ಮಾರಿಷಸ್‌ನಲ್ಲಿ ಜೆಎಸ್‌ಎಸ್ ಸ್ಕೂಲ್ ಆಫ್ ಮೆಡಿಸಿನ್ ಆರಂಭ

ಮಾರಿಷಸ್‌ನಲ್ಲಿ ಜೆಎಸ್‌ಎಸ್ ಸ್ಕೂಲ್ ಆಫ್ ಮೆಡಿಸಿನ್ ಅನ್ನು ಮಾರಿಷಸ್ ಅಧ್ಯಕ್ಷ ಧರ್ಮಬೀರ್ ಗೋಖೂಲ್ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಬಿ.ಸುರೇಶ್, ಅನಿಲ್‌ಕುಮಾರ್ ಬಚೂ, ಡಾ.ಕವಿರಾಜ್ ಶರ್ಮಾ ಸುಕೋನ್, ಬೃಂದಾ ಗೋಖೂಲ್ ಇನ್ನಿತರರಿದ್ದರು.
ಮಾರಿಷಸ್‌ನಲ್ಲಿ ಜೆಎಸ್‌ಎಸ್ ಸ್ಕೂಲ್ ಆಫ್ ಮೆಡಿಸಿನ್ ಅನ್ನು ಮಾರಿಷಸ್ ಅಧ್ಯಕ್ಷ ಧರ್ಮಬೀರ್ ಗೋಖೂಲ್ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಬಿ.ಸುರೇಶ್, ಅನಿಲ್‌ಕುಮಾರ್ ಬಚೂ, ಡಾ.ಕವಿರಾಜ್ ಶರ್ಮಾ ಸುಕೋನ್, ಬೃಂದಾ ಗೋಖೂಲ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾರಿಷಸ್‌ನಲ್ಲಿ ಆರೋಗ್ಯ ರಕ್ಷಣೆಯ ಶ್ರೇಷ್ಠತೆ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಬಲವಾದ ಅಡಿಪಾಯ
  • ಜೆಎಸ್‌ಎಸ್ ಎಎಚ್‌ಇಆರ್ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆ ಹೊಂದಿರುವ ಅಂತಾರಾಷ್ಟ್ರೀಯ ಮಾನದಂಡವನ್ನು ಹೊಂದಿರುವ ಸಂಸ್ಥೆ
ಮೈಸೂರು: ಮಾರಿಷಸ್‌ನಲ್ಲಿ ಜೆಎಸ್‌ಎಸ್ ಸಂಸ್ಥೆ ವೈದ್ಯಕೀಯ ಶಾಲೆ ಸ್ಥಾಪಿಸಿರುವುದರಿಂದ ದೇಶದ ಆರೋಗ್ಯ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪನೆಯಾದಂತಾಗಿದೆ ಎಂದು ಮಾರಿಷಸ್ ಅಧ್ಯಕ್ಷ ಧರ್ಮಬೀರ್ ಗೋಖೂಲ್ ಅಭಿಪ್ರಾಯಪಟ್ಟರು.
ಮಾರಿಷಸ್‌ನಲ್ಲಿ ಇತ್ತೀಚೆಗೆ ಆರಂಭಿಸಿರುವ ಜೆಎಸ್‌ಎಸ್ ಸ್ಕೂಲ್ ಆಫ್ ಮೆಡಿಸಿನ್ ಉದ್ಘಾಟಿಸಿ ಮಾತನಾಡಿ, ಇಂತಹ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಆರೋಗ್ಯ ರಕ್ಷಣಾ ಸಾಮರ್ಥ್ಯ ಜತೆಗೆ ಭಾರತ ಮತ್ತು ಮಾರಿಷಸ್ ದೇಶಗಳ ಶೈಕ್ಷಣಿಕ ಸಂಬಂಧ ಬಲಪಡಿಸುತ್ತವೆ. 
ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾರಂಭವು  ಶೈಕ್ಷಣಿಕ ಮೈಲಿಗಲ್ಲು ಮಾತ್ರವಲ್ಲ. ಇದು ಮಾರಿಷಸ್‌ನಲ್ಲಿ ಆರೋಗ್ಯ ರಕ್ಷಣೆಯ ಶ್ರೇಷ್ಠತೆ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕುತ್ತದೆ ಎಂದು ಹೇಳಿದರು. 
ಭಾರತ-ಮಾರಿಷಸ್ ಸಂಬಂಧ ಬಲಪಡಿಸಲು ಮಾರಿಷಸ್‌ನಲ್ಲಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಪ್ರಯಾಣವು 2002ರಲ್ಲಿ ಪ್ರಾರಂಭಿಸಲಾಯಿತು. ಈಗ ವೈದ್ಯಕೀಯ ಶಾಲೆ ಪ್ರಾರಂಭವಾಗುತ್ತಿರುವುದು ಎರಡೂ ದೇಶಗಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಕಲ್ಯಾಣ ಸಚಿವ ಅನಿಲ್‌ಕುಮಾರ್ ಬಚೂ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಯು ಮಾರಿಷಸ್‌ನಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಿರುವುದು ಭವಿಷ್ಯದಲ್ಲಿ ದೇಶದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಸಹಕಾರಿಯಾಗಲಿದೆ. ವಿಶೇಷವಾಗಿ ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಮುಂಬರುವ ಆರೋಗ್ಯದ ಸವಾಲು ಪರಿಹರಿಸುವಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನಾ ಸಚಿವ ಡಾ.ಕವಿರಾಜ್ ಶರ್ಮಾ ಸುಕೋನ್ ಮಾತನಾಡಿ, ಈಗ ಆರಂಭಿಸಿರುವ ಕೋರ್ಸ್ ಅಂತಾರಾಷ್ಟ್ರೀಯ ಶಿಕ್ಷಣ ಕೇಂದ್ರವಾಗಿರುವ ಮಾರಿಷಸ್‌ನ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಜೆಎಸ್‌ಎಸ್ ಎಎಚ್‌ಇಆರ್ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆ ಹೊಂದಿರುವ ಅಂತಾರಾಷ್ಟ್ರೀಯ ಮಾನದಂಡವನ್ನು ಹೊಂದಿರುವ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.
ಮಾರಿಷಸ್‌ನ ಭಾರತದ ಹೈಕಮಿಷನರ್ ಅನುರಾಗ್ ಶ್ರೀವಾಸ್ತವ ಮಾತನಾಡಿ, ಮಾರಿಷಸ್‌ನಲ್ಲಿ ಜೆಎಸ್‌ಎಸ್ ಸಂಸ್ಥೆಯ ವೈದ್ಯಕೀಯ ಕಾಲೇಜಿನ ಸ್ಥಾಪನೆಯು ಎರಡೂ ದೇಶಗಳ ನಡುವಿನ ಆಳವಾಗಿ ಬೇರೂರಿರುವ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಶೈಕ್ಷಣಿಕ ಸಹಯೋಗ ಭಾರತದ ಹೈಕಮಿಷನ್‌ನ ನಿರಂತರ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ಜೆಎಸ್‌ಎಸ್ ಎಎಚ್‌ಇಆರ್ ಮಾರಿಷಸ್ ವಿಷನ್-2035 ಸಂಚಿಕೆಯನ್ನು ಬಿಡುಗೊಳಿಸಲಾಯಿತು. ಮಾರಿಷಸ್ ಜೆಎಸ್‌ಎಸ್ ಎಎಚ್‌ಇಆರ್‌ನ ಕುಲಪತಿ ಡಾ.ಪ್ರವೀಣ್ ಮೊಹದೇಬ್, ಕುಲಸಚಿವ ಕೆ.ಪಿ.ನವೀನ್, ಡಾ.ಸಿ.ಜಿ.ಬೆಟಸೂರಮಠ, ಡಾ.ಬಿ.ಸುರೇಶ್ ಮಾತನಾಡಿದರು. ಬೃಂದಾ ಗೋಖೂಲ್, ಎಸ್.ಪಿ.ಮಂಜುನಾಥ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net