ಸಾಹಿತ್ಯ ಅಭಿರುಚಿಯಿಂದ ಜ್ಞಾನ ವೃದ್ಧಿ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಮತ

 ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆರಂಭಗೊಂಡಿರುವ ಮನೆಗೊಂದು ಗ್ರಂಥಾಲಯ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಡಾ.ಎಚ್.ಸಿ.ಮಹದೇವಪ್ಪ, ಡಾ.ಸಿಪಿಕೆ, ಮಾನಸ, ಅಂಶಿ ಪ್ರಸನ್ನಕುಮಾರ್, ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು, ದೇವರಾಜ್ ಪಿ. ಚಿಕ್ಕಹಳ್ಳಿ, ಬಲವಂತರಾವ್  ಪಾಟೀಲ್, ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಇತರರು ಇದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆರಂಭಗೊಂಡಿರುವ ಮನೆಗೊಂದು ಗ್ರಂಥಾಲಯ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಡಾ.ಎಚ್.ಸಿ.ಮಹದೇವಪ್ಪ, ಡಾ.ಸಿಪಿಕೆ, ಮಾನಸ, ಅಂಶಿ ಪ್ರಸನ್ನಕುಮಾರ್, ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು, ದೇವರಾಜ್ ಪಿ. ಚಿಕ್ಕಹಳ್ಳಿ, ಬಲವಂತರಾವ್ ಪಾಟೀಲ್, ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಂಥಾಲಯ ಸಂಸ್ಕೃತಿ ಉಳಿಯಬೇಕು ಹಾಗೂ ಬೆಳೆಯಬೇಕು
  • ಪ್ರತಿ ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿ ರಚನೆ
ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯೋಜಿಸಿರುವ ಮನೆಗೊಂದು ಗ್ರಂಥಾಲಯ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ವಿಜಯನಗರದ ತಮ್ಮ ನಿವಾಸದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಎಚ್.ಸಿ.ಮಹದೇವಪ್ಪ ಅವರು, ಸಾಹಿತ್ಯ ಅಭಿರುಚಿಯಿಂದ ಜ್ಞಾನ ಹೆಚ್ಚುತ್ತದೆ. ಇದರಿಂದ ಸಂಘರ್ಷ, ದ್ವೇಷ ಮಾಯವಾಗಿ ಪರಸ್ಪರ ಪ್ರೀತಿ, ಸಾಮರಸ್ಯ, ಸೌಹಾರ್ದತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಾಹಿತ್ಯ ಕೃತಿಗಳನ್ನು ಓದುತ್ತಿದ್ದೇನೆ. ಯುವರಾಜ ಕಾಲೇಜು, ಎಂಡಿಟಿಬಿಸಿ ಕಾಲೇಜಿನಲ್ಲಿ ಓದುವಾಗ ಪಠ್ಯಕ್ಕಿಂತ ಸಾಹಿತ್ಯ ಕೃತಿಗಳನ್ನು ಓದಿದ್ದೆ ಹೆಚ್ಚು. ನಂತರ ದಾವಣಗೆರೆಯಲ್ಲಿ ಮೆಡಿಕಲ್ ಸೀಟು ಸಿಕ್ಕಿದ್ದರಿಂದ ಮೈಸೂರಿನಲ್ಲಿ ಹೆಚ್ಚು ಓದಲಾಗಲಿಲ್ಲ. ಆದರೆ ಎಲ್ಲೆಡೆ ಹೋದಾಗ ಸಾಕಷ್ಟು ಪುಸ್ತಕಗಳನ್ನು ತರುತ್ತಿದ್ದೆ. ಇದರಿಂದ ಮನೆಯಲ್ಲಿ ಸಾವಿರಾರು ಪುಸ್ತಕಗಳಿವೆ ಎಂದರು.
ಅಂಬೇಡ್ಕರ್ ಅವರು ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ಓದಿ, ಜ್ಞಾನಿಯಾದರು. ಹೀಗಾಗಿ ಅವರ ಹೆಸರಿನಲ್ಲಿ ಇಡೀ ಪ್ರಪಂಚದಾದ್ಯಂತ ವಿಶ್ವಜ್ಞಾನಿ ದಿನ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.
ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಂವಿಧಾನ ಗ್ರಂಥವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ.ಸಿಪಿಕೆ ಮಾತನಾಡಿ, ಗ್ರಂಥಾಲಯ ಸಂಸ್ಕೃತಿ ಉಳಿಯಬೇಕು ಹಾಗೂ ಬೆಳೆಯಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಜನರಲ್ಲಿ ಓದುವ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿ ರಚಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ  25 ಗ್ರಂಥಾಲಯಗಳ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮನೆಯಿಂದ ಚಾಲನೆ ನೀಡಲಾಗಿದೆ ಎಂದರು.
ಉತ್ತದ ನಿರ್ವಹಣೆಗೆ ವಿಭಾಗವಾರು ನಂಜನಗೂಡು ತಿರುಮಲಾಂಬ, ಡಾ.ಹಾ.ಮಾ. ನಾಯಕ, ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಗಳಗನಾಥ ಅವರ ಹೆಸರಿನಲ್ಲ ಪ್ರಶಸ್ತಿಗಳನ್ನು ಪ್ರತಿವರ್ಷ ಪ್ರಾಧಿಕಾರದಿಂದ ನೀಡಲಾಗುವುದು. ಮನೆಗೊಂದು ಗ್ರಂಥಾಲಯ ಯೋಜನೆಯಿಂದ ಅಂಗಡಿಯಿಂದ ಹಿಡಿದು ಪುಸ್ತಕಗಳ ಮುದ್ರಣಕಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಾಗೃತ ಸಮಿತಿಯ ಸದಸ್ಯರಾದ ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು, ದೇವರಾಜ್ ಪಿ. ಚಿಕ್ಕಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್  ಪಾಟೀಲ್, ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸುಗಮ ಸಂಗೀತಗಾರ ಪ್ರೊ.ಎಸ್. ಮಲ್ಲಣ್ಣ, ಪ್ರೊ.ಕೆ.ಆರ್. ಪ್ರೇಮಲೀಲಾ, ಕನ್ನಡ ಹೋರಾಟಗಾರ ಬಿ.ಎ. ಶಿವಶಂಕರ್, ಕೋಟಹುಂಡಿ ಮಹದೇವ್, ಸುಚಿತ್ರ ಹೆಗಡೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net