ಸಾಮರಸ್ಯದಿಂದ ಬದುಕುವುದನ್ನು ಕಲಿಯಿರಿ: ಹಿರಿಶಾಂತವೀರಶ್ರೀಗಳು

 ಶ್ರೀಕ್ಷೇತ್ರ ಸುತ್ತೂರಿನಲ್ಲಿ ಸೋಮವಾರ ಆಯೋಜಿಸಿದ್ದ ಭಜನಾ ಮೇಳದ ಸಮಾರೋಪ ಕಾರ್ಯಕ್ರಮ
ಶ್ರೀಕ್ಷೇತ್ರ ಸುತ್ತೂರಿನಲ್ಲಿ ಸೋಮವಾರ ಆಯೋಜಿಸಿದ್ದ ಭಜನಾ ಮೇಳದ ಸಮಾರೋಪ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವ
  • ಭಜನಾ ಮೇಳದ ಸಮಾರೋಪ
  • ಇಡೀ ಜೀವನವೇ ನಂದನವನ ಆಗಲಿ. ಮಾಂಸ ಪಿಂಡದ ಶರೀರ ಹೋಗಿ ಮಂತ್ರಪಿಂಡದ ಶರೀರವಾಗಿ ಪರಿವರ್ತನೆಯಾಗಲಿ.
ಮೈಸೂರು: ವಸ್ತುಗಳಿಗೆ ಮಾತ್ರವೇ ಗ್ಯಾರಂಟಿ-ವಾರಂಟಿ. ಅದು ಮನುಷ್ಯರಿಗೆ ಇಲ್ಲ. ಹೀಗಾಗಿ, ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು ಎಂದು ಹೂವಿನಹಡಗಲಿಯ ಗವಿಸಿದ್ಧೇಶ್ವರ ಶಾಖಾ ಮಠದ ಶ್ರೀ ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಸೋಮವಾರ ಆಯೋಜಿಸಿದ್ದ ಭಜನಾ ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯರ 4 ದಿನ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು. ಜಾಗೃತವಾಗಬೇಕೇ ಹೊರತು, ಪರದಾಡುವಂತಾಗಬಾರದು. ಇಡೀ ಜೀವನವೇ ನಂದನವನ ಆಗಲಿ. ಮಾಂಸ ಪಿಂಡದ ಶರೀರ ಹೋಗಿ ಮಂತ್ರಪಿಂಡದ ಶರೀರವಾಗಿ ಪರಿವರ್ತನೆಯಾಗಲಿ. ಅದಕ್ಕಾಗಿ ದೇವರ ಸ್ಮರಿಸಬೇಕು ಎಂದರು.
ಅಹಂಕಾರಿ ಗುಣವನ್ನು ಕಳಚಿಕೊಂಡು, ಮಮಕಾರಿಯಾಗಿ ಬದುಕಬೇಕು. ಆಗ ಮಾತ್ರವೇ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರೆಷರ್ ಕುಕ್ಕರ್ ಮತ್ತು ಮಿಕ್ಸರ್ ಗ್ರೈಂಡರ್ ನೋಡಿ ಕಲಿಯಬೇಕಿದೆ. ಮನಸ್ಸಿನ ಸಂಕಟ ನಾಲ್ಕುಗೋಡೆಯೊಳಗೆ ಇರಬೇಕು. ಅದರೊಳಗೆ ಜೀವನವನ್ನು ಸುಧಾರಿಸಿಕೊಳ್ಳಬೇಕು. ಉಭಯ ಯಂತ್ರಗಳು ಎಷ್ಟೇ ಕಾವು ಆದರೂ, ತನ್ನತನ ಬಿಟ್ಟುಕೊಡಲ್ಲ. ಹಾಗೇ ನಾವುಗಳು ಬದುಕಬೇಕು ಎಂದು ಕಿವಿಮಾತು ಹೇಳಿದರು.
ಭಜನೆ ಜ್ಞಾನಸ್ಥ-ಧ್ಯಾನಸ್ಥ ಸ್ಥಿತಿ. ಮನಸ್ಸು ವಿಕಸತನದ ಚಿತ್ರಣವೇ ಅದು. ಇದರ ಮೂಲಕ ಮನಸ್ಸನ್ನು ಮುಕ್ತವಾಗಿಸಿ ಪ್ರಶಾಂತ, ಜ್ಞಾನಮಯಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಕ್ಷರ, ಅನ್ನ, ಜ್ಞಾನದ ಜಾತ್ರೆ ಅಂದರೆ, ಅದು ಸುತ್ತೂರು ಜಾತ್ರೆ. ಬನಶಂಕರಿ, ಕೊಪ್ಪಳ ಜಾತ್ರೆಯೂ ಪ್ರಸಿದ್ಧವಾಗಿವೆ. ಇವುಗಳು ಸಂಸ್ಕೃತಿ-ಸಾಂಸ್ಕೃತಿಕತೆಯ ಪ್ರತಿಬಿಂಬ ಎಂದು ವಿಶ್ಲೇಷಿಸಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ, ಸಮಾಜ ಸುಧಾರಣೆ ಕ್ಷೇತ್ರದಲ್ಲೂ ಸುತ್ತೂರು ಮಠ ಕಾರ್ಯನಿರ್ವಹಿಸುತ್ತಿದೆ. ಇದು ಸಮಾಜದ ಭವಿಷ್ಯ ರೂಪಿಸುವಲ್ಲಿ ಮಹತ್ವ ಪಾತ್ರ ವಹಿಸುತ್ತದೆ ಎಂದರು.
ಮೈಮುಲ್ ಅಧ್ಯಕ್ಷ ಈರೇಗೌಡ ಮಾತನಾಡಿ, ಸುತ್ತೂರು ಜಾತ್ರೆಗಾಗಿ ಮೈಮುಲ್‌ನಿಂದ ತಲಾ 2 ಲಕ್ಷ ಲೀಟರ್ ಹಾಲು, ಮೊಸರು ನೀಡಲಾಗಿದೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿಂದಗಿ ಸಾರಂಗ ಮಠದ ಕಿರಿಯ ಶ್ರೀಗಳಾದ ಶ್ರೀ ಪ್ರಭುದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಲ್‌ಸಿ ಕೆ.ವಿವೇಕಾನಂದ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ, ಎಚ್.ಹರ್ಷವರ್ಧನ್ ಇನ್ನಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net