ಕೇಸರಿ ಶಾಲು ಹಾಕಿಕೊಂಡು ಬಂದರೆ ಕ್ರಮ: ಮಧು ಬಂಗಾರಪ್ಪ ಎಚ್ಚರಿಕೆ

-ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೈಸೂರು ನಗರದಲ್ಲಿರುವ ಸಾಹಿತಿ ದೇವನೂರ ಮಹದೇವ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಶಿಕ್ಷಣ ಕುರಿತು ಸಮಾಲೋಚನೆ ನಡೆಸಿದರು.
-ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೈಸೂರು ನಗರದಲ್ಲಿರುವ ಸಾಹಿತಿ ದೇವನೂರ ಮಹದೇವ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಶಿಕ್ಷಣ ಕುರಿತು ಸಮಾಲೋಚನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಸಿ ಕಳುಹಿಸಲಿ
  • ಕಾಂಗ್ರೆಸ್‌ಗೆ ಹಿಜಾಬ್ ಸಮಾನತೆ ಸಂಕೇತ
ಮೈಸೂರು: ಕೇಂದ್ರ ಸರ್ಕಾರದ ವ್ಯಾಪ್ತಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೊದಲು ಕೇಸರಿ ಶಾಲು ಹಾಕಿಸಿ ಕಳುಹಿಸಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.
 ನಗರದಲ್ಲಿರುವ ಸಾಹಿತಿ ದೇವನೂರ ಮಹಾದೇವ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಬಿಜೆಪಿಯವರಿಗೆ ಅದು ಹಿಜಾಬ್. ನಮಗೆ ಅದು ಸಮಾನತೆ ಸಂಕೇತ. ಕೇಂದ್ರೀಯ ವಿದ್ಯಾಲಯದಲ್ಲಿ ಯಾವ ನಿಯಮ ಇದೆ ಎಂಬುದನ್ನು ಮೊದಲು ಬಿಜೆಪಿಯವರು ನೋಡಿಕೊಂಡು ಬರಲಿ ಎಂದು ತಿರುಗೇಟು ಕೊಟ್ಟರು
ನಮ್ಮ ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶ ಇಲ್ಲ. ಯಾರದರೂ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕ್ರಮ ಆಗುತ್ತದೆ ಎಂದು ಎಚ್ಚರಿಸಿದರು. ಹಿಜಾಬ್ ಬಗ್ಗೆ ನಾವು ನಮ್ಮ ಪ್ರಣಾಳಿಕೆಯಲ್ಲೇ ಹೇಳಿದ್ದು, ನಮಗೆ ಜನ ಮತ ಕೊಟ್ಟಿದ್ದಾರೆ. ಅವರ ಋಣ ತಿರಿಸಿದ್ದೇವೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ನೀಟ್ ಕುರಿತು ಉತ್ತರ ಕೊಡದ ಕೇಂದ್ರ ಸಚಿವರು:

ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ಕುರಿತು ಉತ್ತರ ಕೊಡದೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಓಡಿ ಹೋಗಿದ್ದು, ಒಂದು ವಾರವಾದರೂ ಉತ್ತರ ಕೊಟ್ಟಿಲ್ಲ ಎಂದು ಮಧು ಬಂಗಾರಪ್ಪ ಕುಟುಕಿದರು.
ಕೇಂದ್ರ ಸರ್ಕಾರಕ್ಕೆ ಒಂದು ಪರೀಕ್ಷೆ ಮಾಡುವ ಯೋಗ್ಯತೆ ಇಲ್ಲ. 3 ವರ್ಷದಿಂದ ನನ್ನ ಇಲಾಖೆಯಲ್ಲಿ ಒಂದೇ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಧರ್ಮೇಂದ್ರ ಪ್ರಧಾನ ನನ್ನ ಬಳಿ ಬರಲಿ. ಸೋರಿಕೆಯಾಗದೆ ಪರೀಕ್ಷೆ ಮಾಡುವುದು ಹೇಗೆ ಎಂಬುದನ್ನ ನಾನು ಹೇಳಿಕೊಡುತ್ತೇನೆ. ಒಂದೇ ವಾರದಲ್ಲಿ ನಾನು ಆ ತಿಳಿವಳಿಕೆ ಅವರಿಗೆ ಕೊಡುತ್ತೇನೆ ಎಂದು ಕಾಲೆಳೆದರು.
ಈ ಪರೀಕ್ಷೆಯಲ್ಲಿ ಶೇ.96ರಷ್ಟು ಹಿಂದು ಮಕ್ಕಳಿದ್ದರು. ಅವರ ಕಾಲ ಕೆಳಗೆ ಬಿಜೆಪಿ ನುಗ್ಗಲಿ. ಆಗಲಾದರೂ ಅವರಿಗೆ ಬುದ್ಧಿ ಬರುತ್ತೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಅಂಕಪಟ್ಟಿ ಬಿಡುಗಡೆ ಮಾಡಲಿ: 

ನನ್ನ ಶೈಕ್ಷಣಿಕ ಹಿನ್ನೆಲೆ ಕುರಿತು ಟೀಕಿಸುತ್ತಿರುವವರಿಗೆ ತಿರುಗೇಟು ಕೊಟ್ಟ ಮಧು ಬಂಗಾರಪ್ಪ, ಬಿಜೆಪಿಯವರು ಮೊದಲು ಪ್ರಧಾನಮಂತ್ರಿ ಅವರ ನಕಲಿ ವಿದ್ಯಾಭ್ಯಾಸದ ಸರ್ಟಿಫಿಕೇಟ್ ಬಿಡುಗಡೆ ಮಾಡಲಿ. ನಾನು ನನ್ನ ಅಸಲಿ ವಿದ್ಯಾರ್ಹತೆ ಅಂಕಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಮಧು ಬಂಗಾರಪ್ಪ ಸವಾಲು ಹಾಕಿದರು.
ನಾನು ಪಿಯುಸಿ ಮುಗಿಸಿದ್ದು, ಆಮೇಲೆ ನನಗೆ ವ್ಯವಹಾರದ ಕಡೆಗೆ ಒಲವು ಬಂತು. ಚಿತ್ರ ನಿರ್ಮಾಣ, ಆಡಿಯೋ ಸಂಸ್ಥೆ ಕಟ್ಟಿ ಹಲವು ಜನರಿಗೆ ಕೆಲಸ ಕೊಟ್ಟಿದ್ದೇನೆ. ನನಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತೆ. ನನಗೆ ಕನ್ನಡ ಬರೆಯುವುದು ಕಷ್ಟ. ನನ್ನ ಕನ್ನಡ ಬರವಣಿಗೆ ಬಗ್ಗೆ ಪ್ರಶ್ನೆ ಮಾಡುವ ಬಿಜೆಪಿಗರು ನನಗೆ ಪಾಠ ಮಾಡಿದ ಕನ್ನಡ ಮೇಸ್ಟ್ರನ್ನು ಹುಡುಕಿ ತರಲಿ. 
ಆಗ ಕನ್ನಡ ಮೇಸ್ಟ್ರ ಜತೆಗೆ ಆ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ. ನನಗೆ ಶಿಕ್ಷಣಕ್ಕಿಂತ ಮನುಷ್ಯತ್ವ ಇದೆ. ನಾನು ಮಕ್ಕಳನ್ನು ಮೊದಲ ಸ್ಥಾನದಲ್ಲಿ, ದೇವರನ್ನು ಎರಡನೇ ಸ್ಥಾನದಲ್ಲಿ ಇಟ್ಟಿದ್ದೇನೆ. ಬಿಜೆಪಿಯವರು ಕೆಟ್ಟ ಮನಸ್ಥಿತಿಯಲ್ಲಿ ನನ್ನನ್ನು ಟೀಕೆ ಮಾಡುತ್ತಾರೆ. ಅವರು ಇರುವುದು ಹಾಗೇ ಬಿಡಿ ಎಂದು ಜರಿದರು.

ಸರ್ಕಾರಿ ಶಾಲೆಗೆ ಸೇರಿಸುವುದು ಕಡ್ಡಾಯ ಆಗಲ್ಲ 

ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಕುರಿತು ಕಡ್ಡಾಯ ಮಾಡಲು ಆಗಲ್ಲ. ಯಾವ ಶಾಲೆಗೆ ಸೇರಬೇಕು ಎಂಬುದು ಮಕ್ಕಳು ಹಾಗೂ ಪಾಲಕರ ಹಕ್ಕು. ಇದನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ನೌಕರರು ಮಾತ್ರವಲ್ಲ, ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕೇಳುತ್ತೇನೆ. ಇದು ಎಲ್ಲರ ಬದ್ಧತೆಯಾಗಬೇಕು ಎಂದು ಮಧು ಬಂಗಾರಪ್ಪ ಹೇಳಿದರು.

ರಾಜ್ಯ ಶಿಕ್ಷಣ ನೀತಿ ಜಾರಿ ಇಲ್ಲ: 

ಪ್ರಸಕ್ತ ಸಾಲಿನಲ್ಲಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೆ ತರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಅದರ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ. ಯಾವುದೇ ಕಾರಣಕ್ಕೂ ನಾವು ಶಿಕ್ಷಣದಲ್ಲಿ  ಬಿಜೆಪಿಯವರ ಅಜೆಂಡಾ ತೂರಿಸಲು ಬಿಡುವುದಿಲ್ಲ. ನಮ್ಮ ಜುಟ್ಟನ್ನು ಕೇಂದ್ರದ ಕೈಗೆ ಕೊಡಲೂ ಸಿದ್ಧರಿಲ್ಲ. ನಮ್ಮದೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net