ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಮಾದರಿಯಾಗಲಿ

ಎಚ್.ಡಿ.ಕೋಟೆ ಪಟ್ಟಣದ ಗುರು ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶಿಕ್ಷಕಿಯರು ಸೌಮ್ಯಾ ಅನಿಲ್ ಅವರನ್ನು ಅಭಿನಂದಿಸಿದರು. ಬಿ.ಎಲ್. ರಾಜು, ಎಲ್.ಕೆ. ರೂಪಾ ಪ್ರಮೋದ್, ಕೃಷ್ಣಯ್ಯ ಇತರರಿದ್ದರು.
ಎಚ್.ಡಿ.ಕೋಟೆ ಪಟ್ಟಣದ ಗುರು ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶಿಕ್ಷಕಿಯರು ಸೌಮ್ಯಾ ಅನಿಲ್ ಅವರನ್ನು ಅಭಿನಂದಿಸಿದರು. ಬಿ.ಎಲ್. ರಾಜು, ಎಲ್.ಕೆ. ರೂಪಾ ಪ್ರಮೋದ್, ಕೃಷ್ಣಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕಿ ಸೌಮ್ಯಾ ಅನಿಲ್ ಚಿಕ್ಕಮಾದು ಅಭಿಮತ
ಎಚ್.ಡಿ. ಕೋಟೆ : ಸಾವಿತ್ರಿಬಾಯಿ ಫುಲೆಯವರು ಸ್ವತಂತ್ರ ಪೂರ್ವದಲ್ಲಿ ಶಾಲೆಗಳನ್ನು ಆರಂಭಿಸಿ, ಶಾಲೆ ಬಿಟ್ಟ ಮಕ್ಕಳಿಗೆ ಮತ್ತೆ ಓದಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು’ ಸಾವಿತ್ರಿ ಭಾಯಿ ಪುಲೆಯವರು ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದು, ಶಿಕ್ಷಕಿಯರಿಗೆ ಮಾದರಿಯಾಗಿ ನಿಲ್ಲುತ್ತಾರೆ’ ಎಂದು ಸಮಾಜ ಸೇವಕಿ ಸೌಮ್ಯಾ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಫುಲೆಯವರು ಅಂದು ಶಾಲೆ ಬಿಟ್ಟ ಮಕ್ಕಳಿಗೆ ಶಾಲೆ ಕಟ್ಟಿದಂತೆ ಇಂದಿನ ಶಿಕ್ಷಕಿಯರು ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಕರೆದುಕೊಂಡು ಬರಬೇಕು. ಶೂನ್ಯ ದಾಖಲಾತಿ ಇರುವ ಶಾಲೆಗಳಿಗೆ ಮತ್ತೆ ದಾಖಲಾತಿ ಆಗುವಂತೆ ಹಾಗೂ ಹೆಣ್ಣು ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಬೇಕು’ ಎಂದರು.
ಎಚ್.ಡಿ. ಕೋಟೆ ತಾಲೂಕಿನಲ್ಲಿ ಶೇ. 80 ರಷ್ಟು ಮಹಿಳಾ ಶಿಕ್ಷಕಿಯರಿದ್ದಾರೆ, ಮಕ್ಕಳನ್ನು ತಾಯಿಯಂತೆ ಪೋಷಣೆ ಮಾಡಿಕೊಂಡು ಶಿಕ್ಷಣವನ್ನು ನೀಡುತ್ತಿದ್ದಾರೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್. ರಾಜು ಮಾತನಾಡಿ ’ತಾಲೂಕಿನಲ್ಲಿ ಒಟ್ಟು 350 ಅತಿಥಿ ಶಿಕ್ಷಕರಿದ್ದಾರೆ, ಕಾಯಂ ಶಿಕ್ಷಕರ ಕೊರತೆಯಿಂದಾಗಿ 53 ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಶಾಲೆಗಳನ್ನು ನಡೆಸಿಕೊಂಡು ಹೋಗುವ ಸ್ಥಿತಿ ಇದೆ, ಅಂತಹ ಅತಿಥಿ ಶಿಕ್ಷಕರನ್ನು ಅಭಿನಂಧಿಸಲಾಗಿದೆ’ ಎಂದರು.
ಈ ಭಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.100 ಫಲಿತಾಂಶ ನೀಡುವ ಭರವಸೆ ನೀಡಿದ್ದಾರೆ ಎಂದರು.
ಪತಿ ಮೃತಪಟ್ಟ 18 ಗಂಟೆಯೊಳಗಾಗಿ ಮಕ್ಕಳಿಗೆ ಪಾಠ ಪ್ರವಚನ ನಡೆಸಲು ಜ್ಯೋತಿ ಎಂಬ ಶಿಕ್ಷಕಿ ಶಾಲೆಗೆ ಹಾಜರಾಗುತ್ತಾರೆ. ಅಂತಹ ದಿಟ್ಟ ಹೆಜ್ಜೆ ಇಟ್ಟಾಗ ಮಹಿಳೆಗೆ ಸ್ಥಾನಮಾನ ದೊರೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಸಾಧನೆ ತೋರಿದ ಮಹಿಳಾ ಶಿಕ್ಷಕಿಯರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷೆ ಎಲ್.ಕೆ. ರೂಪಾ ಪ್ರಮೋದ್ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ಇಂದಿಗೂ ನಡೆಯುತ್ತಿದೆ, ದೌರ್ಜನ್ಯದ ಸ್ವರೂಪ ಬದಲಾಗಿದೆಯೇ ಹೊರತು ದೌರ್ಜನ್ಯ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗುರುಭವನದ ನವೀಕರಣಕ್ಕೆ ಶಾಸಕರ ಗಮನಕ್ಕೆ ತರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮನ್ವಯಾಧಿಕಾರಿ ಕೃಷ್ಣಯ್ಯ ಮಾತನಾಡಿ, ಭಾರತದಲ್ಲಿ ಸಿಂಧೂ ಬಯಲಿನ ನಾಗರಿಕತೆಯನ್ನು ಅಧ್ಯಯನ ಮಾಡಿದಾಗ ಮಾತೃ ಪ್ರಧಾನವಾದ ಕುಟುಂಬ ವ್ಯವಸ್ಥೆಯನ್ನು ಹೊಂದಿತ್ತು, ಅದನ್ನು ಪಾಲಿಸಿಕೊಂಡು ಬಂದಂತೆಯೇ ಅಲ್ಲದೇ ಹಳ್ಳಿಗಳಲ್ಲಿ ಇಂದಿಗೂ ಸಹ ಗ್ರಾಮದೇವತೆ ಎಂದೇ ಗುರುತಿಸಲಾಗುತ್ತದೆ, ಆ ನಂತರದ ದಿನಗಳಲ್ಲಿ ಆಧುನಿಕ ಭಾರತ ಮತ್ತು ರಾಜಾಳ್ವಿಕೆ ಭಾರತದಲ್ಲಿ ಪುರುಷ ಪ್ರಧಾನ ಭಾರತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭೀಮಪ್ಪ, ಸೌಮ್ಯಾ ಮಂಜುನಾಥ್, ಜಿಲ್ಲಾ ಅಧ್ಯಕ್ಷೆ ಸರಸ್ವತಮ್ಮ, ಸಹ ಕಾರ್ಯದರ್ಶಿ ರೇಖಾ, ಜಶಿಲಾ, ಮಂಜುನಾಥ್, ಸಿ.ಆರ್.ಪಿ. ನಂಜುಂಡಯ್ಯ, ಲೇಪಾಕ್ಷಿ, ಪ್ರಮೋದ್, ಯಶವಂತ್, ಪ್ರಶಾಂತ್, ಲಿಂಗರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net