ವಿಷಯ ಮನದಟ್ಟು ಮಾಡಿಕೊಂಡು ಮಕ್ಕಳು ಓದಲಿ

ಕೊಡಗುಗೌಡ ಸಮುದಾಯ ಭವನದಲ್ಲಿ ಭಾನುವಾರ ‘ಶಿಕ್ಷಣ ತಜ್ಞರಿಂದ ಮಕ್ಕಳಿಗೆ ಮಾರ್ಗದರ್ಶನ’ ಕಾರ್ಯಕ್ರಮ ನೆರವೇರಿತು. ಆರ್.ಎ.ಚೇತನರಾಮ್, ಡಾ.ಯಶಸ್ವಿನಿ ಸಂಜಯ್, ಅಂಶಿ ಪ್ರಸನ್ನಕುಮಾರ್, ಯು.ಬಸಪ್ಪ, ಕೆ.ವಿ.ಶ್ರೀಧರ್, ಕೆ.ವಿ.ಮಲ್ಲೇಶ್ ಇದ್ದರು.
ಕೊಡಗುಗೌಡ ಸಮುದಾಯ ಭವನದಲ್ಲಿ ಭಾನುವಾರ ‘ಶಿಕ್ಷಣ ತಜ್ಞರಿಂದ ಮಕ್ಕಳಿಗೆ ಮಾರ್ಗದರ್ಶನ’ ಕಾರ್ಯಕ್ರಮ ನೆರವೇರಿತು. ಆರ್.ಎ.ಚೇತನರಾಮ್, ಡಾ.ಯಶಸ್ವಿನಿ ಸಂಜಯ್, ಅಂಶಿ ಪ್ರಸನ್ನಕುಮಾರ್, ಯು.ಬಸಪ್ಪ, ಕೆ.ವಿ.ಶ್ರೀಧರ್, ಕೆ.ವಿ.ಮಲ್ಲೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೇರಣಾತ್ಮಕ ಭಾಷಣಕಾರ ಆರ್.ಎ.ಚೇತನರಾಮ್ ಸಲಹೆ

ಮೊದಲು ಜ್ಞಾನ, ಸುಜ್ಞಾನ ಮಾತ್ರ ಇತ್ತು. ಈಗ ಇವುಗಳ ಜತೆಗೆ ವಿಜ್ಞಾನ, ತಂತ್ರಜ್ಞಾನ ಕೂಡ ಬಂದಿದೆ. ಪ್ರಸ್ತುತ ಜ್ಞಾನಕ್ಕೆ ಬೆಲೆ ಇಲ್ಲ. ಆ ಜ್ಞಾನವನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದಕ್ಕೆ ಬೆಲೆ ಎಂದು ಪ್ರೇರಣಾತ್ಮಕ ಭಾಷಣಕಾರ ಆರ್.ಎ. ಚೇತನರಾಮ್ ತಿಳಿಸಿದರು.

ನವಭಾರತ್ ನಿರ್ಮಾಣ್ ಟ್ರಸ್ಟ್ ವಿಜಯನಗರ ಒಂದನೇ ಹಂತದ ಕೊಡಗುಗೌಡ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶಿಕ್ಷಣ ತಜ್ಞರಿಂದ ಮಕ್ಕಳಿಗೆ ಮಾರ್ಗದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಸಾಮಾಜಿಕ, ಕೌಟುಂಬಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳಿದ್ದವು. ಆದರೆ ಇವತ್ತು ಈ ಮೂರು ಇಲ್ಲ. ಆದ್ದರಿಂದ ಮಕ್ಕಳು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಓದಬೇಕು. ಏಕಾಗ್ರತೆ ಮತ್ತು ನೆನಪಿನ ಶಕ್ತಿ ಚೆನ್ನಾಗಿರಬೇಕು. ಪರೀಕ್ಷೆಯನ್ನು ಯುದ್ಧ ಎಂಬಂತೆ ಭಾವಿಸದೇ ಹಬ್ಬ ಎಂದು ತಿಳಿದು ಉತ್ಸಾಹದಿಂದ ಉತ್ತರ ಬರೆಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಕನಸು ಮತ್ತು ಗುರಿ ಇದ್ದರೆ ಮಾತ್ರ ಯಶಸ್ಸು. ಇದಕ್ಕೆಲ್ಲ ಮಕ್ಕಳಿಗೆ ಕಲಿಯುವ ಆಸಕ್ತಿ ಇರಬೇಕು. ಪಾಲಕರು ಸಹ ಸಂಜೆ 6.30 ರಿಂದ ರಾತ್ರಿ 8.30 ರವರೆಗೆ ಟಿವಿ, ಮೊಬೈಲ್ ಆಫ್ ಮಾಡಿ, ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಬೇಕು ಎಂದರು.
ಇವತ್ತಿನ ಮಕ್ಕಳಿಗೆ ಎನ್‌ಸಿಆರ್‌ಟಿಇ ಪಠ್ಯಕ್ರಮ ಇದೆ. ಆದರೆ ವಿಜ್ಞಾನ ಶಿಕ್ಷಕರಿಗೆ ಕಳೆದ 20 ವರ್ಷಗಳಿಂದ ತರಬೇತಿಯೇ ಆಗಿಲ್ಲ. ಯಾವ ಕಾಲದಲ್ಲೋ ಬಿ.ಇಡಿ ಮಾಡಿದವರು ಈ ಪಠ್ಯಕ್ರಮದ ಬೋಧಿಸಲು ಹೇಗೆ ಸಾಧ್ಯ? ಆದ್ದರಿಂದ ಶಿಕ್ಷಕರಿಗೆ ತರಬೇತಿ ಕೊಡಿಸುವ ಕೆಲಸ ಆಗಬೇಕು ಎಂದರು.
ಜೆಎಸ್‌ಎಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞರಾದ ಡಾ.ಯಶಸ್ವಿನಿ ಸಂಜಯ್ ಮಾತನಾಡಿ, ಉನ್ನತವಾದ ಗುರಿ, ನಿರಂತರ ಕಲಿಕೆ, ಕಠಿಣ ಪರಿಶ್ರಮ, ಛಲ, ಸತತ ಪ್ರಯತ್ನ, ಕೌಶಲ, ಆಲೋಚನಾ ಕ್ರಮ ಮತ್ತು ಕ್ರಿಯೆ, ಆತ್ಮವಿಶ್ವಾಸ-ಈ ಎಂಟು ಅಂಶಗಳು ಮುಖ್ಯವಾಗುತ್ತವೆ. ಜತೆಗೆ ಗ್ರಹಿಸುವ ಶಕ್ತಿ ಚೆನ್ನಾಗಿರಬೇಕು, ಓದಬೇಕು. ಮತ್ತೆ ಓದಬೇಕು ಹಾಗೂ ಸತತ ಅಭ್ಯಾಸ ಮಾಡಬೇಕು ಎಂದು ಸಲಹೆ ಮಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಯು. ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷರೂ ಆದ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ್, ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಟ್ರಸ್ಟ್ ಪತ್ರಿಕಾ ಕಾರ್ಯದರ್ಶಿ ವಿ.ರೋಹಿತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net