ತಂಬಾಕಿಗೆ ಪರ್ಯಾಯವಾಗಿ ರೇಷ್ಮೆ ರೂಪುಗೊಳ್ಳಲಿ

ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಅರಣ್ಯ ಇಲಾಖೆಯ ಡಿಸಿಎಫ್ ಕಿರುತಂಬನ್, ತಾಪಂ ಇಒ ಡಿ.ಬಿ.ಸುನಿಲ್ ಕುಮಾರ್, ತಹಸೀಲ್ದಾರ್ ನಿಸರ್ಗ ಪ್ರಿಯಾ ಇತರರು ಇದ್ದರು.
ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಅರಣ್ಯ ಇಲಾಖೆಯ ಡಿಸಿಎಫ್ ಕಿರುತಂಬನ್, ತಾಪಂ ಇಒ ಡಿ.ಬಿ.ಸುನಿಲ್ ಕುಮಾರ್, ತಹಸೀಲ್ದಾರ್ ನಿಸರ್ಗ ಪ್ರಿಯಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • tobacco
ಪಿರಿಯಾಪಟ್ಟಣ: ತಾಲೂಕಿನಲ್ಲಿ ರೇಷ್ಮೆ ಬೆಳೆಯನ್ನು ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ ರೂಪುಗೊಳಿಸಲು ಕೃಷಿ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಬೇಕಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ತಂಬಾಕಿಗೆ ಸೂಕ್ತ ದರ ದೊರಕದೆ ಬೆಳೆಗಾರರು ಹತಾಶರಾಗಿದ್ದಾರೆ. ರೇಷ್ಮೆ ಬೆಳೆ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ರೈತರಿಗೆ ಸೂಕ್ತ ತಿಳಿವಳಿಕೆ ನೀಡಿದಲ್ಲಿ ತಂಬಾಕು ಬೆಳೆಗಾರರು ರೇಷ್ಮೆ ಬೆಳೆಯತ್ತ ಮುಖ ಮಾಡಲಿದ್ದಾರೆ ಎಂದರು.
2023-24ರಲ್ಲಿ ಬೈ ವೋಲ್ಟೀನ್ ಸಿಎಸ್‌ಆರ್ ರೇಷ್ಮೆ ಹೈಬ್ರಿಡ್ ತಳಿಗೆ ಪ್ರತಿ ಕೆಜಿ ಗೆ 330 ರಿಂದ 350 ರೂ. ದೊರಕುತ್ತಿತ್ತು. ಈಗ ಪ್ರತಿ ಕೆಜಿ ಗೆ 850 ರಿಂದ 900 ರೂ.ವರೆಗೂ ದರ ಇದೆ. ಮುಂದೆಯೂ ರೇಷ್ಮೆ ದರ ಇಳಿಕೆಯಾಗುವ ಸಾಧ್ಯತೆಗಳಿಲ್ಲ. ಈ ನಿಟ್ಟಿನಲ್ಲಿ ರೈತರಿಗೆ ಮಾಹಿತಿ ನೀಡಬೇಕಿದೆ ಎಂದರು.
ತಾಲೂಕಿನ ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರಗಳ ದಾಸ್ತಾನು ಇರುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ರೈತರಿಗೆ ನ್ಯಾಯಯುತವಾದ ದರದಲ್ಲಿ ರಸಗೊಬ್ಬರ ದೊರಕಲಿದೆ. ಗ್ರಾಪಂ ಮತ್ತು ಹೋಬಳಿ ಮಟ್ಟದಲ್ಲಿ ರೈತರ ಸಭೆ ನಡೆಸಿ ಸಿರಿ ಧಾನ್ಯಗಳ ಕೃಷಿ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ರಾಗಿ ಖರೀದಿ ಕೇಂದ್ರದ ಬಗ್ಗೆ ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ ಅವರಿಂದ ಮಾಹಿತಿ ಪಡೆದ ಸಚಿವರು ತಾಲೂಕಿನಲ್ಲಿ 3.18 ಲಕ್ಷ ಕ್ವಿಂಟಾಲ್ ರಾಗಿ ಮಾರಾಟ ಮಾಡುವುದಾಗಿ ರೈತರು ನೋಂದಣಿ ಮಾಡಿಸಿದ್ದಾರೆ. ಆದರೆ ಇದುವರೆಗೂ ಶೇ.50ರಷ್ಟು ರಾಗಿ ಮಾರಾಟವಾಗಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಖಾಸಗಿ ರಾಗಿ ಖರೀದಿದಾರರು ನೋಂದಣಿ ಮಾಡಿಕೊಂಡಿರುವ ರೈತರ ಹೆಸರಿನಲ್ಲಿ ರಾಗಿ ಮಾರಾಟ ಮಾಡುತ್ತಿರುವುದಾಗಿ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಾಲೂಕಿನ ರಾವಂದೂರು ಮತ್ತು ಹಾರನಹಳ್ಳಿಗಳಲ್ಲಿ ಸೂಕ್ತ ಸರ್ಕಾರಿ ಜಾಗಗಳನ್ನು ಗುರುತಿಸಿ ಅಲ್ಲಿ ಮಾರುಕಟ್ಟೆ ಯಾರ್ಡ್ ಮತ್ತು ಗೋದಾಮುಗಳನ್ನು ನಿರ್ಮಿಸಲು ಪರಿಶೀಲಿಸುವಂತೆ ತಹಸೀಲ್ದಾರ್ ನಿಸರ್ಗಪ್ರಿಯರಿಗೆ ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ರಿಂದ ಮಾಹಿತಿ ಪಡೆದ ಸಚಿವ ವೆಂಕಟೇಶ್ ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ ಜಾಗೃತಿ ವಹಿಸಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು, ಬೆಟ್ಟದಪುರ ವೈದ್ಯರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದ ಸಚಿವರು ಸಾರ್ವಜನಿಕರಿಂದ ದೂರು ಬಂದಂತಹ ಸಂದರ್ಭದಲ್ಲಿ ಪರಿಶೀಲನೆ ನಡೆಸಿ ವೈದ್ಯರಿಗೆ ನೋಟಿಸ್ ನೀಡುವಂತೆ ತಿಳಿಸಿದರು.
ಅಬಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರಗತಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಡಿಸಿಎಫ್ ಕಿರುತಂಬನ್, ತಾಪಂ ಇಒ ಡಿ.ಬಿ.ಸುನಿಲ್ ಕುಮಾರ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕೆಡಿಪಿ ಸಮಿತಿ ಸದಸ್ಯರಾದ ಕೆ.ಆರ್.ನಿರೂಪಮಾ, ಲಕ್ಷ್ಮೀನಾರಾಯಣ, ಮಹಮ್ಮದ್ ಶಫಿ, ಶೇಖರ್, ಮಹದೇವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ತೋಟಗಾರಿಕಾ ಇಲಾಖೆಯ ಫಲಾನುಭವಿಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡುವಲ್ಲಿ ವಿಫಲರಾದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮತ್ತು ತೋಟಗಾರಿಕೆ ಅಧಿಕಾರಿ ಪ್ರಸಾದ್ ವಿರುದ್ಧ ಗರಂ ಆದ ಸಚಿವರು, ಕೆಡಿಪಿ ಸಭೆಗೆ ಬರುವಾಗ ಸೂಕ್ತ ಮಾಹಿತಿಗಳನ್ನು ತರಬೇಕು ಎನ್ನುವ ಪರಿಜ್ಞಾನ ನಿಮಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಕೂಡಲೇ ಕಚೇರಿಗೆ ಹೋಗಿ ಮಾಹಿತಿ ತೆಗೆದುಕೊಂಡು ನನ್ನ ಅನುಮತಿ ಪಡೆದು ಸಭೆಯೊಳಗೆ ಬನ್ನಿ ಎಂದು ಕಟುವಾಗಿ ಸೂಚಿಸಿದರು. ಜತೆಗೆ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡುವುದಲ್ಲ. ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net