ಮಹದೇಶ್ವರರು ಜನಮಾನಸದಲ್ಲಿ ಉಳಿದಿರುವ ಸಂತ: ಪ್ರೊ.ಎಸ್.ಶಿವರಾಜಪ್ಪ ಬಣ್ಣನೆ

ನಗರದ ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶತಾಯುಷಿ ಬಸವ ಮಾರ್ಗಿಗಳನ್ನು ಸನ್ಮಾನಿಸಲಾಯಿತು. ಪ್ರೊ.ಎಸ್.ಶಿವರಾಜಪ್ಪ, ಡಾ.ವೂಡೇ ಪಿ.ಕೃಷ್ಣ, ಹೆಳವರಹುಂಡಿ ಸಿದ್ದಪ್ಪ, ಅಂಶಿ ಪ್ರಸನ್ನಕುಮಾರ್, ಎಂ.ಚಂದ್ರಶೇಖರ್ ಬಿ.ಎಂ.ಅನಂತರಾಮ್, ಡಾ.ಸೌಮ್ಯಾ ಈರಪ್ಪ ಇದ್ದರು.
ನಗರದ ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶತಾಯುಷಿ ಬಸವ ಮಾರ್ಗಿಗಳನ್ನು ಸನ್ಮಾನಿಸಲಾಯಿತು. ಪ್ರೊ.ಎಸ್.ಶಿವರಾಜಪ್ಪ, ಡಾ.ವೂಡೇ ಪಿ.ಕೃಷ್ಣ, ಹೆಳವರಹುಂಡಿ ಸಿದ್ದಪ್ಪ, ಅಂಶಿ ಪ್ರಸನ್ನಕುಮಾರ್, ಎಂ.ಚಂದ್ರಶೇಖರ್ ಬಿ.ಎಂ.ಅನಂತರಾಮ್, ಡಾ.ಸೌಮ್ಯಾ ಈರಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹದೇಶ್ವರರು ಸಾಮಾಜಿಕ ಪ್ರಜ್ಞೆ ಮೂಡಿಸಿ, ಜನಮಾನಸದಲ್ಲಿ ಉಳಿದಿರುವ ಸಂತರಾಗಿದ್ದರು
  • ಮೈಸೂರು ಭಾಗಕ್ಕೆ ಜಾನಪದದ ಮಹಾಸಿರಿ. ಅಲ್ಲದೆ ರಾಚಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಕಾವ್ಯಗಳಿಗೆ ಮಹದೇಶ್ವರ ಜಾನಪದವೇ ಶಕ್ತಿ
ಮೈಸೂರು:ರಾಚಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಕಾವ್ಯಗಳಿಗೆ ಮಹದೇಶ್ವರ ಜಾನಪದವೇ ಶಕ್ತಿ ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಬಣ್ಣಿಸಿದರು.
ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು, ಬಸವ ಅಧ್ಯಯನ ಕೇಂದ್ರದಿಂದ ನಗರದ ಲಕ್ಷ್ಮೀಕಾಂತನಗರದ ಹೆಬ್ಬಾಳು ವರ್ತುಲ ರಸ್ತೆಯಲ್ಲಿರುವ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶತಾಯುಷಿ ಬಸವ ಮಾರ್ಗಿಗಳಿಗೆ ಸನ್ಮಾನ, ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೌಡರ ಸಿದ್ದಪ್ಪ ಮತ್ತು ಶರಣೆ ಮರಮ್ಮ ದತ್ತಿ ಉಪನ್ಯಾಸದಲ್ಲಿ ಶ್ರೀ ಮಲೆ ಮಹದೇಶ್ವರರ ಸಾಮಾಜಿಕ ಪ್ರಜ್ಞೆ ಕುರಿತು ಮಾತನಾಡಿದ ಅವರು, ಗಿರಿಜನರು, ಬೇಡಗಂಪಣರು ಸೇರಿದಂತೆ ಶೋಷಿತರ ಕಣ್ಣೀರು ಒರೆಸಿದ ಮಹಾಸಂತರಾದ ಮಹದೇಶ್ವರರು, ಸಮಾಜಮುಖಿ ಹಾಗೂ ಜನಮುಖಿಯಾಗಿದ್ದು, ದೊಡ್ಡ ಕ್ರಾಂತಿ ಮಾಡಿದರು ಎಂದರು.
ಮಹದೇಶ್ವರರು ಸಾಮಾಜಿಕ ಪ್ರಜ್ಞೆ ಮೂಡಿಸಿ, ಜನಮಾನಸದಲ್ಲಿ ಉಳಿದಿರುವ ಸಂತರಾಗಿದ್ದರು. ಅಧ್ಯಾತ್ಮದ ಮಹಾ ಮೇರು ಮಹದೇಶ್ವರರು ಮೈಸೂರು ಭಾಗಕ್ಕೆ ಜಾನಪದದ ಮಹಾಸಿರಿ. ಅಲ್ಲದೆ ರಾಚಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಕಾವ್ಯಗಳಿಗೆ ಮಹದೇಶ್ವರ ಜಾನಪದವೇ ಶಕ್ತಿ ಎಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ಮಹನೀಯರನ್ನು ಆಯಾ ಜಾತಿಗೆ ಸೀಮಿತಗೊಳಿಸುತ್ತಿರುವುದು ದುರಂತ. ಯಾವುದೇ ಜಾತಿಯನ್ನು ನೋಡದೆ ಮಹನೀಯರ ಆದರ್ಶಗಳನ್ನು ಪಾಲಿಸಿ ನಡೆಯಬೇಕು ಎಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಮಕ್ಕಳಿಗೆ ಹಿರಿಯ ಆದರ್ಶ ವ್ಯಕ್ತಿಗಳನ್ನು ಪರಿಚಯಿಸುವ ದೃಷ್ಟಿಯಿಂದ ಬಸವಮಾರ್ಗಿ ಶತಾಯುಷಿಗಳನ್ನು ಕರೆಸಿ ಗೌರವಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂಥವರ ಆದರ್ಶ ಪಾಲಿಸಬೇಕು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದಪ್ಪ ಮಾತನಾಡಿ, ಮಲೆ ಮಹದೇಶ್ವರರದ್ದು ‘ನರ’ನು ‘ಹರ’ನಾದ ಕಥೆ. ದೇಶದ ಜನಸಂಖ್ಯೆ 140 ಮೀರಿದ್ದು, ಶತಾಯುಷಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಹಾಗಾಗಿ ಶತಾಯುಷಿಗಳ ಬಗ್ಗೆ ನಾವು ಗೌರವ ಭಾವನೆ ಹೊಂದಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶೇಷಾದ್ರಿಪುರಂ ಆಡಳಿತ ಮಂಡಳಿಯ ಬಿ.ಎಂ.ಅನಂತರಾಮ್, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸೌಮ್ಯಾ ಈರಪ್ಪ ಇದ್ದರು.
ಜಾನಪದ ಅಕಾಡೆಮಿ ಸದಸ್ಯರಾದ ಗಾಯಕ ದೇವಾನಂದ ವರಪ್ರಸಾದ್, ಜಾನಪದ ಗಾಯನದ ಮೂಲಕ ಮಲೆ ಮಹದೇಶ್ವರರ ಜೀವನ ವೃತ್ತಾಂತವನ್ನು ಕಟ್ಟಿಕೊಟ್ಟರು. ಕಾರ್ಯಕ್ರಮದಲ್ಲಿ ಶತಾಯುಷಿ ಬಸವ ಮಾರ್ಗಿಗಳನ್ನು ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಬಿ.ಎಸ್.ಬಸವರಾಜಯ್ಯ, ಸ್ವಾತಂತ್ಯ ಹೋರಾಟಗಾರ ಕೆ.ಆರ್.ನಗರ ವೈ.ಎಸ್.ರೇವಣ್ಣ, ಸಮಾಜ ಸೇವಕ ಮಾಡ್ರಹಳ್ಳಿ ಬಸವಣ್ಣ, ಶರಣತತ್ವ ಪ್ರಚಾರಕ ಎಂ.ಬಿ.ವೀರಭದ್ರಪ್ಪ ಅವರನ್ನು ಗೌರವಿಸಲಾಯಿತು. ಚಿತ್ರದುರ್ಗದ ಕೂನಬೇವು ಗ್ರಾಮದ ಸಹಜ ಕೃಷಿಕ ಜೆ. ತಿಪ್ಪರುದ್ರಯ್ಯ, ತಿ.ನರಸೀಪುರದ ಆದರ್ಶ ಗೃಹಿಣಿ ಗೌರಮ್ಮ ಪುಟ್ಟಮಾದಪ್ಪ ಅವರಿರನ್ನು ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.
ಪಿಯು ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಸ್ವಾಮಿ, ಕನ್ನಡ ಉಪನ್ಯಾಸಕ ಎಚ್.ಆರ್. ಧನಂಜಯ್, ಜೀವಶಾಸ್ತ್ರ ಉಪನ್ಯಾಸಕ ಎಸ್.ಕಿರಣ್, ಮುಖ್ಯ ಗ್ರಂಥಪಾಲಕಿ ಕೆ.ರಶ್ಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net