ ಶುಚಿತ್ವ ಮುಖ್ಯವಾಗಿದೆ ಎಂದರು.
ಅಭಿವೃದ್ಧಿ ಉಪ ಆಯುಕ್ತ ಮಂಜುನಾಥ್, ಕಂದಾಯ ವಿಭಾಗದ ಉಪ ಆಯುಕ್ತ ಸೋಮಶೇಖರ್, ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಕೆ. ಎಸ್.ಮೃತ್ಯುಂಜಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಮೀನಾಕ್ಷಿ , ಪರಿಸರ ಇಂಜಿನಿಯರ್ ಶ್ರೀದೇವಿ ಇತರರು ಇದ್ದರು.
ವಿಶ್ವದರ್ಜೆಯ ರಸ್ತೆಗೆ ಡಿಪಿಆರ್
ನಗರದಲ್ಲಿರುವ ನ್ಯೂಕಾಂತ್ ರಾಜ್ ಅರಸು ರಸ್ತೆ, ಸರ್ ಮಿರ್ಜಾ ರಸ್ತೆ ಹಾಗೂ ಚಾಮರಾಜ ಜೋಡಿ ರಸ್ತೆಗಳಲ್ಲಿ ಒಂದು ರಸ್ತೆಯನ್ನು ವಿಶ್ವದರ್ಜೆಯ ರಸ್ತೆಯನ್ನಾಗಿಸುವ ನಿಟ್ಟಿನಲ್ಲಿ ಡಿಪಿಆರ್ ಸಿದ್ಧಪಡಿಸಿ ಅನುಮೋದನೆ ಸಲ್ಲಿಸಲಾಗಿದೆ ಎಂದು ನಗರಪಾಲಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಹೇಳಿದರು.
ಆ ರಸ್ತೆಯಲ್ಲಿ ಪ್ರತ್ಯೇಕ ಸೈಕಲ್ ಪಾಥ್, ಪರಿಸರಸ್ನೇಹಿ ವಾತಾವರಣ ನಿರ್ಮಾಣ, ವಿಕಲಚೇತನರು, ಮಹಿಳೆಯರು, ಹಿರಿಯರು ಕುಳಿತು ನಗರದ ಅಂದ ಸವಿಯುವ ನಿಟ್ಟಿನಲ್ಲಿ ಈಗಾಗಲೇ ಪುಣೆ, ಹೈದರಾಬಾದ್‌ನಲ್ಲಿ ನೋಡಿರುವ ಮಾದರಿಯಲ್ಲಿ ಸೌಂದರ್ಯೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net