ಕ್ಷೇತ್ರಗಳ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆತಂಕ
ಎಂ.ಲಕ್ಷ್ಮಣ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ಷೇತ್ರ ಪುನರ್ವಿಂಗಡಣೆಗೆ ಮಹಿಳಾ ಮೀಸಲಾತಿಯನ್ನು ಸೇರಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ
ಕ್ಷೇತ್ರ ವಿಂಗಡಣೆ ಯಾವ ಮಾನದಂಡದ ಆಧಾರದಲ್ಲಿ ನಡೆಯುತ್ತದೆ ಎನ್ನುವುದು ತಿಳಿಯುತ್ತಿಲ್ಲ
ಜನೋಪಕಾರಿ ಟರ್ಮಿನಲ್ ಶಿಫ್ಟ್ ಮಾಡಿದರೆ ರೈಲು ನಿಲ್ದಾಣ ಬಂದ್ ಮಾಡಿಸುತ್ತೇವೆ
ಮೈಸೂರು: ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಭಾರೀ ಅನ್ಯಾಯವಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದರು.
ಕ್ಷೇತ್ರ ಪುನರ್ವಿಂಗಡಣೆಗೆ ಮಹಿಳಾ ಮೀಸಲಾತಿಯನ್ನು ಸೇರಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಮೂಲಕ ದಕ್ಷಿಣದ 6 ರಾಜ್ಯಗಳನ್ನು ನಿರುಪಯುಕ್ತಗೊಳಿಸುವ ಪ್ರಯತ್ನ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕ್ಷೇತ್ರ ವಿಂಗಡಣೆ ಯಾವ ಮಾನದಂಡದ ಆಧಾರದಲ್ಲಿ ನಡೆಯುತ್ತದೆ ಎನ್ನುವುದು ತಿಳಿಯುತ್ತಿಲ್ಲ. ಉತ್ತರಪ್ರದೇಶದಲ್ಲಿ ಈಗ ಇರುವ ಲೋಕಸಭಾ 80 ಸೀಟುಗಳನ್ನು 142ಕ್ಕೆ ಏರಿಸಲಿವೆ ಎನ್ನಲಾಗಿದೆ. ಶೇ.50ರಷ್ಟು ಹೆಚ್ಚಳವಾದರೆ 120 ಆಗಬೇಕು. ಆದರೆ ಮನೋಇಚ್ಛೆ ಏರಿಕೆ ಮಾಡಿ ದಕ್ಷಿಣ ಭಾಗದಲ್ಲಿ ಕಡಿಮೆ ಮಾಡುವುದರಿಂದ ನೂರು ವರ್ಷ ಹಿಂದಕ್ಕೆ ಹೋಗಲಿದೆ ಎಂದರು.
ಮೈಸೂರು ಭಾಗದಲ್ಲಿ ಮೈಸೂರು, ಕೊಡಗು, ಚಾಮರಾಜನಗರ ಮೂರು ಲೋಕಸಭಾ ಕ್ಷೇತ್ರಗಳಾಗಲಿವೆ. ವಿಧಾನಸಭೆಯ 6 ಸೀಟುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕರ್ನಾಟಕದಲ್ಲಿ ಮ್ಯಾಪಿಂಗ್ ಮುಗಿದಿದ್ದು, ಶೇ. 15 ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಅಂದಾಜು 90 ಲಕ್ಷ ಜನರ ಮತಹಕ್ಕು ಕಸಿಯುವ ಪ್ರಯತ್ನ ನಡೆದಿದೆ ಎಂದು ದೂರಿದರು.
ದಕ್ಷಿಣದ ರಾಜ್ಯಗಳು ದೇಶದ ಜಿಡಿಪಿಗೆ ಶೇ. 40ರಷ್ಟು ಕೊಡುಗೆ ನೀಡುತ್ತಿವೆ. ಕರ್ನಾಟಕವೂ 5 ಲಕ್ಷ ಕೋಟಿ ರೂ. ತೆರಿಗೆ ಪಾವತಿಸುತ್ತದೆ. ಆದರೆ ವಾಪಸ್ ಕೊಡುವುದು 60 ಸಾವಿರ ಕೋಟಿ ರೂ. ಮಾತ್ರ. ಆದರೆ ಉತ್ತರ ಪ್ರದೇಶ 2.15 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾದರೆ ಕೇಂದ್ರ 6 ಲಕ್ಷ ಕೋಟಿ ರೂ. ವಾಪಸ್ ನೀಡುವುದರ ಮೂಲಕ ತಾರತಮ್ಯ ಮಾಡುತ್ತಿದೆ ಎಂದರು.
ಹೊಗೆಸೊಪ್ಪು ಬೆಲೆ ಭಾರಿ ಕುಸಿತ ಕಂಡು ತಂಬಾಕು ಬೆಳೆಗಾರರು ನರಕ ನೋಡುತ್ತಿದ್ದಾರೆ. 1 ಕೆಜಿ ಹೊಗೆಸೊಪ್ಪು ಬೆಳೆಯಲು 260 ರೂ. ಖರ್ಚಾಗುತ್ತಿದೆ. ಆದರೆ ಕೆಜಿ ಹೊಗೆಸೊಪ್ಪು 140 ರೂ. ಖರೀದಿ ಮಾಡುತ್ತಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರು ಮೈಸೂರು-ಕೊಡಗು ಸಂಸದರು ಮೌನವಾಗಿದ್ದಾರೆ. ಜೆಡಿಎಸ್ ನಿಯೋಗ ಕೇಂದ್ರ ಸಚಿವರ ಭೇಟಿ ಮಾಡಿದ್ದರ ಪ್ರಯೋಜನ ಏನಾಯಿತು? ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ 500 ಕೋಟಿ ರೂ. ಕಾಮಗಾರಿಗಳಿಗೆ ಅಧಿಕಾರಿಗಳು ಟೆಂಡರ್ ಕರೆಯುತ್ತಾರೆ ಎಂದು ಹೇಳಿದ್ದಾರೆ. ಹಾಗಾದರೆ ನಿಮ್ಮ ಕೆಲಸ ಏನು? ಮಂತ್ರಿಯಾಗಿ 2 ವರ್ಷಗಳಾಯಿತು ಕರ್ನಾಟಕಕ್ಕೆ ಯಾವ ಯೋಜನೆ ತಂದಿದ್ದೀರಿ ತಿಳಿಸಿ ಎಂದರು.
ಮಾಜಿ ಸಂಸದ ಪ್ರತಾಪ ಸಿಂಹ ಅವರಿಗೆ ಅಶೋಕಪುರಂ ಹೆಸರೆಂದರೆ ಅಲರ್ಜಿ. ಹೆಸರು ಬದಲಾಯಿಸಿ ಅಮೃತಾ ನಿಲ್ದಾಣವೆಂದು ಹೆಸರಿಟ್ಟರೆ 30 ಕೋಟಿ ರೂ. ಅನುದಾನ ಬರುತ್ತದೆ ಎಂದು ಹೇಳಿದ್ದಾರೆ. ಕೋಟ್ಯಂತರ ರೂ. ಅನುದಾನ ಬರುತ್ತದೆ ಎಂದು ನಿಲ್ದಾಣದ ಹೆಸರೇ ಬದಲಿಸುವುದು ಎಂಥ ದುರಂತ ಎಂದು ಟೀಕಿಸಿದರು.
ನಗರ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮುಖಂಡರಾದ ಎಂ.ಶಿವಣ್ಣ, ರಾಹುಲ್ ಕುಂಬ್ರಹಳ್ಳಿ, ಗೋಪಿನಾಥ್, ಗಿರೀಶ್, ವಕ್ತಾರ ಕೆ.ಮಹೇಶ್ ಇದ್ದರು.
ಟರ್ಮಿನಲ್ ಸ್ಥಳಾಂತರಿಸಿದರೆ ಹೋರಾಟ
ಮೈಸೂರಿನಲ್ಲಿರುವ ರೈಲ್ವೆ ಗೂಡ್ಸ್ ಟರ್ಮಿನಲ್ ಅನ್ನು ಮಂಡ್ಯ ತಾಲೂಕಿನ ಎಲಿಯೂರಿಗೆ ಸ್ಥಳಾಂತರಿಸಿದರೆ ಹೋರಾಟ ಮಾಡಲಾಗುವುದು ಎಂದು ಎಂ.ಲಕ್ಷ್ಮಣ್ ಹೇಳಿದರು.
1882ರಲ್ಲಿ ಆರಂಭವಾದ ಗೂಡ್ಸ್ ಟರ್ಮಿನಲ್ ಅನ್ನು ವಂದೇ ಭಾರತ್ ರೈಲು ಗಾಡಿಗಾಗಿ ಸ್ಥಳಾಂತರಕ್ಕೆ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಮುಂದಾಗಿರುವುದು ಸರಿಯಲ್ಲ. ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ 10 ಸಾವಿರ ಜನರು ಗೂಡ್ಸ್ ಟರ್ಮಿನಲ್ ಅವಲಂಬಿತರಾಗಿದ್ದಾರೆ. ನಿತ್ಯ 60 ಟ್ರಕ್ ಲೋಡ್, ಅನ್‌ಲೌಡ್ ಆಗುತ್ತದೆ 2025-26ನೇ ಸಾಲಿನಿಂದ 4,990 ಕೋಟಿ ರೂ. ಆದಾಯ ಬಂದಿದೆ. ಇಂತಹ ಜನೋಪಕಾರಿ ಟರ್ಮಿನಲ್ ಶಿಫ್ಟ್ ಮಾಡಿದರೆ ರೈಲು ನಿಲ್ದಾಣ ಬಂದ್ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.