ಭರವಸೆ ಮೂಡಿಸಿದ ಮನ್ವಂತ್‌ಕುಮಾರ್

* 135 ರನ್‌ಗಳ ಅಮೋಘ ಶತಕದೊಂದಿಗೆ ಇನಿಂಗ್ಸ್‌ಗೆ ಹೊಸ ಜೀವ * ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚು
ಮನ್ವಂತ್‌ಕುಮಾರ್
Published on: 

ಅವಿನಾಶ್ ಜೈನಹಳ್ಳಿ ಮೈಸೂರು

ಆ ಪಂದ್ಯದಲ್ಲಿ ಎಂಟು ವಿಕೆಟ್‌ಗಳು ಪತನಗೊಂಡಿದ್ದವು. ತಂಡದ ಮೊತ್ತ 200ರ ಗಡಿ ದಾಟಿರಲಿಲ್ಲ. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಕ್ರೀಸ್‌ಗೆ ಬಂದ ಮೈಸೂರಿನ ಯುವ ಕ್ರಿಕೆಟಿಗ ಅನುಭವಿ ಬೌಲರ್‌ಗಳ ದಾಳಿಗೆ ದಿಟ್ಟ ಉತ್ತರ ನೀಡಿದರು.

ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ದಾಖಲಿಸಿದ 135 ರನ್‌ಗಳ ಅಮೋಘ ಶತಕದ ಮೂಲಕ ಕರ್ನಾಟಕದ ಇನಿಂಗ್ಸ್‌ಗೆ ಹೊಸ ಜೀವ ತುಂಬಿದರು. ಅದೇ ಹುರುಪಿನಲ್ಲಿ ಮುಂದಿನ ಪಂದ್ಯದಲ್ಲಿ ಬೌಲಿಂಗ್‌ನಲ್ಲೂ ಮಿಂಚಿ ಮೂರು ವಿಕೆಟ್ ಕಬಳಿಸಿದರು. ಜತೆಗೆ ಅರ್ಧ ಶತಕವನ್ನೂ ಪೂರೈಸಿದರು..!

ಹೌದು...ನಮ್ಮ ಮೈಸೂರು ಹುಡುಗ ಎಲ್.ಮನ್ವಂತ್‌ಕುಮಾರ್ ಪ್ರಸಕ್ತ ಸಾಲಿನಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದು, ಬ್ಯಾಟಿಂಗ್‌ನಲ್ಲಿ ಜವಾಬ್ದಾರಿಯುತ ಆಟ, ಬೌಲಿಂಗ್‌ನಲ್ಲಿ ಕರಾರುವಕ್ ದಾಳಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಮೂರು ರಣಜಿ ಪಂದ್ಯಗಳನ್ನು ಆಡುವ ಮೂಲಕ ಅದ್ಭುತ ಪ್ರದರ್ಶನ ನೀಡಿ ಕರ್ನಾಟಕ ತಂಡದ ಭರವಸೆಯ ಆಲ್‌ರೌಂಡರ್ ಆಗಿ ಹೊರಹೊಮ್ಮುತ್ತಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕೆಳ ಕ್ರಮಾಂಕದಿಂದ ತಂಡದ ಮೊತ್ತ ಹೆಚ್ಚಿಸಿದ ಅವರ ಬ್ಯಾಟಿಂಗ್ ಪರಾಕ್ರಮ ಒಂದೆಡೆಯಾದರೆ, ಮೈಸೂರಿನಲ್ಲಿ ಗುರುವಾರ ಮುಕ್ತಾಯಗೊಂಡ ತ್ರಿಪುರ ವಿರುದ್ಧದ ಪಂದ್ಯದಲ್ಲಿ ತೋರಿದ ಬೌಲಿಂಗ್ ಶಿಸ್ತು ಗಮನಸೆಳೆಯಿತು. ಈ ಪ್ರದರ್ಶನಗಳು ಅವರ ಆಲ್‌ರೌಂಡ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

ಆಂಧ್ರ ತಂಡದ ವಿರುದ್ಧ ವಿಜಯವಾಡದಲ್ಲಿ ನಡೆದ ಪ್ರಸಕ್ತ ಸಾಲಿನ ಮೊದಲ ರಣಜಿ ಪಂದ್ಯದಲ್ಲಿ ಮನ್ವಂತ್‌ಕುಮಾರ್ ಪದಾರ್ಪಣೆ ಮಾಡಿದರು. ಆ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ ಕೇವಲ 13 ರನ್ ಗಳಿಸಿದ್ದ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 44 ರನ್ ಪೇರಿಸಿ ಭರವಸೆ ಮೂಡಿಸಿದರು. ಬಳಿಕ ಬೆಂಗಳೂರಿನಲ್ಲಿ ಸೌರಾಷ್ಟ್ರದ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಸಾಮರ್ಥ್ಯ ತೋರಿದರು. ಮೈಸೂರಿನಲ್ಲಿ ತ್ರಿಪುರ ವಿರುದ್ಧದ ಪಂದ್ಯದಲ್ಲಿ ಅವರ ಅವಶ್ಯಕತೆ ಬಗ್ಗೆ ತಿಳಿಸಿಕೊಟ್ಟರು.

ಕುಸಿತದ ಅಂಚಿನಿಂದ ತಂಡಕ್ಕೆ ಆಸರೆ

ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ 187 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್‌ಗೆ ಮರಳಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟುವುದೇ ಅನುಮಾನವಾಗಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಮನ್ವಂತ್, ಕೆಳಕ್ರಮಾಂಕದ ಬ್ಯಾಟರ್ ಎಂಬ ಹಣೆಪಟ್ಟಿಯನ್ನು ಬದಿಗಿಟ್ಟು ಜವಾಬ್ದಾರಿಯುತ ಆಟಕ್ಕೆ ಮುಂದಾದರು. ಸೌರಾಷ್ಟ್ರದ ಅನುಭವಿ ಬೌಲರ್‌ಗಳ ಎದುರು ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ಅವರು, ಅಗತ್ಯವಿದ್ದಾಗ ಆಕ್ರಮಣಕಾರಿ ಹೊಡೆತಗಳ ಮೂಲಕ ರನ್ ವೇಗವನ್ನೂ ಹೆಚ್ಚಿಸಿದರು. 214 ಎಸೆತಗಳನ್ನು ಎದುರಿಸಿದ ಮನ್ವಂತ್, 11 ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ನೆರವಿನಿಂದ 135 ರನ್ ಗಳಿಸಿದರು. ಅವರ ಇನಿಂಗ್ಸ್‌ನಿಂದಾಗಿ ಕರ್ನಾಟಕ ತಂಡ 342 ರನ್‌ಗಳ ಗೌರವಯುತ ಮೊತ್ತ ತಲುಪಲು ಕಾರಣರಾಗಿದ್ದರು. ಜತೆಗೆ ಆ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 31 ರನ್ ಹಾಗೂ 1 ವಿಕೆಟ್ ಕೂಡ ಪಡೆದು ಮಿಂಚಿದ್ದರು.

ತ್ರಿಪುರ ವಿರುದ್ಧ ಆಲ್ರೌಂಡ್ ಪ್ರದರ್ಶನ

ಮೈಸೂರಿನಲ್ಲಿ ಗುರುವಾರ ಮುಕ್ತಾಯಗೊಂಡ ತ್ರಿಪುರ ವಿರುದ್ಧದ ಪಂದ್ಯದಲ್ಲೂ ಆಲ್‌ರೌಂಡ್ ಪ್ರದರ್ಶನ ಮೂಲಕ ಮನ್ವಂತ್ ಗಮನ ಸೆಳೆದರು. ಪ್ರಥಮ ಇನಿಂಗ್ಸ್‌ನಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ರನ್ ಗಳಿಸಲು ಸುಲಭ ಅವಕಾಶ ನೀಡದೆ, ನಿಖರ ದಾಳಿ ನಡೆಸಿದ ಅವರು 13 ಓವರ್‌ಗಳಲ್ಲಿ 3 ಮೇಡನ್‌ಗಳ ಸಹಿತ 23 ರನ್ ನೀಡಿ 3 ವಿಕೆಟ್ ಕಬಳಿಸಿದರು. ಜತೆಗೆ ಪ್ರಥಮ ಇನಿಂಗ್ಸ್‌ನಲ್ಲಿ 75 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 51 ರನ್ ಗಳಿಸಿ ತಂಡದ ಬೃಹತ್ ಮುನ್ನಡೆಗೆ ಕಾರಣರಾದರು. ದ್ವಿತೀಯ ಇನಿಂಗ್ಸ್‌ನಲ್ಲೂ 42 ರನ್‌ಗಳಿಗೆ 2 ವಿಕೆಟ್ ಕಬಳಿಸಿ ಗಮನ ಸೆಳೆದರು. ಮೈಸೂರಿನಿಂದ ಆರಂಭವಾದ ಅವರ ಕ್ರಿಕೆಟ್ ಪಯಣ ಈಗ ಕರ್ನಾಟಕದ ರಣಜಿ ಅಂಗಳದಲ್ಲಿ ಹೊಸ ಭರವಸೆಯಾಗಿ ರೂಪುಗೊಳ್ಳುತ್ತಿದೆ.

ಮಹಾರಾಜ ಟ್ರೋಫಿಯಲ್ಲಿ ವಿಕೆಟ್ ಬೇಟೆ

ಮನ್ವಂತ್ ಅವರ ಪ್ರತಿಭೆ ಕರ್ನಾಟಕದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಆಡಿದ ಅವರು, ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 2023ರ ಆವೃತ್ತಿಯಲ್ಲಿ 22 ವಿಕೆಟ್ ಕಬಳಿಸಿ ಟೂರ್ನಿಯ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದ ಅವರು, 2024ರ ಆವೃತ್ತಿಯಲ್ಲೂ 16 ವಿಕೆಟ್ ಪಡೆದು ತಮ್ಮ ಸಾಮರ್ಥ್ಯವನ್ನು ಮುಂದುವರಿಸಿದರು.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಪ್ರದರ್ಶಿಸಿದ್ದ ಮನ್ವಂತ್, ಈಗ ರಣಜಿ ಟ್ರೋಫಿಯಂತಹ ದೀರ್ಘಾವಧಿಯ ಕ್ರಿಕೆಟ್‌ನಲ್ಲೂ ತಮ್ಮ ಆಟವನ್ನು ವಿಸ್ತರಿಸುತ್ತಿದ್ದಾರೆ. ವೇಗದ ಬೌಲಿಂಗ್‌ನ ಜತೆಗೆ ದೀರ್ಘ ಇನಿಂಗ್ಸ್ ಆಡುವ ಸಾಮರ್ಥ್ಯವನ್ನು ತೋರಿಸಿರುವುದು ಅವರ ಕ್ರಿಕೆಟ್ ಬೆಳವಣಿಗೆಯ ಪ್ರಮುಖ ಅಂಶವಾಗಿದೆ.

ದೇಶೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನದ ಹಿನ್ನೆಲೆಯಲ್ಲಿ ಐಪಿಎಲ್‌ನ ದೆಹಲಿ ಕ್ಯಾಪಿಟಲ್ಸ್ ತಂಡವು 2025ರ ಹರಾಜಿನಲ್ಲಿ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತ್ತು. ಇದು ಅವರ ಪ್ರತಿಭೆಗೆ ದೊರೆತ ಮನ್ನಣೆಯಾಗಿದೆ.

ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲೂ ತಂಡಕ್ಕೆ ಕೊಡುಗೆ ನೀಡುತ್ತಿರುವುದಕ್ಕೆ ತುಂಬ ಖುಷಿಯಾಗಿದೆ. ತಂಡದ ಅನುಕೂಲಕ್ಕೆ ತಕ್ಕಂತೆ ಆಟವಾಡುತ್ತಿದ್ದೇನೆ. ನಮ್ಮ ಮೈಸೂರು ಮೈದಾನದಲ್ಲಿ ರಣಜಿ ಪಂದ್ಯ ಆಡಿದ್ದು ಕೂಡ ಖುಷಿಯಾಗಿದೆ. ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಲ್ಲ. ಮುಂದಿನ ಪಂದ್ಯಗಳಲ್ಲಿ ಹೇಗೆ ಆಡಬೇಕು ಎಂದು ಮಾತ್ರ ಯೋಚಿಸುತ್ತೇನೆ. ನಾನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ.

ಎಲ್.ಮನ್ವಂತ್‌ಕುಮಾರ್