ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ : 120 ಜೋಡಿ ಭಾಗವಹಿಸುವ ನಿರೀಕ್ಷೆ

ಕಂಬಳದ ಸಾಂದರ್ಭಿಕ ಚಿತ್ರ
ಕಂಬಳದ ಸಾಂದರ್ಭಿಕ ಚಿತ್ರ
Published on
ಮೈಸೂರು: ಮೈಸೂರು ದಸರಾ ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಕಂಬಳ ಆಯೋಜಿಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದ್ದು, ಕಂಬಳದಲ್ಲಿ 120 ಜೋಡಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಕಂಬಳವನ್ನು ಯಶಸ್ವಿಯಾಗಿ ಆಯೋಜಿಸಲು ಈಗಾಗಲೇ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಕಂಬಳವನ್ನು ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ಸರಿಯಾದ ಸ್ಥಳ ಹಾಗೂ ಸಮಯದ ಕೊರತೆಯಿಂದ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಮೂರು ತಿಂಗಳ ಮೊದಲೇ ಕಂಬಳಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಕಂಬಳ ಈ ಬಾರಿ ಎಲ್ಲರನ್ನು ಆಕರ್ಷಿಸಲಿದೆ.
ಕಂಬಳ ಆಯೋಜನೆಗೆ ವಿಜಯನಗರದ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿ, ಸಾತಗಳ್ಳಿ ರಿಂಗ್ ರೋಡ್ ರಸ್ತೆಯ ಬಳಿ ಸ್ಥಳ ಗುರುತಿಸಲಾಗಿದ್ದು, ಈ ಪೈಕಿ ಒಂದು ಸ್ಥಳವನ್ನು ಜಿಲ್ಲಾಡಳಿತ ಸದ್ಯದಲ್ಲಿಯೇ ಅಂತಿಮಗೊಳಿಸಲಿದೆ. ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಸ್ಥಳ ಬೇಕಿದ್ದು, ಸ್ಥಳ ಆಯ್ಕೆ ಮಾಡುವಾಗ ಪಾರ್ಕಿಂಗ್ ವ್ಯವಸ್ಥೆ, ವೀಕ್ಷಕರ ಗ್ಯಾಲರಿ, ಕೋಣಗಳು ಹಾಗೂ ಆಯೋಜಕರು ಉಳಿದುಕೊಳ್ಳಲು ಬೇಕಿರುವ ಸ್ಥಳವನ್ನು ನೋಡಿ ಆಯ್ಕೆ ಮಾಡಲಾಗುವುದು.
ಕಂಬಳ ಆಯೋಜನೆಗೆ 5 ಕೋಟಿ ರೂ.ಗಳ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. ಕಂಬಳವನ್ನು 2 ಸಮಾನಂತರ ಸ್ಥಳದಲ್ಲಿ 16 ಸುತ್ತುಗಳಲ್ಲಿ ಆಯೋಜಿಸಲಾಗುವುದು. ಕಂಬಳ ನಡೆಸುವ ಅಂಗಳವು 250 ಮೀಟರ್ ಉದ್ದ, 50 ಮೀಟರ್ ಅಗಲವನ್ನು ಹೊಂದಿರಲಿ ದೆ. ಕಂಬಳವನ್ನು ವೀಕ್ಷಿಸಲು ವೀಕ್ಷಕ ಗ್ಯಾಲರಿ ಸ್ಥಳದಲ್ಲಿ ನಿರ್ಮಾಣಗೊಳ್ಳಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಈ ಬಾರಿಯ ದಸರಾ ಉತ್ಸವಕ್ಕೆ ಕಂಬಳ ಪ್ರಮುಖ ಆಕರ್ಷಣೆ ಆಗಲಿದೆ. ಈಗಾಗಲೇ ಎರಡು ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಒಂದು ಸ್ಥಳವನ್ನು ಸದ್ಯದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net