ನಗರದ ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಾಲಾ ಆವರಣದಲ್ಲಿ ಸ್ವಾತಂತ್ರೃ ದಿನ ಸಂಭ್ರಮದಿಂದ ಆಚರಿಸಲಾಯಿತು.
ವಿಜ್ಞಾನಿ ಡಾ.ಜಿ.ಎ.ರವಿಶಂಕರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರೃಕ್ಕಾಗಿ ಸುಮಾರು 200 ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಲಕ್ಷಾಂತರ ಮಂದಿ ಪ್ರಾಣ ಹಾಗೂ ಬದುಕನ್ನು ತ್ಯಾಗ ಮಾಡಿದ್ದಾರೆ. ಅವರ ಬಲಿದಾನವನ್ನು ಗೌರವಿಸುವ ಜತೆಗೆ ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ವಿಜ್ಞಾನ ಸಂಶೋಧನೆಗಳು ಪ್ರಯೋಗಾಲಯಗಳಿಗೆ ಸೀಮಿತವಾಗದೆ ಜನಸಾಮಾನ್ಯರನ್ನು ತಲುಪಿದಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ. ವಿಜ್ಞಾನವು ವೈಜ್ಞಾನಿಕ ಮನೋಭಾವ ಬೆಳೆಸುವುದರ ಜತೆಗೆ ಮೂಢನಂಬಿಕೆಗಳನ್ನು ದೂರ ಮಾಡಿ, ದೈನಂದಿನ ಸಮಸ್ಯೆಗಳಿಗೆ ಸರಳ ಪರಿಹಾರ ಒದಗಿಸುತ್ತದೆ ಎಂದು ಹೇಳಿದರು.
ಮೈಸೂರು ಸಂಶೋಧನೆ ಮತ್ತು ವಿಜ್ಞಾನದ ಪ್ರಮುಖ ಕೇಂದ್ರವಾಗಿದ್ದು, ಸಿಎಫ್‌ಟಿಆರ್‌ಐ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಬೆಮೆಲ್, ಇನ್ಫೋಸಿಸ್ ಸೇರಿದಂತೆ ಹಲವು ಸಂಸ್ಥೆಗಳು ತಾಂತ್ರಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿ, ಸ್ವಾತಂತ್ರೃ ಯಾರೋ ನೀಡಿದ ಭಿಕ್ಷೆಯಲ್ಲ, ಲಕ್ಷಾಂತರ ಜನರ ಹೋರಾಟ ಮತ್ತು ಬಲಿದಾನದ ಫಲ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಗೌರವ ಸಲ್ಲಿಸುವುದಾದರೆ, ಇತರರ ಸ್ವಾತಂತ್ರೃಕ್ಕೆ ಧಕ್ಕೆ ತರದೆ, ಪ್ರತಿಯೊಬ್ಬರನ್ನೂ ಗೌರವಿಸಿ ಜವಾಬ್ದಾರಿಯುತ ನಾಗರಿಕರಾಗಿ ಬದುಕಬೇಕು ಎಂದರು.
ಶೈಲಜಾ ಮಾತನಾಡಿದರು. ಸಂಸ್ಥೆಯ ಸಂಯೋಜಕರಾದ ಮಹಾಂತೇಶ್, ಚೈತ್ರಕುಮಾರಿ, ಮುಖ್ಯಶಿಕ್ಷಕಿ ಭ್ರಮರಾರಂಭ, ವಿಶೇಷ ಶಿಕ್ಷಕರಾದ ಪದ್ಮಾ, ವಿದ್ಯಾವತಿ, ಬೃಂದಾಬಾಯಿ, ಸ್ಪರ್ಶಾ, ಅಭಿಲಾಷಾ, ತ್ರಿವೇಣಿ, ಮಹಾದೇವ, ಮಂಜುಳಾ ಇದ್ದರು.