ಯುವ ಪೀಳಿಗೆಗೆ ಸಾಧಕರ ಆಶಯ ತಿಳಿಯಲಿ: ಎಂಎಲ್ಸಿ ಸಿ.ಎನ್.ಮಂಜೇಗೌಡ
ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿ.ಎನ್.ಮಂಜೇಗೌಡ, ಡಾ.ವಾಮದೇವ, ಜೆ.ಪುಷ್ಪಲತಾ, ಡಾ.ಎಂ.ಡಿ. ಸುದರ್ಶನ್, ಡಾ.ತಿಪ್ಪೇಸ್ವಾಮಿ, ಶಾರದಾ ಶಿವಲಿಂಗಸ್ವಾಮಿ, ಡಾ.ವಿಠಲ್ ಚುಳಿಕಿ, ಟಿ.ಮಹಾಂತೇಶ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಹಾನೀಯರ ಜೀವನ ಕಥೆಗಳು ಮನುಷ್ಯನಲ್ಲಿ ದೊಡ್ಡ ವೈಚಾರಿಕ ಬದಲಾವಣೆ ತರಬಲ್ಲವು
ಸಾಧಕರ ಸಾಧನೆಯ ಹಿಂದಿರುವ ಆಶಯಗಳನ್ನು ತಿಳಿಸಿಕೊಡುವುದು ಅಗತ್ಯವಿದೆ
ಮೈಸೂರು:ನಮ್ಮ ಯುವ ಪೀಳಿಗೆಗೆ ಸಾಧಕರ ಕಷ್ಟಗಳಷ್ಟೇ ಅಲ್ಲದೆ ಅವರ ಸಾಧನೆಯ ಹಿಂದಿರುವ ಆಶಯಗಳನ್ನು ತಿಳಿಸಿಕೊಡುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಸಮಿತಿಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯು ಹಿರಿಯರು, ಮಹನೀಯರು ಮತ್ತು ಸಾಧಕರ ಜೀವನದ ಅನುಭವಗಳನ್ನು ಅರಿತು, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸಾಧಕರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳು ಹಾಗೂ ಅದರಿಂದ ಪಡೆದ ಯಶಸ್ಸಿನ ಫಲವನ್ನು ಇಂತಹ ವೇದಿಕೆಗಳ ಮೂಲಕ ಹಂಚಿಕೊಂಡಾಗ, ಅದು ಕೇಳುಗರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಸಮಾಜವನ್ನು ಉತ್ತಮ ಹಾದಿಗೆ ತರಬೇಕಾದರೆ ಇಂತಹ ವೈಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಉತ್ತಮ ಚಲನಚಿತ್ರಗಳನ್ನು ವೀಕ್ಷಿಸುವುದು, ಒಳ್ಳೆಯ ಪುಸ್ತಕ, ಪತ್ರಿಕೆ ಓದುವುದು ಅತ್ಯಂತ ಅಗತ್ಯ. ಇವು ಮನುಷ್ಯನಲ್ಲಿ ದೊಡ್ಡ ವೈಚಾರಿಕ ಬದಲಾವಣೆ ತರಬಲ್ಲವು ಎಂದು ಹೇಳಿದರು.
ಶಿವಶರಣೆ ಹೇಮರಡ್ಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ಡಾ.ಜಿ.ಎಂ.ವಾಮದೇವ್ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬಳಗವು ಎಂಟು ವರ್ಷಗಳಿಂದ ಸಕ್ರಿಯವಾಗಿದೆ. ಕರ್ನಾಟಕ ಸರ್ಕಾರವು 2017ರಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಅಧಿಕೃತವಾಗಿ ಘೋಷಿಸಿದ್ದು, ಅಂದಿನಿಂದ ಪ್ರತಿವರ್ಷ ಜಯಂತ್ಯುತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಮಾಜ, ನಾಡು ಮತ್ತು ದೇಶಕ್ಕಾಗಿ ಶ್ರಮಿಸಿದ ಮಹನೀಯರ ಸಾಧನೆ, ಅವರು ನೀಡಿದ ಕೊಡುಗೆಗಳು ಹಾಗೂ ಸಂದೇಶಗಳನ್ನು ಸಾರ್ವಜನಿಕರು ಮತ್ತು ಯುವ ಪೀಳಿಗೆಗೆ ತಲುಪಿಸುವುದು ಈ ಜಯಂತಿಗಳ ಮುಖ್ಯ ಉದ್ದೇಶವಾಗಿದೆ. ಈ ಸಂದೇಶಗಳನ್ನು ಜನರು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ಉಪನ್ಯಾಸ ನೀಡಿದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜೆ.ಪುಷ್ಪಲತಾ ಮಾತನಾಡಿ, ಮಲ್ಲಮ್ಮನ ಚರಿತ್ರೆಯು ದ್ಯಾಂಪುರ ಚೆನ್ನಕವಿಗಳು ಬರೆದಿರುವ ಕೃತಿಯಾಗಿದ್ದು, ಇದನ್ನು ಗೊ.ರು. ಚನ್ನಬಸಪ್ಪ ಹೊಸಗನ್ನಡ ಗದ್ಯಾನುವಾದದಲ್ಲಿ ನೀಡಿದ್ದಾರೆ. ಇದು ಸಾಧ್ವಿ ಶಿರೋಮಣಿ ಗೃಹಿಣಿಯ ಜೀವನದ ಪಾವಿತ್ರ್ಯತೆಯನ್ನು ಪರಿಚಯಿಸುವ ಕೃತಿಯಾಗಿದೆ ಎಂದು ಹೇಳಿದರು.
ಮಲ್ಲಮ್ಮ ಕೇವಲ ಪುರಾಣದ ವ್ಯಕ್ತಿಯಲ್ಲ, ಬದಲಿಗೆ ಚಾರಿತ್ರಿಕ ವ್ಯಕ್ತಿಯಾಗಿದ್ದರು. ಇದಕ್ಕೆ ಪೂರಕವಾಗಿ ಮದರಾಸಿನ ಓರಿಯಂಟಲ್ ಲೈಬ್ರರಿಯಲ್ಲಿ ಸಿಗುವ ದಾಖಲೆಗಳ ಪ್ರಕಾರ, ಹೇಮರಡ್ಡಿ ಮತ್ತು ಮಲ್ಲಮ್ಮನವರು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಕಾರ್ಯಗಳನ್ನು ನೆರವೇರಿಸಿದ್ದಾರೆ ಎಂಬ ಉಲ್ಲೇಖವಿದೆ. ಮಲ್ಲಮ್ಮನ ಸಾತ್ವಿಕ ಗುಣವನ್ನು ಸಹಿಸದ ಅವಳ ಒರಗಿತ್ತಿಯರು ಕುತಂತ್ರ ನಡೆಸಿ, ಅವಳನ್ನು ದನ ಕಾಯಲು ಕೊಟ್ಟಿಗೆಗೆ ಹಾಕಿ ಬಿಡುತ್ತಾರೆ. ಕೊಟ್ಟಿಗೆಯಲ್ಲೇ ಜೀವನ ನಡೆಸುತ್ತಾ, ಹಸು-ಕರುಗಳನ್ನು ನೋಡಿಕೊಳ್ಳುವ ಅವಳಿಗೆ ಕೇವಲ ಅಳಸಿದ್ದು, ಉಳಿದದ್ದು ಮಾತ್ರ ಆಹಾರವಾಗಿ ಸಿಗುತ್ತಿತ್ತು. ಅವಳಿಗೆ ಒಳ್ಳೆಯ ಬಟ್ಟೆ, ಒಡವೆ ಅಥವಾ ಕೈಗೆ ಬಳೆಗಳಿರಲಿಲ್ಲ ಎಂದರು.
ಜಗತ್ತನ್ನು ಬದಲಾಯಿಸುವ ಮುನ್ನ ನಮ್ಮ ಸ್ವಂತ ಮನೆ ಹಾಗೂ ಕುಟುಂಬದ ನಾಲ್ಕು ಜನರನ್ನು ಪ್ರೀತಿ ಮತ್ತು ಗೌರವದಿಂದ ಗೆಲ್ಲುವುದು ಮುಖ್ಯ. ನಮ್ಮ ನಡವಳಿಕೆಯಲ್ಲಿ ಪ್ರಾಮಾಣಿಕತೆ ಇದ್ದಾಗ ಮಾತ್ರ ಸಮಾಜದಲ್ಲಿ ಗೌರವ ರಾಜಮನ್ನಣೆ ಹಾಗೂ ಗುರುಗಳ ಶ್ರೀರಕ್ಷೆ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಸಿಇಟಿಆರ್‌ಟಿ ಹಿರಿಯ ವಿಜ್ಞಾನಿ ಡಾ.ತಿಪ್ಪೇಸ್ವಾಮಿ, ಹೇಮರಡ್ಡಿ ಮಲ್ಲಮ್ಮ ಬಳಗದ ಉಪಾಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಕಾರ್ಯದರ್ಶಿಗಳಾದ ಡಾ.ವಿಠಲ್ ಚುಳಿಕಿ, ಟಿ.ಮಹಾಂತೇಶ್ ಇತರರು ಇದ್ದರು.