ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಕೆ.ಹರೀಶ್‌ಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಜಿ.ಲಕ್ಷ್ಮೀಕಾಂತ್ ರೆಡ್ಡಿ ಇತರರು ಇದ್ದರು.
ಮೈಸೂರು: ಡಾ.ಬಾಬು ಜಗಜೀವನ ರಾಮ್ ಅವರು ಮುಂದಾಲೋಚನೆಯಿಂದ ಹಾಕಿರುವ ಮಾರ್ಗದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಬೇಕಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಬೂಜಿ ಅವರು ಕೃಷಿ ಸಚಿವ, ರಕ್ಷಣಾ ಸಚಿವ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರು ಕಾರ್ಯನಿರ್ವಹಿಸಿದ ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶೋಷಿತ ಹಾಗೂ ದಲಿತ ವರ್ಗದವರು ಸಮಾನತೆ ಹಾಗೂ ಸ್ವಾತಂತ್ರೃವಾಗಿ ಇರುವುದಕ್ಕೆ ಅವರ ಮುಖ್ಯಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಶೋಷಿತ ಹಾಗೂ ದಲಿತ ವರ್ಗದವರಿಗೆ ಬಾಬೂಜಿ ಅವರು ಮಾಡಿದಂತಹ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನವಾಗಬೇಕು. ಶಿಕ್ಷಣಕ್ಕೆ ಪ್ರತಿಯೊಬ್ಬರೂ ಹೆಚ್ಚು ಒತ್ತು ನೀಡಬೇಕು. ಬಡವರು, ಹಿಂದುಳಿದ ಪ್ರತಿಯೊಂದು ಸ್ತರದ ಜನರು ಶಿಕ್ಷಣ ಪಡೆಯಬೇಕು. ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಣ್ಣುಮಕ್ಕಳು ಆಸಕ್ತಿ ತೋರುತ್ತಿದ್ದು, ಇತ್ತೀಚಿಗೆ ಗಂಡು ಮಕ್ಕಳಲ್ಲಿ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಶಿಕ್ಷಣದಿಂದ ಎಲ್ಲ ಸಮುದಾಯಗಳು ಮುಂದುವರಿಯುತ್ತಿವೆ. ಎಲ್ಲರೂ ಉನ್ನತ ಶಿಕ್ಷಣವನ್ನು ಪಡೆದು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಆಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ್ ಅವರು ಕಂಡಂತಹ ಕನಸು ನನಸಾಗುವ ಮೂಲಕ ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಲು ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಹುಟ್ಟಿದ ಮೇಲೆ ಸಾಧಕನಾಗಬೇಕು. ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ನಮ್ಮ ದೇಶದ ಹೆಸರನ್ನು ಬೆಳಗಿಸಬೇಕು ಎಂದು ತಿಳಿಸಿದರು.
ಸಮಾಜಕ್ಕೆ ಕೊಡುಗೆಯನ್ನು ನೀಡಿದ ಮಹನೀಯರಾದ ಅಂಬೇಡ್ಕರ್, ಗಾಂಧೀಜಿ, ಬಾಬೂಜಿ ಸೇರಿದಂತೆ ಮುಂತಾದವರನ್ನು ಆಧಾರವಾಗಿಟ್ಟುಕೊಂಡು ಪ್ರಾಮಾಣಿಕವಾಗಿ, ಪರಿಶುದ್ಧ ಮನಸ್ಸಿನಿಂದ ಪ್ರತಿಯೊಬ್ಬರೂ ಸಾಧನೆ ಮಾಡಬೇಕು ಎಂದರು.
ಅಂತರ್ಜಾತಿಯ ವಿವಾಹವಾದರೆ ಕೊಲೆಗಳು ಹಾಗೂ ಹಳ್ಳಿಗಳಲ್ಲೋ ದಲಿತರನ್ನು ದೂರ ಇಡುವುದು ಹಿಂದಿನ ಕಾಲದಿಂದಲೂ ನಡೆಯುತ್ತಿತ್ತು. ಇದರ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದವರು ಬಾಬೂಜಿ ಅವರು. ಸ್ವಾತಂತ್ರೃ ಪೂರ್ವದಲ್ಲಿ ಚಳವಳಿ ಮಾಡಿ ಗಾಂಧೀಜಿ ಅವರ ಬೆನ್ನೆಲುಬಾಗಿ ನಿಂತು ದೇಶಕ್ಕೆ ಅಪಾರ ಕೊಡುಗೆ ನೀಡಿದರು. ಅವರ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ಬಾಬೂಜಿ ಅವರು ಕೂಲಿಕಾರ್ಮಿಕರಿಗಾಗಿ ಜಾರಿಗೆ ತಂದಂತಹ ಕಾಯ್ದೆಗಳು ಈಗಲೂ ಚಾಲ್ತಿಯಲ್ಲಿ ಇವೆ. ಪ್ರತಿಹಳ್ಳಿಗೂ ಅಂಚೆ ಕಚೇರಿಯನ್ನು ಕೊಡುಗೆ ನೀಡಿ ಜನರಿಗೆ ಸಂಪರ್ಕ ಸಾಧಿಸಲು ಕಾರಣಿಕರ್ತರಾದರು. ರೈಲ್ವೆ ಮಂತ್ರಿಯಾಗಿ 10 ಲಕ್ಷ ನೌಕರರಿಗೆ ಕೆಲಸ ನೀಡಿದರು. ರೈತರ ಕಷ್ಟಗಳನ್ನು ನೀಗಿಸುವುದರೊಂದಿಗೆ ಜನರಿಗೆ ಆಹಾರ ಭದ್ರತೆ ನೀಡಿ ಹಸಿರು ಕ್ರಾಂತಿಯ ಹರಿಕಾರರಾದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಎಲ್ಲರೂ ಸಂಘಟಿತರಾಗಿ ಸಮಾಜಮುಖಿ ಕೆಲಸ ಮಾಡಬೇಕಿದೆ ಎಂದರು.
ಎಂಎಲ್‌ಸಿ ಸಿ.ಎನ್.ಮಂಜೇಗೌಡ ಮಾತನಾಡಿ, ದೇಶವನ್ನು ಭವ್ಯ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಾದರೆ ಮಹನೀಯರ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ, ನಗರದ ರೈಲ್ವೆ ನಿಲ್ದಾಣದ ಎದುರಿನ ಬಾಬೂಜಿ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಬಳಿಕ ರೈಲ್ವೆ ನಿಲ್ದಾಣದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಇತರರು ಇದ್ದರು.