ಶ್ರೀ ಯೋಗಿ ನಾರೇಯಣ ಯತೀಂದ್ರರ ಪ್ರಚಾರ ಸಭಾ ಪ್ರಧಾನ ಸಂಚಾಲಕ ಎಚ್.ಎ.ವೆಂಕಟೇಶ್ ಬಣ್ಣನೆ
ಕೈವಾರ ತಾತಯ್ಯ ಅವರ 300ನೇ ವರ್ಷದ ಜಯಂತಿ
ಮೈಸೂರು: ಕೈವಾರ ತಾತಯ್ಯ ಅವರು ಈ ನಾಡು ಕಂಡ ಅಪರೂಪದ ಸಂತರು, ಸಮಾಜ ಸುಧಾರಕರು, ಮಹಾನ್ ಜ್ಞಾನಿಗಳು, ಯೋಗಿಗಳು, ಸಿದ್ಧಪುರುಷರು ಹಾಗೂ ತ್ರಿಕಾಲ ಜ್ಞಾನಿಗಳು. ಶಾಂತ ಸ್ವಭಾವ, ಪ್ರೀತಿ, ಸರಳ ಬದುಕನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಎಂದು ಶ್ರೀಯೋಗಿ ನಾರೇಯಣ ಯತೀಂದ್ರರ ಪ್ರಚಾರ ಸಭಾ ಪ್ರಧಾನ ಸಂಚಾಲಕ, ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಬಣ್ಣಿಸಿದರು.
ಸರಸ್ವತಿಪುರಂನಲ್ಲಿರುವ ಬಣಜಿಗ (ಬಲಿಜ) ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೈವಾರ ತಾತಯ್ಯ ಅವರ 300ನೇ ವರ್ಷದ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸದಾ ಭಕ್ತಿ, ಭಜನೆ, ಧ್ಯಾನ ಮತ್ತು ಉಪದೇಶಗಳ ಮೂಲಕ ಅಂತರಂಗ ಶುದ್ಧಿಗೆ ಒತ್ತು ಕೊಟ್ಟರು. ಕೈವಾರ ನಾರೇಯಣ ಅವರು ಬಳೆ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಾ ಮಕ್ಕಳನ್ನು ಪಡೆದು, ನಂತರ ದಿನಗಳಲ್ಲಿ ಸಂಸಾರ ತ್ಯಜಿಸಿ ಸನ್ಯಾಸ ಸ್ವೀಕರಿಸಿ, ಸಮಾಜವನ್ನು ಆಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡರು. ನಿಜಕ್ಕೂ ತಾತಯ್ಯ ಅವರ ಜೀವನ ಒಂದು ಅದ್ಭುತ ಪವಾಡ ಎಂದರು.
ಸಂಸಾರ ಜೀವನದಲ್ಲಿ ಬಳೆಗಾರ ವೃತ್ತಿಯಲ್ಲಿ ನಿರತರಾಗಿದ್ದ ತಾತಯ್ಯ ಅವರು ಯೋಗಿ ಬಾಳಿನಲ್ಲಿ ಕವಿಯಾಗಿ, ಸಮಾಜಮುಖಿ ಚಿಂತಕರಾಗಿ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಿದ ಹರಿಕಾರನಾಗಿ ಕೈವಾರ ನಾರೇಯಣಪ್ಪ ಸಾರ್ಥಕತೆಯನ್ನು ಕಂಡಿದ್ದಾರೆ.
ಕಾಲಜ್ಞಾನ, ನಾರೇಯಣ ಕವಿ ಶತಕ, ಸೂಕ್ಷ್ಮ ಭೀಮಲಿಂಗ ಮತ್ತು ಪ್ರಪಂಚ ನಾರೇಯಣ ಕವಿ ಪದ್ಯಗಳು ತಾತಯ್ಯ ಅವರು ಬರೆದಿರುವ ಪ್ರಮುಖ ಕೃತಿಗಳು ಎಂದು ಹೇಳಿದರು.
ಸಾಹಿತ್ಯ, ವಿಜ್ಞಾನ, ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಆಧ್ಯಾತ್ಮಿಕಗಳೆಲ್ಲದರ ಸಮ ಹಿತ ಮಿಶ್ರಣವಿರುವ ತಾತಯ್ಯ ಅವರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಅನ್ವಯಗೊಳ್ಳುವ ಗುಣ ಹೊಂದಿವೆ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಎಂ.ನಾರಾಯಣ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ, ಖಜಾಂಚಿ ಕೆ.ಚಂದ್ರಶೇಖರ್, ನಿರ್ದೇಶಕರಾದ ಬಿ.ಕೆ.ಸುರೇಶ್, ಟಿ.ಎಸ್.ರಮೇಶ್, ಎ.ಚನ್ನಕೇಶವ, ನಿವೃತ್ತ ಶಿಕ್ಷಕ ರಮೇಶ್, ಮಂಜುನಾಥ್, ವ್ಯವಸ್ಥಾಪಕ ಎಚ್. ಆರ್.ವೆಂಕಟೇಶ್, ನಿಲಯ ಪಾಲಕ ರಾಮಕೃಷ್ಣಯ್ಯ ಭಾಗವಹಿಸಿದ್ದರು.