ಕರ್ನಾಟಕ ರಾಜ್ಯ ಭೀಮ್ ಸೇನೆ ವತಿಯಿಂದ ನಗರದ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
Published on:
Copied
Follow Us
ನಗರದ ಬಸವನಗುಡಿ ಉದ್ಯಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಭೀಮ್ ಸೇನೆ ವತಿಯಿಂದ ನಗರದ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಇದೇ ಉದ್ಯಾನದಲ್ಲಿ ಕುವೆಂಪು ಪುತ್ಥಳಿ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡಿರುವ ಪಾಲಿಕೆ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಕುರಿತು ತಾರತಮ್ಯ ಅನುಸರಿಸುತ್ತಿದೆ. ಜತೆಗೆ ನಗರದಲ್ಲಿ ಹಲವೆಡೆ ಅನುಮತಿ ರಹಿತವಾಗಿ ಹಲವು ಪ್ರತಿಮೆ ಸ್ಥಾಪಿಸಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಇವುಗಳನ್ನು ಸಹ ತೆರವುಗೊಳಿಸಬೇಕು. ತಾರತಮ್ಯ ನೀತಿ ಅನುಸರಿಸದೆ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳು ಇಲ್ಲದ ಕಾರಣ ಪಾಲಿಕೆಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಕ್ಕೆ ಜಡತ್ವ ಹಿಡಿದಿದೆ. ಎಲ್ಲ ವಲಯಗಳಲ್ಲಿಯೂ ಕೇವಲ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕೇಂದ್ರ ಸರ್ಕಾರ ಸಹ ಇಂಧನ ದರ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ದೊಡ್ಡ ಪ್ರಹಾರ ಮಾಡಿದೆ. ಕೂಡಲೇ ಏರಿಸಿರುವ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಎಚ್.ಧರ್ಮರಾಜ, ಎಸ್.ಸರ್ವೇಶ್, ಕಿರಣ್, ಸಿದ್ದರಾಜು, ಮಲ್ಲೇಶ್, ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.