ತಿನ್ನುವ ಆಹಾರ ಚೆಲ್ಲುವ ಮನಸ್ಥಿತಿ ದೂರವಾಗಲಿ

ಜೆಎಸ್‌ಎಸ್ ಪ್ರಧಾನ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಡಾ.ಜಯಪ್ಪ ಹೊನ್ನಾಳಿ, ಎನ್.ಎಂ.ಶಿವಶಂಕರಪ್ಪ, ಹುಸ್ಕೂರು ಅಂಬಿಕಾ ಶಿವನಂಜಪ್ಪ ಇತರರಿದ್ದರು.
ಜೆಎಸ್‌ಎಸ್ ಪ್ರಧಾನ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಡಾ.ಜಯಪ್ಪ ಹೊನ್ನಾಳಿ, ಎನ್.ಎಂ.ಶಿವಶಂಕರಪ್ಪ, ಹುಸ್ಕೂರು ಅಂಬಿಕಾ ಶಿವನಂಜಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಜಯಪ್ಪ ಹೊನ್ನಾಳಿ ಸಲಹೆ
  • ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮ
  • ನಗರದ ವಿ.ವಿ.ರಸ್ತೆಯಲ್ಲಿ ಇರುವ ಜೆಎಸ್‌ಎಸ್ ಪ್ರಧಾನ ಭವನದ ಸಭಾಂಗಣದಲ್ಲಿ ಕಾರ್ಯಕ್ರಮ
ಮೈಸೂರು: ಸಕಲ ಜೀವರಾಶಿಗಳು ಸೇವಿಸುವ ಆಹಾರಕ್ಕೆ ತನ್ನದೆ ಆದ ಮಹತ್ವವಿದೆ. ಹಾಗಾಗಿ ಆ ಮಹತ್ವದ ಅರಿವನ್ನು ಮೂಡಿಸಲು ಬಸವವಾದಿ ಶರಣರು ದಾಸೋಹ ಪರಿಕಲ್ಪನೆಯನ್ನು ಪ್ರಚುರ ಪಡಿಸಿದರು ಎಂದು ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ಬಣ್ಣಿಸಿದರು.
ನಗರದ ವಿ.ವಿ.ರಸ್ತೆಯಲ್ಲಿ ಇರುವ ಜೆಎಸ್‌ಎಸ್ ಪ್ರಧಾನ ಭವನದ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗತ್ತಿನ ಅನೇಕ ದೇಶಗಳಲ್ಲಿ ಜನರು ಈಗಲೂ ಹಸಿವಿನಿಂದ ಸಾಯುತ್ತಿದ್ದಾರೆ. ಅವರಿಗೆ ಒಂದು ಹೊತ್ತಿನ ಊಟವು ಸಮರ್ಪಕವಾಗಿ ಸಿಗುತ್ತಿಲ್ಲ. ಆದರೆ ಮತ್ತೊಂದು ಕಡೆ ಆಹಾರ ಪದಾರ್ಥಗಳನ್ನು ಅರ್ಧಂಬರ್ಧ ಸೇವಿಸಿ ಚೆಲ್ಲಾಡುತ್ತಾರೆ. ಈ ಮನಸ್ಥಿತಿಯೂ ಸಮಾಜದಿಂದ ದೂರವಾಗಬೇಕು. ಹಸಿದವರನ್ನು ಗುರುತಿಸಿ ಅವರಿಗೆ ಅನ್ನ ನೀಡುವ ಕೆಲಸವಾಗಬೇಕು. ಇಂತಹ ಕೆಲಸವನ್ನೇ ಶರಣರು 800 ವರ್ಷಗಳ ಹಿಂದೇ ಅನುಷ್ಠಾನಕ್ಕೆ ತಂದಿದ್ದರು ಎಂದು ಸ್ಮರಿಸಿದರು.
ಮಡಿಕೆಯಲ್ಲಿ ಬೇಯುವ ಅಕ್ಕಿಯು ಅನ್ನವಾಗಿ ಲಕ್ಷಾಂತರ ಜನರ ಹೊಟ್ಟೆ ಹಸಿವನ್ನು ನೀಗುವ ಮೂಲಕ ಸಾರ್ಥಕತೆಯನ್ನು ಗಳಿಸಿಕೊಳ್ಳುತ್ತದೆ. ಅಂತಹ ಅನ್ನವನ್ನು ಸೇವಿಸುವ ಜನರು ಸತ್ಕಾರ್ಯಗಳನ್ನು ಮಾಡಬೇಕು. ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.
ಸತ್ಯ ಶುದ್ಧ ಕಾಯಕ ಮಾಡಿ, ಅದರಿಂದ ಸಂಪಾದಿಸಿದ ಅನ್ನ ಮಾತ್ರ ಲಿಂಗಕ್ಕೆ ಅರ್ಪಿತವಾಗುತ್ತದೆ. ಶುದ್ಧವಿಲ್ಲದ ಕೆಲಸ ಮಾಡಿ ಕಾರೇಸೊಪ್ಪನ್ನು ಗಳಿಸಿದರೂ ಅದು ಲಿಂಗಕ್ಕೆ ಸಲ್ಲುವುದಿಲ್ಲ ಎಂದು ಶರಣರು ತಮ್ಮ ವಚನದಲ್ಲಿ ಹೇಳಿದ್ದಾರೆ. ಆದ್ದರಿಂದ ಜನರು ಉತ್ತಮ ಮಾರ್ಗದಲ್ಲಿ ಕೆಲಸ ಮಾಡಿ ಸಂಪಾದನೆ ಮಾಡಬೇಕು. ದೇಶದ ಮುಂದಿನ ಪ್ರಜೆಗಳಾಗುವ ಯುವ ಸಮೂಹವು ಈ ವಿಚಾರವನ್ನು ಅರಿತು ಮುನ್ನಡೆಯಬೇಕು ಎಂದರು.
ಜನರು ಕೊಳ್ಳುಬಾಕ ಸಂಸ್ಕೃತಿಯಿಂದ ವಿಮುಖರಾಗಬೇಕು. ಎಲ್ಲವೂ ನನಗೇ ಬೇಕು ಎಂದುಕೊಂಡು ತಲೆಮಾರುಗಳಿಗೂ ಸಂಪಾದನೆ ಮಾಡುವುದನ್ನು ಬಿಡಬೇಕು. ನಮಗೆ ಸಮಾಜದಲ್ಲಿ ಗೌರವದಿಂದ ಬದುಕಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಸಂಪಾದನೆ ಮಾಡಬೇಕು. ಅದು ಕೂಡ ನ್ಯಾಯವಾದ ದಾರಿಯಲ್ಲಿ. ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಇದಕ್ಕೂ ಮೊದಲು ಜೆಎಸ್‌ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ವಿಭಾಗದ ನಿರ್ದೇಶಕ ಎನ್.ಎಂ.ಶಿವಶಂಕರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೆಎಸ್‌ಎಸ್ ಎಸ್‌ಟಿಯುನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಹುಸ್ಕೂರು ಅಂಬಿಕಾ ಶಿವನಂಜಪ್ಪ ವಚನಗಳಲ್ಲಿ ಆಹಾರ ಪದ್ಧತಿ ಕುರಿತು ಉಪನ್ಯಾಸ ನೀಡಿದರು. ದತ್ತಿ ದಾನಿಗಳಾದ ರಾಜೀವಿ ಚಿಕ್ಕಪುಟ್ಟಯ್ಯ, ಕೆ.ಪಿ.ಮಲ್ಲಿಕಾರ್ಜುನ, ಶಶಿಕಲಾ, ಡಾ.ಕೆ.ಎನ್.ಮಹೇಶ್, ನಿಲಯ ವ್ಯವಸ್ಥಾಪಕ ಡಿ.ಜಿ.ಪ್ರದೀಪ್‌ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net