ಸಂಗೀತ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 3ನೇ ಪ್ರದರ್ಶಕ ಕಲೆಗಳ ರಾಷ್ಟ್ರೀಯ ಸಮ್ಮೇಳನ ಮತ್ತು ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ನಾಗೇಶ್ ವಿ.ಬೆಟ್ಟಕೋಟೆ, ಪ್ರೊ. ಎಂ.ಜಿ.ಮಂಜುನಾಥ್, ಪ್ರೊ.ಕೆ.ರಾಮಮೂರ್ತಿ ರಾವ್, ಡಾ.ಶೋಭಾರಾಣಿ ಬೋಳಾರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
3ನೇ ಪ್ರದರ್ಶಕ ಕಲೆಗಳ ರಾಷ್ಟ್ರೀಯ ಸಮ್ಮೇಳನ ಮತ್ತು ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮ
ಭರತನಾಟ್ಯ ನೃತ್ಯ ಪ್ರಕಾರವು ಭವಿಷ್ಯದಲ್ಲೂ ಉತ್ತಮವಾಗಿ ಬೆಳೆಯಲಿ
ಭರತನಾಟ್ಯ ಕನ್ನಡದ ಸ್ವಾಭಿಮಾನ
ಮೈಸೂರು: ದಕ್ಷಿಣ ಭಾರತ ಪ್ರಮುಖ ಕಲೆಯಾಗಿರುವ ‘ಭರತನಾಟ್ಯ’ ಕರ್ನಾಟಕದ ಕೊಡುಗೆಯಾಗಿದ್ದು, ಆದ್ದರಿಂದ ಈ ನೃತ್ಯ ಪ್ರಕಾರವನ್ನು ಬೆಳೆಸಬೇಕಾಗಿದೆ ಎಂದು ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಹೇಳಿದರು.
ಬೆಂಗಳೂರಿನ ಭರತ ನೃತ್ಯ ಸಂಗೀತ ಅಕಾಡೆಮಿ, ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ನಗರದ ಲಕ್ಷ್ಮೀಪುರಂನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 3ನೇ ಪ್ರದರ್ಶಕ ಕಲೆಗಳ ರಾಷ್ಟ್ರೀಯ ಸಮ್ಮೇಳನ ಮತ್ತು ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭರತನಾಟ್ಯ ನೃತ್ಯ ಪ್ರಕಾರವು ಭವಿಷ್ಯದಲ್ಲೂ ಉತ್ತಮವಾಗಿ ಬೆಳೆಯಬೇಕು. ಇದಕ್ಕಾಗಿ ಈ ಕಲೆಯನ್ನು ಕನ್ನಡಿಗರು, ಕರ್ನಾಟಕ ಉಳಿಸಬೇಕು. ಇದು ನಮ್ಮ ಕನ್ನಡದ ಸ್ವಾಭಿಮಾನವಾಗಿದೆ ಎಂದು ಹೇಳಿದರು.
ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಸ್ವಯಂ ಅಭಿವ್ಯಕ್ತಿಯ ಕೌಶಲವನ್ನು ಶಾಸ್ತ್ರೀಯ ನೃತ್ಯ ಪ್ರಕಾರಗಳು ಬೆಳೆಸುತ್ತದೆ. ಆಧುನಿಕತೆ ಭರಾಟೆಯ ನಡುವೆಯೂ ಭರತನಾಟ್ಯ ಸೇರಿದಂತೆ ಶಾಸ್ತ್ರೀಯ ನೃತ್ಯ ಕಲೆಗಳನ್ನು ಉಳಿಸಬೇಕು. ಜತೆಗೆ ಅವುಗಳನ್ನು ಬೆಳೆಸಬೇಕಾಗಿದೆ ಎಂದರು.
ಶಾಸ್ತ್ರೀಯ ನೃತ್ಯದಲ್ಲಿ ಕನ್ನಡದ ಕವಿಗಳ ಪದ್ಯಗಳು, ದೇವರ ಕವಿತೆಗಳನ್ನು ನೃತ್ಯ ಪ್ರದರ್ಶನದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕನ್ನಡದ ದೇವರನಾಮ, ಶೃಂಗಾರ ಪದಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೊದಲು ಬೇರೆ-ಬೇರೆ ಭಾಷೆಯ ಶ್ಲೋಕ, ಗೀತೆಗಳನ್ನು ಉಪಯೋಗ ಮಾಡಲಾಗುತ್ತಿತ್ತು. ಅದೀಗ ಪರಿವರ್ತನೆಯಾಗಿದೆ ಎಂದು ಹೇಳಿದರು.
ನಾವು ನೃತ್ಯ ಪ್ರದರ್ಶನ ನೀಡುವಾಗ ಕನ್ನಡವನ್ನೇ ಬಳಸುತ್ತಿದ್ದು, ವಿದೇಶಕ್ಕೆ ಹೋದರೂ ಕನ್ನಡದ ಪದಗಳು, ಕನ್ನಡದ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಲಾಗುತ್ತದೆ. ಅವರಿಗೆ ಅರ್ಥವಾಗಲಿ ಎನ್ನುವ ದೃಷ್ಟಿಯಿಂದ ನೃತ್ಯದ ನಿರೂಪಣೆಯನ್ನು ಆಂಗ್ಲ ಭಾಷೆಯಲ್ಲಿ ಮಾಡಲಾಗುತ್ತದೆ. ಇತ್ತೀಚೆಗೆ ಜರ್ಮನಿಯಲ್ಲಿ ನೃತ್ಯ ಪ್ರದರ್ಶನ ನೀಡಲಾಯಿತು. ಅಲ್ಲಿ ಕನ್ನಡ ಮತ್ತು ಸಂಸ್ಕೃತ ಶ್ಲೋಕವನ್ನು ಮಾತ್ರ ಉಪಯೋಗಿಸಲಾಯಿತು. ಸ್ವರಗಳು ಹಾಗೂ ನೃತ್ಯಕ್ಕೆ ಪೂರಕವಾದ ಇತರ ಅಂಶಗಳೆಲ್ಲವೂ ಕನ್ನಡವೇ ಇರುತ್ತವೆ ಎಂದು ಹೇಳಿದರು.
‘ಕರ್ನಾಟಕದಲ್ಲಿ ನೃತ್ಯ ಪ್ರದರ್ಶನಗಳು ನಡೆದು ಬಂದ ದಾರಿ’ ಕುರಿತು ಮಾತನಾಡಿದ ಸಂಗೀತ ವಿಮರ್ಶಕ ಪ್ರೊ.ಕೆ.ರಾಮಮೂರ್ತಿ ರಾವ್ ಅವರು, ಇತ್ತೀಚಿನ ವರ್ಷಗಳಲ್ಲಿ ನೃತ್ಯ ಪ್ರದರ್ಶನದಲ್ಲಿ ಯುಗಳ ಗೀತೆಗಳು ಬಂದಿವೆ. ದಂಪತಿಗಳು ಜೋಡಿಯಾಗಿ ಪ್ರದರ್ಶನ ನೀಡಲು ಆರಂಭಿಸಿದ್ದಾರೆ. ದ್ವಂದ್ವ ಪ್ರದರ್ಶನಗಳೂ ನಡೆಯುತ್ತಿವೆ. ಫ್ಯೂಷನ್ ಎಂಬುದು ಪ್ರವೇಶ ಪಡೆದಿದೆ. ಇದರೊಂದಿಗೆ ಶಿಷ್ಯರ ರಂಗ ಪ್ರವೇಶ ಕಾರ್ಯಕ್ರಮ, ಸಂಗೀತ ಕಲಿಸುವ ಕೇಂದ್ರಗಳ ವಾರ್ಷಿಕೋತ್ಸವಗಳು ಕೂಡ ಹೆಚ್ಚಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು
6-7 ದಶಕಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನದ ಶೈಲಿಯಲ್ಲಿ ಪರಿವರ್ತನೆಯಾಗಿದೆ. ಇದಕ್ಕೆ ಒಗ್ಗಿಕೊಳ್ಳಲಾಗಿದೆ. ಕಲೆ ನಿಂತ ನೀರಲ್ಲ. ಚಲನಶೀಲತೆಯನ್ನು ಹೊಂದಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದರು.
ಇತ್ತೀಚಿನ ದಶಕಗಳಲ್ಲಿ ಶಾಸ್ತ್ರೀಯ ನೃತ್ಯಗಳಲ್ಲಿ ಶೃಂಗಾರ ಪದ, ಡಿವಿಜಿಯವರ ಅಂತಃಪುರ ಗೀತೆಗಳು, ಶಿವಶರಣರ ವಚನಗಳು, ದೇಶಭಕ್ತಿಗೀತೆಗಳು, ಕಂದಪದ್ಯ, ಗಮಕವನ್ನೂ ಅಳಡಿಸಿಕೊಳ್ಳಲಾಗುತ್ತಿದೆ ಎಂದರು.
ನೃತ್ಯ ಪ್ರದರ್ಶನವೂ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಉತ್ತಮ ಸ್ಥಿತಿಯಲ್ಲಿ ಇತ್ತು ಎನ್ನುವುದು ಅಂದಿನ ಕಾಲದ ಪ್ರವಾಸಿಗರು, ರಾಯಭಾರಿಗಳು ಬರೆದಿರುವ ಕೃತಿಗಳ ಮೂಲಕ ತಿಳಿದಿದೆ.
ಹೊಯ್ಸಳರ ಕಾಲದಲ್ಲಿ ರಾಣಿಯರು ಕೂಡ ನೃತ್ಯದಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಬೇಲೂರಿನಲ್ಲಿ ಕೆತ್ತಿರುವ ಶಿಲಾಬಾಲಿಕೆಯರು ರಾಣಿ ಶಾಂತಲಾ ದೇವಿಯ ನೃತ್ಯ ಭಂಗಿಗಳಿಂದ ಸ್ಫೂರ್ತಿ ಹೊಂದಿವೆ. ಮೈಸೂರಿನ ಅರಮನೆಯಲ್ಲೂ 5 ನೃತ್ಯ ತಂಡಗಳಿದ್ದವು.
ಇವರು ನವರಾತ್ರಿ, ರಾಜರ ವರ್ಧಂತಿ ಸಮಯದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದರು. ಒಂದೊಂದು ಸಲ ನೃತ್ಯ ಪ್ರದರ್ಶನ ನೀಡುವಾಗ ತಂಡಗಳ ಮಧ್ಯ ವ್ಯತ್ಯಾಸ ಉಂಟಾದಾಗ ರಾಜರೇ ಅವರನ್ನು ಕೇಳುತ್ತಿದ್ದರು. ಎಲ್ಲಿ ಅಭ್ಯಾಸ ತಪ್ಪಿದೆ ಎನ್ನುವುದು ಗಮನಿಸಿ ತಿಳಿಸುತ್ತಿದ್ದರು. ಅಷ್ಟರ ಮಟ್ಟಿಗೆ ಉತ್ತೇಜನ ನೀಡುತ್ತಿದ್ದರು ಎಂದರು.
ಶಾಸ್ತ್ರೀಯ ನೃತ್ಯದಲ್ಲಿ ಕನ್ನಡ ಹಿಂದೆ-ಇಂದು-ನಾಳೆ ಕುರಿತು ಡಾ.ತುಳಸಿ ರಾಮಚಂದ್ರ ಮಾತನಾಡಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಗೀತಾ ವಿವಿ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವ ಪ್ರೊ. ಎಂ.ಜಿ.ಮಂಜುನಾಥ್, ಭರತ ನೃತ್ಯ ಸಂಗೀತ ಅಕಾಡೆಮಿ ನಿರ್ದೇಶಕಿ ಡಾ.ಶೋಭಾರಾಣಿ ಬೋಳಾರ್ ಇತರರು ಇದ್ದರು.