ನಗರಪಾಲಿಕೆ ಆಯುಕ್ತರ ಕಾರ್ಯವೈಖರಿ ಡಾ. ಕೆ.ಬಿ.ಲಿಂಗರಾಜು ಮೆಚ್ಚುಗೆ

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಶ್ಲಾಘನೆ
ಕೆ.ಬಿ.ಲಿಂಗರಾಜು
ಕೆ.ಬಿ.ಲಿಂಗರಾಜು
Published on: 

ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ, ಸ್ಥಳದಲ್ಲೇ ಸಮಸ್ಯೆಗಳನ್ನು ಗುರುತಿಸಿ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿರುವ ನಗರಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಅವರ ಕಾರ್ಯವೈಖರಿಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಾ.ಕೆ.ಬಿ.ಲಿಂಗರಾಜು ಶ್ಲಾಘಿಸಿದ್ದಾರೆ.

ರಿಂಗ್ ರಸ್ತೆಯ ಪಕ್ಕದಲ್ಲಿರುವ ಮಳೆ ನೀರು ಹರಿಯುವ ಚರಂಡಿಯಲ್ಲಿ ಹಲವು ವರ್ಷಗಳಿಂದ ಮಣ್ಣು ಹಾಗೂ ಹೂಳು ತುಂಬಿಕೊಂಡು ಸ್ವಚ್ಛತೆಯಿಲ್ಲದೆ ನಿರ್ಲಕ್ಷೃಕ್ಕೆ ಒಳಗಾಗಿತ್ತು. ಇದರಿಂದ ಮಳೆನೀರು ಸರಾಗವಾಗಿ ಹರಿಯಲು ಅಡಚಣೆಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತರು ಚರಂಡಿಯಲ್ಲಿನ ಮಣ್ಣು ಮತ್ತು ಹೂಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಸಾರ್ವಜನಿಕ ಸಮಸ್ಯೆಗಳು ವರ್ಷಗಟ್ಟಲೆ ಬಗೆಹರಿಯದೆ ಉಳಿಯುತ್ತವೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣ ಕ್ರಮ ಕೈಗೊಂಡಾಗ ಜನರಿಗೆ ನೈಜ ಅನುಕೂಲವಾಗುತ್ತದೆ. ನಗರದ ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ, ಮಳೆನೀರು ಚರಂಡಿಗಳ ನಿರ್ವಹಣೆ, ರಸ್ತೆ ಬದಿಗಳ ಸ್ವಚ್ಛತೆ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಇದೇ ರೀತಿ ಆದ್ಯತೆ ನೀಡಬೇಕು. ಮಳೆಗಾಲ ಆರಂಭಕ್ಕೂ ಮುನ್ನ ನಗರದ ಪ್ರಮುಖ ಚರಂಡಿಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸಿ ನಿರಂತರ ನಿರ್ವಹಣೆ ಮಾಡಿದರೆ ಮಳೆನೀರು ನಿಲ್ಲುವ ಸಮಸ್ಯೆ ತಡೆಗಟ್ಟಬಹುದು ಎಂದು ಸಲಹೆ ನೀಡಿದ್ದಾರೆ.

ಐತಿಹಾಸಿಕ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ನಗರವಾಗಿರುವ ಮೈಸೂರಿನಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಇದು ಸ್ಥಳೀಯ ನಾಗರಿಕರ ಜತೆಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೂ ಉತ್ತಮ ಅನುಭವ ನೀಡಲಿದೆ. ಸವಿತಾ ಅವರ ಜನಪರ ಹಾಗೂ ಕ್ರಿಯಾಶೀಲ ಆಡಳಿತದಿಂದ ಮೈಸೂರು ಮತ್ತಷ್ಟು ಸ್ವಚ್ಛ, ಸುಂದರ ಹಾಗೂ ಮಾದರಿ ನಗರವಾಗಿ ರೂಪುಗೊಳ್ಳಲಿ ಎಂದು ಆಶಿಸಿದ್ದಾರೆ.