ಎರಡು ದಿನದಲ್ಲೇ ಕೆಎಸ್‌ಒಯು ಕುಲಸಚಿವರ ವರ್ಗಾವಣೆ ಆದೇಶ ರದ್ದು!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರು ವಿವಿಯ ಪ್ರೊ.ಎಸ್.ಕೆ.ನವೀನ್‌ಕುಮಾರ್ ಮುಂದುವರಿಕೆ
  • ವರ್ಗಾವಣೆ ಆದೇಶ ವಾಪಸ್ ಪಡೆದಿರುವುದು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟಕ್ಕೆ ಸಾಕ್ಷಿ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಎಸ್.ಕುಸುಮಕುಮಾರಿ ವರ್ಗಾವಣೆ ಆದೇಶವನ್ನು ಎರಡು ದಿನದಲ್ಲೇ ರದ್ದುಪಡಿಸಲಾಗಿದೆ. 
ಹೀಗಾಗಿ, ಮಂಗಳೂರು ವಿಶ್ವವಿದ್ಯಾಲಯದ ಪ್ರೊ.ಎಸ್.ಕೆ.ನವೀನ್‌ಕುಮಾರ್ ಅವರೇ ಮತ್ತೆ ಕುಲಸಚಿವರಾಗಿ ಮುಂದುವರಿಯಲಿದ್ದಾರೆ.
ಒಂದು ತಿಂಗಳ ಹಿಂದೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತೆ ಹುದ್ದೆಯಿಂದ ಬಿಡುಗಡೆಯಾಗಿ ಸ್ಥಳ ನಿರೀಕ್ಷಣೆಯಲ್ಲಿದ್ದ ಎಸ್.ಕುಸುಮಕುಮಾರಿ ಅವರನ್ನು ಏ.4ರಂದು ಕರಾಮುವಿ ಆಡಳಿತಾತ್ಮಕ ಕುಲಸಚಿವರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.
 ಮರುದಿನ ಭಾನುವಾರವಾಗಿದ್ದರಿಂದ ಸೋಮವಾರ ಅಧಿಕಾರ ಸ್ವೀಕಾರದ ಸಿದ್ಧತೆಯಲ್ಲಿದ್ದ ಅವರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಅವರ ವರ್ಗಾವಣೆ ಆದೇಶವನ್ನು ಹಿಂಪಡೆದುಕೊಂಡಿದೆ. ಇದರೊಂದಿಗೆ ಸಕಲೇಶಪುರ ಉಪವಿಭಾಗಾಧಿಕಾರಿ ಹುದ್ದೆಗೆ ಹುಲ್ಲುಮನಿ ತಿಮ್ಮಣ್ಣ, ಕರ್ನಾಟಕ ಲೋಕಸೇವಾ ಆಯೋಗದ ಸಹಾಯಕ ಕಾರ್ಯದರ್ಶಿ ಜಿ.ಕೆ.ಹರೀಶ್ ವರ್ಗಾವಣೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದು ಗಮನಾರ್ಹ.
ರಾಜ್ಯಪಾಲರ ಆಜ್ಞಾನುಸಾರ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಕೆ.ಎಚ್.ಕೇಶವಪ್ರಸಾದ್ ಸೋಮವಾರ ಹೊಸ ಆದೇಶವನ್ನು ಹೊರಡಿಸಿದ್ದಾರೆ. 
‘ವರ್ಗಾವಣೆ ಆದೇಶ ವಾಪಸ್ ಪಡೆದಿರುವುದು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಇವರಿಬ್ಬರ ಜಗಳದಲ್ಲಿ ಕರಾಮುವಿ ಬಡವಾಗುತ್ತಿದೆ. ರಾಜ್ಯ ಸರ್ಕಾರದ ಎಚ್ಚರಿಕೆಯ ನಡುವೆಯೂ ಕರಾಮುವಿಯಲ್ಲಿ ಇತ್ತೀಚಿಗೆ ಏಕಾತ್ಮ ಮಾನವ ದರ್ಶನ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಆಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ವಿರುದ್ಧ ರಾಜ್ಯ ಸರ್ಕಾರ ಅಸಮಾಧಾನಗೊಂಡಿದೆ. 
ಆದರೆ, ರಾಜ್ಯಪಾಲರು ಇವರ ಪರ ಇದ್ದಾರೆ. ಹೀಗಾಗಿಯೇ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆ’ ಎಂದು ಮೂಲಗಳು ತಿಳಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net