ಯುವ ಜನರು ರಾಜಕೀಯಕ್ಕೆ ಪ್ರವೇಶಿಸಿದಾಗ ಎದುರಾಗುವ ಟೀಕೆ-ಟಿಪ್ಪಣಿಗಳಿಗೆ ದೃತಿಗೆಡಬಾರದು. ಅವುಗಳನ್ನು ಎದುರಿಸಿ ನಿಲ್ಲಬೇಕು.
ಮೈಸೂರು: ಯುವ ಜನರು ರಾಜಕೀಯ ಕ್ಷೇತ್ರಕ್ಕೆ ಬರುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಸರಸ್ವತಿಪುರಂ ನಾಗರಿಕರ ವತಿಯಿಂದ ಸರಸ್ವತಿಪುರಂ ತೆಂಗಿನ ತೋಟದ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯುವ ಜನರು ರಾಜಕೀಯಕ್ಕೆ ಪ್ರವೇಶಿಸಿದಾಗ ಎದುರಾಗುವ ಟೀಕೆ-ಟಿಪ್ಪಣಿಗಳಿಗೆ ದೃತಿಗೆಡಬಾರದು. ಅವುಗಳನ್ನು ಎದುರಿಸಿ ನಿಲ್ಲಬೇಕು. ಸಿಗುವ ಅವಕಾಶದ ಉತ್ತಮ ಕೆಲಸ ಮಾಡಿ ತೋರಿಸಬೇಕು. ಅಭಿವೃದ್ಧಿ ಕಾರ್ಯ ಜಾರಿಗೊಳಿಸಿ ತಕ್ಕ ಉತ್ತರ ಕೊಡಬೇಕು. ಆಗ ಮಾತ್ರ ಸಮಾಜ, ದೇಶವೂ ಪ್ರಗತಿಯತ್ತ ಸಾಗಲು ಅನುಕೂಲವಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ಕಲ್ಪನೆಯನ್ನು ಇಟ್ಟುಕೊಂಡು 2047ರ ಹೊತ್ತಿಗೆ ದೇಶದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಸಮೂಹ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ಅವಶ್ಯಕತೆ ಇದೆ ಎಂದರು.
ಮೈಸೂರು ಅಭಿವೃದ್ಧಿಗಾಗಿ ನಮ್ಮ ಪೂರ್ವಜರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ದೊಡ್ಡ ಕೊಡುಗೆ ನೀಡಿದ್ದಾರೆ. ನಾಲ್ವಡಿಯವರು ತಮ್ಮ ಜನಪರ ಆಡಳಿತದಿಂದಾಗಿ ಜನಮಾನಸದಲ್ಲಿ ಈಗಲೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ಮಾದರಿ ಕೆಲಸ ಕಾರ್ಯಗಳನ್ನು ಅನುಸರಿಸುತ್ತಿದ್ದು, ಅವರಂತೆ ಅಭಿವೃದ್ಧಿ ಕೆಲಸ ಮಾಡುವ ಮಾರ್ಗದಲ್ಲಿ ಸಾಗಿದ್ದೇನೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಆರ್.ಲಿಂಗಪ್ಪ, ಶಂಕರ ಜಯಂತಿ ಸಭಾ ಅಧ್ಯಕ್ಷ ಸುಂದರೇಶ್, ವಾಸವಿ ಸ್ನೇಹವೃಂದ ಅಧ್ಯಕ್ಷ ಶಾಂತರಾಮ್ ಇತರರಿದ್ದರು.