ಸಮಸ್ಯೆಗಳ ನಿವಾರಕ ಮಹದೇಶ್ವರ

 ಚುಂಚನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಹದೇಶ್ವರ ದೇವಸ್ಥಾನದ ಹೊರನೋಟ.
ಚುಂಚನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಹದೇಶ್ವರ ದೇವಸ್ಥಾನದ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಚುಂಚನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮಹದೇಶ್ವರ
  • ಹರಕೆ ಹೊತ್ತ ಭಕ್ತರ ಕಷ್ಟಗಳನ್ನು ನಿವಾರಿಸುವ
ನಂಜನಗೂಡು: ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮಹದೇಶ್ವರ ಹರಕೆ ಹೊತ್ತ ಭಕ್ತರ ಕಷ್ಟಗಳನ್ನು ನಿವಾರಿಸುವ ಮೂಲಕ ನಂಬಿದವರ ದೈವವಾಗಿ ಪ್ರಸಿದ್ಧಿಯಾಗಿದ್ದಾನೆ.
ಗ್ರಾಮದ ಕೂಗಳತೆ ದೂರದಲ್ಲಿ ಮಹದೇಶ್ವರ ದೇವಸ್ಥಾನವಿದ್ದು, ಸೋಮವಾರ ಮತ್ತು ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆ ದಿನಗಳಂದು ಬೆಳಗ್ಗೆ 6ರಿಂದ ಸಂಜೆವರೆಗೆ ನಿರಂತರವಾಗಿ ಪೂಜೆ ನಡೆಯುತ್ತದೆ. ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಫಲಪುಷ್ಪ ಅಭಿಷೇಕ ಸೇರಿದಂತೆ ಹಲವು ಪೂಜಾ ಕೈಂಕರ್ಯ ನೆರವೇರಲ್ಪಡುತ್ತದೆ. ಮೈಸೂರು, ಚಾಮರಾಜನಗರ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ದೇವಸ್ಥಾನದಲ್ಲಿ ಒಡೆದು ಮೂಡಿರುವ ಮೂರು ಲಿಂಗಗಳಿವೆ. ಇಲ್ಲಿಗೆ ಬರುವ ಬಹುತೇಕ ಭಕ್ತರು ಆರೋಗ್ಯ ಸಮಸ್ಯೆ, ಸಂತಾನ, ಮದುವೆಗಿರುವ ತೊಂದರೆಗಳನ್ನು ನಿವಾರಿಸುವಂತೆ ಬೇಡಿಕೆ ಇಡುವುದರ ಜತೆಗೆ ಹರಕೆ ಹೊತ್ತು ಹೋಗುತ್ತಾರೆ. ಸಮಸ್ಯೆಗಳು ನಿವಾರಣೆಯಾದ ಬಳಿಕ ಮತ್ತೆ ಬಂದು ಪೂಜೆ ಸಲ್ಲಿಸುವುದು ವಿಶೇಷ.
ದೇಗುಲದ ಇತಿಹಾಸ: ಸುಮಾರು 8 ಎಕರೆ ಪ್ರದೇಶದಲ್ಲಿ ದೇವಾಲಯವಿದೆ. ಇದು ತೋಪಿನ ಮಾದರಿಯಲ್ಲಿದ್ದು, ಸುತ್ತಮುತ್ತಲಿನ ಪ್ರದೇಶಗಳು ಬೆಟ್ಟ, ಗುಡ್ಡಗಳಿಂದ ಕೂಡಿದೆ. ಈ ಭಾಗಗಳಲ್ಲಿ ಹೆಚ್ಚಾಗಿ ಕಾಡುಪ್ರಾಣಿಗಳಿವೆ. ಸುಮಾರು 150 ವರ್ಷಗಳ ಹಿಂದೆ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಧಿಕಾರಾವಧಿಯಲ್ಲಿ ಶಿಕಾರಿಗೆ ಈ ಭಾಗಕ್ಕೆ ರಾಜ ಬರುತ್ತಿದ್ದರು ಎನ್ನುತ್ತಾರೆ ಇಲ್ಲಿನ ಹಿರಿಯರು. ಇದೇ ಸ್ಥಳದಲ್ಲಿ ಒಂದು ಚಿಕ್ಕದಾದ ಗುಡಿ ನಿರ್ಮಾಣವಾಗಿತ್ತು. ಇಲ್ಲಿ ಒಬ್ಬ ಜಂಗಮರು ನೆಲೆಸಿದ್ದು, ಮೈಸೂರಿನ ಮಹಾರಾಜರು ಬೇಟೆಗೆ ಬಂದಾಗ ಯಾವುದೇ ಪ್ರಾಣಿಗಳು ಸಿಗದ ಹಿನ್ನೆಲೆಯಲ್ಲಿ ದೇವಸ್ಥಾನದ ತೋಪಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇಲ್ಲಿಯೇ ನೆಲೆಸಿದ್ದ ಜಂಗಮರು ರಾಜರನ್ನು ನೋಡಿ ಇಲ್ಲಿಗೆ ಬಂದ ಉದ್ದೇಶ ಕೇಳಿದ್ದಾರೆ.
ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದು, ಯಾವುದೇ ಪ್ರಾಣಿಗಳು ನನಗೆ ಸಿಗಲಿಲ್ಲ ಎಂದಾಗ, ತಕ್ಷಣವೇ ಅಲ್ಲಿ ನೆಲೆಸಿದ್ದ ಜಂಗಮರು ಪವಾಡ ಮಾಡಿ, ಪ್ರಾಣಿಗಳನ್ನು ಪ್ರತ್ಯಕ್ಷಗೊಳಿಸಿ ಬೇಟೆಯಾಡುವಂತೆ ಸೂಚಿಸುತ್ತಾರೆ. ಆದರೆ ರಾಜರಿಗೆ ಬೇಟೆಯಾಡಲು ಸಾಧ್ಯವಾಗುವುದಿಲ್ಲ. ಅವರ ಪವಾಡವನ್ನು ನೋಡಿದ ಮಹಾರಾಜರು ಬೆರಗಾಗಿ ನಿಲ್ಲುತ್ತಾರೆ. ನಂತರ ರಾಜರು ನಿಮಗೆ ಏನು ಕಾರ್ಯ ಮಾಡಿಕೊಡಬೇಕು ಎಂದು ಕೇಳಲಾಗಿ, ಈ ಪ್ರದೇಶದಲ್ಲಿ ಒಂದು ಮಹದೇಶ್ವರ ದೇವಸ್ಥಾನ, ಒಂದು ಕೆರೆ ಹಾಗೂ ಒಂದು ಖಡ್ಗ ಕೇಳುತ್ತಾರೆ. ತಕ್ಷಣವೇ ಮಹಾರಾಜರು ಒಪ್ಪಿ ಜಂಗಮರು ಹೇಳಿದ ಎಲ್ಲ ಕೆಲಸವನ್ನು ಪೂರೈಸುತ್ತಾರೆ. ಕಲ್ಲಿನಿಂದ ಸುಂದರವಾದ ದೇವಾಲಯ ನಿರ್ಮಿಸುವುದರ ಜತೆಗೆ ಮುಂಭಾಗದಲ್ಲಿ ಬಸವ, ಗೋಪುರಗಳನ್ನೂ ನಿರ್ಮಿಸಿ ಕೊಡುತ್ತಾರೆ. ದೇವಾಲಯದ ಪಕ್ಕದಲ್ಲಿರುವ ಸ್ಥಳವನ್ನು ಮಹದೇವನ ಕೆರೆ ಎಂದು ನಾಮಕರಣ ಮಾಡಿ, ಎರಡು ಎಕರೆ ಪ್ರದೇಶದಲ್ಲಿ ಕೆರೆಯನ್ನು ಕಲ್ಲಿನಿಂದ ಕಟ್ಟಿಸಿ ಕೊಡುತ್ತಾರೆ. ಇದರೊಂದಿಗೆ ಮಹದೇಶ್ವರ ಉತ್ಸವ ಮೂರ್ತಿಯನ್ನು ಕೊಡುಗೆಯಾಗಿ ನೀಡುತ್ತಾರೆ.
ಮಾ.9, 10ರಂದು ಜಾತ್ರಾ ಮಹೋತ್ಸವ: ಮಾ.9 ಮತ್ತು 10 ರಂದು ಚುಂಚನಹಳ್ಳಿ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ಜಾತ್ರೆ ನೆರವೇರಲಿದೆ. ಅಂದು ಬೆಳಗ್ಗೆಯಿಂದಲೇ ಮಹದೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ಪೂಜಾ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. 9ರಂದು ಸಂಜೆ 5 ಗಂಟೆಗೆ ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ಬಳಿಕ ರಾತ್ರಿ ಶ್ರೀಕಡಕಲಕಟ್ಟೆ ಮಠದಿಂದ ಮಹದೇಶ್ವರಸ್ವಾಮಿ ಮೂರ್ತಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಕುಳ್ಳಿರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ನಂತರ ಅಂದು ಮಧ್ಯರಾತ್ರಿ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಮಾ.10 ರಂದು ನೂರೊಂದು ಬಾಲೆಯರಿಂದ ಹಾಲರಿವೆ ಉತ್ಸವ ನಡೆಯುತ್ತದೆ. ಬಳಿಕ ದೇವಸ್ಥಾನದ ಆವರಣದಲ್ಲಿ ಕೊಂಡೋತ್ಸವ ನಡೆಯುತ್ತದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಸುತ್ತಮುತ್ತಲಿನ ಭಕ್ತರು ಬೆಟ್ಟಕ್ಕೆ ಹೋಗಿ ಮನೆಗೆ ಹೋಗುವ ಮುನ್ನ ಚುಂಚನಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನಕ್ಕೆ ಆಗಮಿಸಿ ಒಂದು ದಿನ ಇಲ್ಲೇ ವಾಸ್ತವ್ಯ ಹೂಡುತ್ತಾರೆ. ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಸ್ಥಳದಲ್ಲೇ ಪರು(ಅಡುಗೆ) ತಯಾರಿಸಿ ಭಕ್ತರಿಗೆ ಬಡಿಸುವ ಸಂಪ್ರದಾಯ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ.
ಶ್ರೀಮಹದೇಶ್ವರ ಶಕ್ತಿಶಾಲಿ ದೈವವಾಗಿದ್ದಾನೆ. ಹರಕೆ ಹೊತ್ತು ಬರುವ ಭಕ್ತರ ಕಷ್ಟಗಳನ್ನು ತಕ್ಷಣ ನಿವಾರಿಸುತ್ತಾನೆ. ಪ್ರತಿ ಸೋಮವಾರ, ಶುಕ್ರವಾರ, ಅಮಾವಾಸ್ಯೆ, ಹಬ್ಬದ ದಿನಗಳಲ್ಲಿ ಪೂಜೆ ನೆರವೇರುತ್ತದೆ. ಜಾತ್ರೆ ಸಂದರ್ಭದಲ್ಲಿ ಹರಕೆ ಹೊತ್ತು ಮುಂದಿನ ಜಾತ್ರೆಯೊಳಗೆ ನೆರವೇರುವುದು ಇಲ್ಲಿನ ವಿಶೇಷ.
ಶ್ರೀನಾಗೇಂದ್ರ ಸ್ವಾಮೀಜಿ ಚುಂಚನಹಳ್ಳಿ ಗ್ರಾಮ
ದೇವಾಲಯಕ್ಕೆ ಸುಮಾರು 150ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಮೈಸೂರಿನ ಮಹಾರಾಜರು ನಿರ್ಮಿಸಿದರು ಎಂಬುದನ್ನು ಹಿರಿಯರು ತಿಳಿಸುತ್ತಾರೆ. ಸುತ್ತಮುತ್ತಲಿನ ಬಹುತೇಕ ಭಕ್ತರು ಆಗಮಿಸಿ ಹರಕೆ ಹೊತ್ತು ಹೋಗುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಭಕ್ತರಿಗೆ ಒಳ್ಳೆಯದಾಗಿರುವ ಹಲವು ನಿದರ್ಶನಗಳಿವೆ. ಮಾ. 9 ಮತ್ತು 10 ರಂದು ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ರಾಜಶೇಖರ ಯಜಮಾನ, ಚುಂಚನಹಳ್ಳಿ ಗ್ರಾಮ
ತಲುಪುವ ಮಾರ್ಗ: ತಾಲೂಕು ಕೇಂದ್ರದಿಂದ 22 ಕಿಮೀ ದೂರದಲ್ಲಿ ಚುಂಚನಹಳ್ಳಿ ಗ್ರಾಮವಿದೆ. ತಾಲೂಕು ಕೇಂದ್ರದಿಂದ ಬದನವಾಳು, ದೊಡ್ಡ ಕವಲಂದೆ ಮೂಲಕ ಹಾಗೂ ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿ ಅಥವಾ ತಗಡೂರು ಮೂಲಕ ಚುಂಚನಹಳ್ಳಿ ಗ್ರಾಮ ತಲುಪಬಹುದು. ಯಳಂದೂರು, ಸಂತೇಮರಳ್ಳಿ, ಉಮ್ಮತ್ತೂರು ಮೂಲಕವೂ ಚುಂಚನಹಳ್ಳಿಗೆ ಬರಬಹುದು. ಪ್ರತಿದಿನ ತಾಲೂಕು ಕೇಂದ್ರದಿಂದ ಸಾರಿಗೆ ಮತ್ತು ಖಾಸಗಿ ಬಸ್‌ಗಳಿದ್ದು, ಮೈಸೂರು ಹಾಗೂ ನಂಜನಗೂಡಿನಿಂದ ದೊಡ್ಡ ಕವಲಂದೆಗೆ ರೈಲ್ವೆ ಸಂಪರ್ಕವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net