ನಗರದ ದಟ್ಟಗಳ್ಳಿ, ಕನಕದಾಸನಗರ 2ನೇ ಹಂತದಿಂದ ಕೊಳಚೆ ನೀರು ರಾಜಕಾಲುವೆ ಮೂಲಕ ಹರಿದು ಲಿಂಗಾಂಬುಧಿ ಕೆರೆಗೆ ಸೇರ್ಪಡೆಯಾಗುತ್ತಿದ್ದು, ಇದರಿಂದ ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ದುರ್ವಾಸನೆ ಬೀರಲು ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಎಸಿಎಫ್ ರವೀಂದ್ರ, ನಗರ ಪಾಲಿಕೆ ಅಧೀಕ್ಷಕ ಇಂಜಿನಿಯರ್ ಮಂಜುನಾಥ್, ವಲಯ ಕಚೇರಿ 3ರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಆಸೀಫ್ ಇಕ್ಬಾಲ್ ಖಲೀಲ್, ನಗರಪಾಲಿಕೆ ಒಳಚರಂಡಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶಿಲ್ಪಾ ಅವರೊಂದಿಗೆ ಭೇಟಿ ನೀಡಿ ಕಲುಷಿತ ನೀರು ಕೆರೆಗೆ ಸೇರ್ಪಡೆಯಾಗುವುದನ್ನು ತಡೆಯಲು ವಹಿಸಬೇಕಾಗಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಯುಜಿಡಿ ಮಾರ್ಗದ ಪೈಪ್‌ಲೈನ್‌ಒಡೆದಿರುವ ಜಾಗ ಹಾಗೂ ಇದರಿಂದ ಅಕ್ಕಪಕ್ಕದ ಮನೆಗೆ ಎದುರಾಗುವ ಸಮಸ್ಯೆಗಳು, ಲಿಂಗಾಂಬುಧಿ ಕೆರೆಯ ಒಳಗೆ ಆಗಬೇಕಿರುವ ಕೆಲಸಗಳನ್ನು ವೀಕ್ಷಿಸಿದರು.