ಅಕ್ಷರ, ಅನ್ನ ದಾಸೋಹಕ್ಕೆ ಜೆಎಸ್‌ಎಸ್ ಸಂಸ್ಥೆ ಕೊಡುಗೆ ಅಪಾರ
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಭೆಯನ್ನು ಶಿವಮೊಗ್ಗದ ಪಿಇಎಸ್ ಟ್ರಸ್ಟ್ ಸಿಇಒ ಎಸ್.ವೈ. ಉಮಾದೇವಿ ಉದ್ಘಾಟಿಸಿದರು. ಡಾ.ಎಚ್.ಎಂ. ಕಲಾಶ್ರೀ, ಎಂ.ಎನ್.ಸುಮನಾ, ಜೆ.ಪಿ.ಸುಷ್ಮಾ, ಸಿಂಧೂರ ಗಂಗಾಧರ, ಡಾ. ರೇಚಣ್ಣ, ಪ್ರೊ.ಮೊರಬದ ಮಲ್ಲಿಕಾರ್ಜುನ ಇದ್ದರು.
ಮೈಸೂರು: ಜೆಎಸ್‌ಎಸ್ ಸಂಸ್ಥೆ ಅಕ್ಷರ ಮತ್ತು ಅನ್ನ ದಾಸೋಹಕ್ಕೆ ಗುರುತರವಾದ ಕೊಡುಗೆ ನೀಡಿದೆ ಎಂದು ಶಿವಮೊಗ್ಗದ ಪಿಇಎಸ್ ಟ್ರಸ್ಟ್ ಸಿಇಒ ಎಸ್.ವೈ. ಉಮಾದೇವಿ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶನಿವಾರ ಹಿರಿಯ ವಿದ್ಯಾರ್ಥಿನಿಯರ ಸಭೆ ಉದ್ಘಾಟಿಸಿ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಹೆಣ್ಣು ಮಕ್ಕಳಿಗೆ ವಸತಿ ನಿಲಯ ಒದಗಿಸುವುದರ ಜತೆಗೆ ವಿದ್ಯಾವಂತರಾಗಲು ಈ ಕಾಲೇಜು ಶ್ರಮಿಸುತ್ತಿದೆ. ಸಮಾಜದಲ್ಲಿ ಗುರುತರ ಸ್ಥಾನ ಹೊಂದಲು ಕಾಲೇಜು ಸಹಕಾರಿಯಾಗಿದೆ. ನಾನು ಓದಿದ ಈ ಕಾಲೇಜು ನನ್ನ ಜೀವನದಲ್ಲಿ ಬಹಳಷ್ಟು ಅವಕಾಶಗಳನ್ನು ನೀಡಿತು ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ. ಕಲಾಶ್ರೀ ಮಾತನಾಡಿ, ನಾನು ಈ ಕಾಲೇಜಿನ ಹಿರಿಯ ವಿದ್ಯಾರ್ಥಿ ಎನ್ನಲು ಹೆಮ್ಮೆಯಾಗುತ್ತಿದೆ. ಗುರು ಮತ್ತು ಶಿಷ್ಯರ ಪರಂಪರೆಯನ್ನು ಈ ಮಹಿಳಾ ಕಾಲೇಜು ಕಲಿಸಿದೆ ಎಂದು ಹೇಳಿದರು.
ಹಿರಿಯ ವಕೀಲೆ ಎಂ.ಎನ್.ಸುಮನಾ, ಕೆಎಎಸ್ ಅಧಿಕಾರಿ ಜೆ.ಪಿ.ಸುಷ್ಮಾ, ಪತ್ರಕರ್ತೆ ಸಿಂಧೂರ ಗಂಗಾಧರ, ಪ್ರಾಚಾರ್ಯ ಡಾ. ರೇಚಣ್ಣ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.