ಕೆ-ಜಿಐಎಸ್ ಪೋರ್ಟಲ್ ಮಾಹಿತಿ ಕಣಜ

ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎನ್.ಎಲ್.ರಾಜೇಶ್, ಡಾ.ಪಿ.ಶಿವರಾಜು, ರವಿಶಂಕರ್, ಸಿ.ಮಲ್ಲಿಕ್, ಕೆ.ಎಸ್.ಸುಂದರ್ ರಾಜ್, ಪ್ರಭುಸ್ವಾಮಿ, ಸವಿತಾ ಇದ್ದರು.
ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎನ್.ಎಲ್.ರಾಜೇಶ್, ಡಾ.ಪಿ.ಶಿವರಾಜು, ರವಿಶಂಕರ್, ಸಿ.ಮಲ್ಲಿಕ್, ಕೆ.ಎಸ್.ಸುಂದರ್ ರಾಜ್, ಪ್ರಭುಸ್ವಾಮಿ, ಸವಿತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಡಾ.ಎನ್.ಎಲ್.ರಾಜೇಶ್ ಹೇಳಿಕೆ
ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ ಎಂದು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ನಿರ್ದೇಶಕ ಡಾ.ಎನ್.ಎಲ್.ರಾಜೇಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ಥಳೀಯ ಆಡಳಿತಕ್ಕಾಗಿ ಜಿಐಎಸ್ ಆಧಾರಿತ ಮಾಹಿತಿಯನ್ನು ತಲುಪಿಸುವ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆ-ಜಿಐಎಸ್ ಆವೃತ್ತಿ 1.0 ಅನ್ನು 2016ರಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಸುಮಾರು 600 ಜಿಐಎಸ್ ಪದರಗಳು ಮತ್ತು 20 ಲಕ್ಷ ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಕೆ-ಜಿಐಎಸ್ ಪೋರ್ಟಲ್‌ನಲ್ಲಿ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ತಂತ್ರಜ್ಞಾನವನ್ನು ಕೆಎಸ್‌ಆರ್‌ಎಸ್‌ಎಸಿ ಕೇಂದ್ರವು ಅಭಿವೃದ್ಧಿಪಡಿಸಿದೆ. ಇದರಲ್ಲಿ 41 ಮೊಬೈಲ್ ಅನ್ವಯಿಕೆಗಳು ಮತ್ತು 60 ವೆಬ್ ಅನ್ವಯಿಕೆಗಳು ಲಭ್ಯವಿದ್ದು, ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ದಿಶಾಂಕ್ ಆ್ಯಪ್‌ನಲ್ಲಿ ಯಾವ ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ಎರಡು ಮೂರು ದಿನಗಳ ಮುಂಚೆ ಹವಾಮಾನದ ವರದಿಯನ್ನು ನಿರ್ದಿಷ್ಟ ಆ್ಯಪ್ ಮೂಲಕ ಪಡೆಯಬಹುದಾಗಿದೆ. 2016ರಲ್ಲಿ ಕೆಜಿಐಎಸ್ 1.0 ಜಾರಿಗೆ ತರಲಾಗಿತ್ತು. 2024ರಲ್ಲಿ
ಕೆಜಿಐಎಸ್ 2.0 ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಗೋಲ್ಡ್ ಅವಾರ್ಡ್ ದೊರೆತಿದೆ ಎಂದು ಮಾಹಿತಿ ನೀಡಿದರು.
ಕೆ-ಜಿಐಎಸ್ ಯೋಜನೆಗೆ 2024 ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿಯು ಕೇಂದ್ರಕ್ಕೆ ಲಭಿಸಿರುವುದನ್ನು ಉಲ್ಲೇಖಿಸಿದರು. ಪ್ರತಿ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ತನ್ನದೇ ಆದ ವೈಶಿಷ್ಟ್ಯಗಳ ಜತೆಗೆ ಸ್ಥಳೀಯ ಸಮಸ್ಯೆ ಹೊಂದಿದ್ದು, ಈ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರವನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದುತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ತಾಂತ್ರಿಕತೆಗೆ ಎಐ ತಂತ್ರಜ್ಞಾನ ಬಂದು ಆವರಿಸಿಕೊಳ್ಳುತ್ತಿದೆ. ಕೆಎಸ್‌ಆರ್‌ಎಸ್‌ಎ ಸಿ ಮಾಡಿಕೊಟ್ಟಿರುವ ಅಪ್ಲಿಕೇಶನ್‌ಗಳು ಕರಾರುವಕ್ಕಾಗಿ ಇವೆ. ಈ ಅಪ್ಲಿಕೇಶನ್‌ಗಳು ಸುರಕ್ಷಿತವಾಗಿವೆ. ನೀವು ಈ ಕೇಂದ್ರಕ್ಕೆ ಭೇಟಿ ನೀಡಿ ಜ್ಞಾನವನ್ನು ಪಡೆದುಕೊಳ್ಳಿ. ಈ ಸಂಸ್ಥೆ ಇಂದಿಗೂ ನಂ ಒನ್ ಸ್ಥಾನವನ್ನು ಉಳಿಸಿಕೊಂಡಿದೆ ಎಂದರು.
ಸಿಸಿಎಫ್ ರವಿಶಂಕರ್ ಮಾತನಾಡಿ, ದಿಶಾಂಕ್ ಆ್ಯಪ್‌ನಲ್ಲಿ ಭೂಮಿಯ ಮಾಲೀಕತ್ವ ತಿಳಿಯಬಹುದಾಗಿದೆ. ಅರಣ್ಯ ಇಲಾಖೆಯ ವಿಷಯಕ್ಕೆ ಬಂದಾಗ ನಮ್ಮ ಇಲಾಖೆಯ ಭೂಮಿಯ ಸಮಸ್ಯೆ ಬಂದಾಗ ನಾವು ಈ ಕೇಂದ್ರವನ್ನು ಸಂಪರ್ಕಿಸುತ್ತೇವೆ. ಈ ಸಂಸ್ಥೆಯು ನಮ್ಮ ಇಲಾಖೆಯ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಉಪ ಪೊಲೀಸ್ ಅಧೀಕ್ಷಕ ಸಿ.ಮಲ್ಲಿಕ್ ಮಾತನಾಡಿ, ನಾವು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಸಿಗ್ನಲ್‌ಗಳಲ್ಲಿ ಅಳವಡಿಸಿರುವ ತಂತ್ರಜ್ಞಾನದಿಂದ ರಸ್ತೆ ನಿಯಮಗಳನ್ನು ಮೀರಿದರೆ ಸಂಬಂಧಿಸಿದ ವಾಹನ ಮಾಲೀಕರಿಗೆ ತಾನಾಗಿಯೇ ದಂಡ ಬೀಳುತ್ತದೆ. ಸಿಗ್ನಲ್‌ಗಳು ತಂತ್ರಜ್ಞಾನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಅರಣ್ಯ ಅಂಚಿನ ಜಾಗಗಳಲ್ಲಿ ಭೂಮಿಯ ವ್ಯಾಪ್ತಿ ಗುರುತಿಸುವುದು ಒಂದು ಸಮಸ್ಯೆಯಾಗಿದ್ದು ಈ ಸಂಸ್ಥೆ ಆ್ಯಪ್ ಸಿದ್ಧಪಡಿಸಿರುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಪೊಲೀಸ್ ಆಯುಕ್ತ ಕೆ.ಎಸ್.ಸುಂದರ್ ರಾಜ್, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸವಿತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net