ಪರವಾನಗಿ ಭೂಮಾಪಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪರವಾನಗಿ ಭೂಮಾಪಕರ ಸಂಘದಿಂದ ಸಚಿವ ಕೆ.ವೆಂಕಟೇಶ್ ಗೆ ಶನಿವಾರ ಮನವಿ ಸಲ್ಲಿಸಲಾಯಿತು. ಮಹದೇವೇಗೌಡ, ಬಿ.ಆರ್.ಮಂಜು , ಎಚ್.ಎಂ.ಮಂಜುನಾಥ್, ಬಿ.ಕೆ.ಪ್ರಜ್ವಲ್, ಅರುಣ್ ಕುಮಾರ್ ಇದ್ದಾರೆ.
ಪಿರಿಯಾಪಟ್ಟಣ: ಪರವಾನಗಿ ಭೂಮಾಪಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪರವಾನಗಿ ಭೂಮಾಪಕರ ಸಂಘದಿಂದ ಸಚಿವ ಕೆ. ವೆಂಕಟೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಹದೇವೇಗೌಡ ಮಾತನಾಡಿ, ಪರವಾನಗಿ ಭೂಮಾಪಕರಾದ ನಾವು 23 ವರ್ಷಗಳಿಂದ ರೈತರು ಮತ್ತು ಸರ್ಕಾರದ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ. ನಮ್ಮ ಸೇವೆ ಪರಿಗಣಿಸಿ ಸರ್ಕಾರಿ ಭೂಮಾಪಕರ ಹುದ್ದೆಯಲ್ಲಿ ವಿಲೀನಗೊಳಿಸಬೇಕೆಂದು ಹಲವಾರು ಬಾರಿ ಮನವಿ ಮಾಡಿದ್ದೇವೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪರವಾನಗಿ ಭೂಮಾಪಕರು ಇಂದು ಸರ್ಕಾರಿ ಭೂಮಾಪಕರು ನಿರ್ವಹಿಸುವ ಎಲ್ಲ ತರಹದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಸೇವಾ ಭದ್ರತೆಯೇ ಇಲ್ಲದಾಗಿದೆ. ಸರ್ಕಾರ ನಿಗದಿಮಾಡಿರುವ ಸೇವಾ ಶುಲ್ಕ ಅವೈಜ್ಞಾನಿಕವಾಗಿದ್ದು, ಜೀವನ ನಡೆಸಲು ಆಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ಅಳಲು ತೋಡಿಕೊಂಡರು.
ಪರವಾನಗಿ ಭೂಮಾಪಕರಿಗೆ ಕೇಂದ್ರ ಸರ್ಕಾರದ ಯೋಜನೆಯಾದ ನಕ್ಷ, ಸ್ವಾಮಿತ್ವ, ಅಳತೆಗಳು ನಿಯೋಜನೆ ಆಗುತ್ತಿವೆ. ಇದರಲ್ಲಿ ಮಾಸಿಕ 25 ಸಾವಿರ ರೂ. ವೇತನ ನಿಗದಿಮಾಡಿದ್ದು, ದಿನವೊಂದಕ್ಕೆ 50 ಪ್ರಕರಣಗಳನ್ನು ಅಳತೆ ಮಾಡಬೇಕೆಂಬ ನಿಯಮ ಮಾಡಲಾಗಿದೆ. ವಾಸ್ತವದಲ್ಲಿ ನಗರ ಪ್ರದೇಶಗಳಲ್ಲಿ ದಿನಕ್ಕೆ 25-30 ಮತ್ತು ಮಲೆನಾಡು ಪ್ರದೇಶಗಳಲ್ಲಿ 10-12 ಪ್ರಕರಣಗಳನ್ನು ಮಾತ್ರ ಅಳತೆ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ನಿಗದಿಯಾಗಿರುವ ವೇತನವೂ ಕೈ ತಪ್ಪುತ್ತಿದೆ. ಈ ರೀತಿಯ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಬಿ. ಆರ್.ಮಂಜು , ಉಪಾಧ್ಯಕ್ಷ ಎಚ್.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಪ್ರಜ್ವಲ್, ಖಜಾಂಚಿ ಅರುಣ್ ಕುಮಾರ್, ಸಲಹೆಗಾರರಾದ ಸಂಜಯ್ ಕುಮಾರ್ ಮತ್ತು ಪದಾಧಿಕಾರಿಗಳಾದ ಮಹೇಂದ್ರ, ರವಿ, ರಮೇಶ್, ಸುನೀಲ್, ರವಿ, ಸತೀಶ್, ಮಂಜು ನಾಯಕ ಇದ್ದರು.