ಪ್ರಯಾಣಿಕರ ವಸ್ತು ಕದ್ದಿದ್ದವನ ಬಂಧನ

arrested
arrested
Published on
ಪ್ರಯಾಣಿಕರ 3.60 ಲಕ್ಷ ರೂ.ಮೌಲ್ಯದ ವಸ್ತುಗಳ ಕಳವು ಪ್ರಕರಣವನ್ನು ಪತ್ತೆಹಚ್ಚಿರುವ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಆರೋಪಿಯನ್ನು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಿ.ಎಸ್.ಪಟೇಲ್ (23) ಬಂಧಿತ ಆರೋಪಿ. ಈತ ಈ ಹಿಂದೆ ದಾವಣಗೆರೆ ಮತ್ತು ಅರಸೀಕೆರೆ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳಲ್ಲೂ ಭಾಗಿಯಾಗಿದ್ದಾನೆ. ಆರೋಪಿಯನ್ನು ಶಿವಮೊಗ್ಗದ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಮುಂದಿನ ತನಿಖೆಯನ್ನು ಜಿಆರ್‌ಪಿ ಶಿವಮೊಗ್ಗ ತಂಡ ಮುಂದುವರಿಸಿದೆ.
ಏನಿದು ಪ್ರಕರಣ? ಬೆಂಗಳೂರು ನಿವಾಸಿ ಅಂಬಿಕಾ ತಮ್ಮ ಪುತ್ರ, ಪುತ್ರಿ ಜತೆ ಮಾರ್ಚ್ 12 ರಂದು ರೈಲು ಸಂಖ್ಯೆ 20651 ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಆನಂದಪುರಂ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸುಮಾರು 35 ಗ್ರಾಂ ಚಿನ್ನಾಭರಣ ಹಾಗೂ 10,000 ರೂ.ನಗದು ಹೊಂದಿದ್ದ ಹ್ಯಾಂಡ್ ಬ್ಯಾಗ್ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ತಕ್ಷಣವೇ ಆರ್‌ಪಿಎಫ್ ಶಿವಮೊಗ್ಗ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕುಂಸಿ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ತಾಂತ್ರಿಕ ವಿಶ್ಲೇಷಣೆ ಆರಂಭಿಸಿತು. ಆರ್‌ಪಿಎಫ್ ಶಿವಮೊಗ್ಗ, ಸಿಐಬಿ ಮೈಸೂರು ಹಾಗೂ ಸಿಪಿಡಿಎಸ್ ಮೈಸೂರು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಜಿಆರ್‌ಪಿ ಶಿವಮೊಗ್ಗ ತಂಡಕ್ಕೆ ಸಹಕಾರ ನೀಡಲಾಯಿತು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net