ಮೈಸೂರಿನಲ್ಲಿ ಮೇಳೈಸಿದ ಕನ್ನಡ ಕಂಪು

ಪಥಸಂಚಲನ
Published on
ಮೈಸೂರು: ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರಿನ ಓವೆಲ್ ಮೈದಾನದಲ್ಲಿ ಶನಿವಾರ ಕನ್ನಡ ಕಂಪು ಮೇಳೈಸಿತ್ತು.
ಜಿಲ್ಲಾಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡದೇವಿಯ ಮೆರವಣಿಗೆ, ಹಾರಾಡಿದ ಕನ್ನಡ ಬಾವುಟಗಳು, ಆಕರ್ಷಕ ಪಥಸಂಚಲನ ಮೆರುಗು ನೀಡುವ ಮೂಲಕ ಪಸರಿಸಿತು.
‘ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕವಿವಾಣಿಯಂತೆ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲ ಮಹನೀಯರನ್ನೂ ಸ್ಮರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅರಮನೆ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕನ್ನಡಾಂಬೆಯ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದವು.
ಮೆರವಣಿಗೆ ಕೆ.ಆರ್.ವೃತ್ತ, ಡಿ.ದೇವರಾಜ ಅರಸು ಮೂಲಕ ಓವೆಲ್ ಮೈದಾನಕ್ಕೆ ಆಗಮಿಸಿದ ಬಳಿಕ ಸಭಾ ಕಾರ್ಯಕ್ರಮ ಶುರುವಾಯಿತು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿದ ಬಳಿಕ ಪೊಲೀಸ್ ಬ್ಯಾಂಡ್‌ನಿಂದ ರಾಷ್ಟ್ರಗೀತೆ ಮತ್ತು ನಾಡಗೀತೆಯು ಮೊಳಗಿತು.
ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ನಾಗರಿಕ ಪಡೆ, ಮಹಿಳಾ ಪೊಲೀಸ್ ಪಡೆ, ಅಶ್ವರೋಹಿ ದಳ, ಅಗ್ನಿಶಾಮಕ ದಳ, ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ವಿವಿಧ ಶಾಲಾ ಮಕ್ಕಳ ಪಥಸಂಚಲನ ಗಮನ ಸೆಳೆಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ 100 ಜನರನ್ನು ಸನ್ಮಾನಿಸಲಾಯಿತು.

‘ಬೌದ್ಧರುದ್ಯಾನ’ ಸೇರಿಸಲು ಆಗ್ರಹ:

ಕೈಬಿಟ್ಟಿರುವ ‘ಬೌದ್ಧರುದ್ಯಾನ’ ಪದವನ್ನು ನಾಡಗೀತೆಯಲ್ಲಿ ಮರು ಸೇರ್ಪಡೆ ಮಾಡಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಬಹಿರಂಗವಾಗಿ ಘೋಷಣೆ ಕೂಗುವ ಮೂಲಕ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net